ಬೆಂಗಳೂರಿನ ಮಳೆಹಾನಿ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಲಿರುವ ಸಿಎಂ ಬೊಮ್ಮಾಯಿ
ಬೆಂಗಳೂರು, ಆಗಸ್ಟ್ 31: ಗುರುವಾರ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಲಿದ್ದೇನೆ. ಅಧಿಕಾರಿಗಳ ಜೊತೆ ಸ್ಥಳ ಪರೀಶಲನೆ ಮಾಡಿ ಸಮಸ್ಯೆಯನ್ನು ಬಗೆಹರಿಸಲು ಸ್ಥಳದಲ್ಲೇ ಸೂಚನೆ ನೀಡುತ್ತೇನೆ. ರಾಜಕಾಲುವೆ ನಿರ್ಮಾಣ ಕಾರ್ಯಕ್ಕೆ ಈಗಾಗಲೇ 1,500 ಕೋಟಿ ರುಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅತಿವೃಷ್ಟಿ, ಪ್ರವಾಹ ಕುರಿತಂತೆ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ಸಭೆಯ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ, "ಬೆಂಗಳೂರಿನಲ್ಲಿ ಕಳೆದ ಒಂದು ವಾರಗಳಿಂದ ಸತತ ಮಳೆಯಾಗಿದ್ದು, ಹಲವು ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ಮಹದೇವಪುರ ಮತ್ತು ಬೊಮ್ಮನಹಳ್ಳಿ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಹಾನಿಯಾಗಿದೆ," ಎಂದು ಹೇಳಿದರು.
ಒಆರ್ ಆರ್ ಮೇಲೆ ನೀರು ನಿಂತು, ಕೆಳಗಿನ ಬಡಾವಣೆಗಳಿಗೆ ನೀರು ನುಗ್ಗಿ ಸಾಕಷ್ಟು ತೊಂದರೆಯಾಗಿದೆ. ಎಲ್ಲಾ ವಿಚಾರಗಳನ್ನು ಇಂದಿನ ಸಭೆಯಲ್ಲಿ ಸಂಪೂರ್ಣವಾಗಿ ಪರಿಶೀಲನೆ ಮಾಡಲಾಗಿದೆ. ಮಹದೇವಪರದಲ್ಲಿ 9 ಕಡೆ, ಬೊಮ್ಮನಹಳ್ಳಿಯ 11 ಕಡೆಗಳಲ್ಲಿ ಬಹಳಷ್ಟು ತೊಂದರೆಯಾಗಿರುವುದು ತಿಳಿದುಬಂದಿದೆ ಎಂದರು.

ಚರಂಡಿ ವ್ಯವಸ್ಥೆ ಸರಿ ಮಾಡಲು ಸೂಚನೆ
ಸವಳಲು ಕೆರೆ ತುಂಬಿ ಹರಿದು ಸಾಕಷ್ಟು ಸಮಸ್ಯೆಯಾಗಿದೆ. ಮುಖ್ಯ ಕಾಲುವೆ ಒಂದು ಕಡೆ ಬ್ಲಾಕ್ ಆಗಿದೆ. ಮತ್ತೊಂದು ಕಡೆ ಕಾಲುವೆ ಚಿಕ್ಕದಾಗಿರುವುದರಿಂದ ರಸ್ತೆಗಳಿಗೆ ನೀರು ನುಗ್ಗಿದೆ. ನೀರು ಸರಾಗವಾಗಿ ಹರಿಯಲು ತಡೆಯುಂಟು ಮಾಡುವ ಎಲ್ಲವನ್ನು ತೆರವುಗೊಳಿಸಲು ಸೂಚನೆ ನೀಡಿದ್ದೇನೆ. ಎಲ್ಲೆಲ್ಲಿ ಪೈಪ್‌ಲೈನ್ ಅಳವಡಿಕೆ ಮಾಡಬೇಕು ಎಂದು ಗುರುತಿಸಲಾಗುವುದು, ಒಆರ್ ಆರ್ ರಸ್ತೆಯಲ್ಲಿ ನಿಂತಿರುವ ನೀರನ್ನು ಖಾಲಿ ಮಾಡಲು ಸೂಚನೆ ನೀಡಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕೆಲವು ಬಡಾವಣೆಗಳಲ್ಲಿ ನೀರು ನುಗ್ಗಿದೆ, ಕೆಲವು ಪ್ರದೇಶಗಳಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲ. ಲೇಔಟ್ ನಿರ್ಮಾಣ ಮಾಡಿದವರು ಸೂಕ್ತ ಡ್ರೈನ್ ವ್ಯವಸ್ಥೆ ಮಾಡದ ಕಾರಣ ನೀರು ನುಗ್ಗಿದೆ. ಡ್ರೈನ್ ವ್ಯವಸ್ಥೆಯನ್ನು ಸರಿ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ರಾಜಕಾಲುವೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಮುಕ್ತಾಯ
ರಾಜಕಾಲುವೆ ಮತ್ತು ಎಲ್ಲಾ ಚರಂಡಿಗಳನ್ನು ಸ್ವಚ್ಛಗೊಳಿಸಲು ಸೂಚನೆ ನೀಡಲಾಗಿದೆ. ಇನ್ನೂ ಎರಡು ಮೂರು ಕಡೆ ಡ್ರೈನ್ ಔಟ್ ಮಾಡುವ ಕೆಲಸ ಇದೆ ಅದನ್ನೂ ಮಾಡುವಂತೆ ಸೂಚನೆ ನೀಡಿದ್ದೇನೆ. 120ಕ್ಕಿಂತ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ, ಅವರಿಗೆ ಪರಿಹಾರ ಕೊಡಲು ಕಂದಾಯ ಸಚಿವ ಆರ್. ಅಶೋಕ್ ಎಲ್ಲಾ ತಯಾರಿ ಮಾಡಿದ್ದಾರೆ ಎಂದರು.
ರಾಜಕಾಲುವೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದ್ದು, ಅವುಗಳ ಕಾಮಗಾರಿ ಕೈಗೊಳ್ಳಲು ಮಳೆಯಿಂದ ಸಮಸ್ಯೆಯಾಗಿದೆ. ಕಳೆದ ಆರು ತಿಂಗಳಿನಿಂದ ಮಳೆಯಾಗುತ್ತಿದೆ. ಕಳೆದ ಮೂರು ತಿಂಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಈ ವಾರ ಅತಿ ಹೆಚ್ಚು ಮಳೆ ಬಂದಿದ್ದರಿಂದ ಎಲ್ಲಾ ಕೆರೆ ಕಟ್ಟೆಗಳು ತುಂಬಿದ್ದು, ಕೆರೆಗಳ ನೀರು ಮತ್ತು ಮಳೆ ನೀರು ಸೇರಿ ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾಗಿದೆ. ಹಿಂದೆಂದೂ ಕೂಡ ಇಂತಹ ಪರಿಸ್ಥಿತಿ ಬಂದಿರಲಿಲ್ಲ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಕೆರೆಗಳು ತುಂಬಿದ್ದರಿಂದ ಈ ಬಾರಿ ಸಮಸ್ಯೆ
ಕಳೆದ ಬಾರಿ ಯಲಹಂಕ, ಮಲ್ಲೇಶ್ವರಂ ಭಾಗದಲ್ಲಿ ತೊಂದರೆಯಾಗಿತ್ತು. ಅಲ್ಲಿ ರಾಜಕಾಲುವೆಗಳು, ಚರಂಡಿ ಸ್ವಚ್ಛ ಮಾಡಿದ್ದರಿಂದ ಈ ಬಾರಿ ಅಲ್ಲಿ ತೊಂದರೆಯಾಗಿರಲಿಲ್ಲ. ಮಹದೇವಪುರ, ವೈಟ್‌ಫೀಲ್ಡ್ ಪ್ರದೇಶದಲ್ಲಿ ಯಾವುದೇ ತೊಂದರೆ ಇರಲಿಲ್ಲ. ಆದರೆ ಈ ಬಾರಿ ಕೆರೆಗಳು ತುಂಬಿದ್ದರಿಂದ ಈ ಸಮಸ್ಯೆಯಾಗಿದೆ. ಅದನ್ನು ಮುಂದಿನ ದಿನಗಳಲ್ಲಿ ಸರಿ ಮಾಡಲಾಗುವುದು ಎಂದು ಹೇಳಿದರು. ಸಮಸ್ಯೆ ಸರಿಪಡಿಸಲು ಹೆಚ್ಚುವರಿ ಹಣದ ಅಗತ್ಯವಿದ್ದರೆ ನೀಡಲು ಸರ್ಕಾರ ಸಿದ್ಧವಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ನಂತರ ಮಾತನಾಡಿದ ಆರ್ ಅಶೋಕ್, "ಮಳೆಯಿಂದ ಕಳೆದ ವರ್ಷ ಸಮಸ್ಯೆಯಾಗಿದ್ದ ಪ್ರದೇಶಗಳಲ್ಲಿ ಸೂಕ್ತ ಕ್ರಮ ತೆಗೆದುಕೊಂಡು ಸಮಸ್ಯೆ ಸರಿಪಡಿಸಿದ್ದು ಈ ವರ್ಷ ಯಾವುದೇ ತೊಂದರೆಯಾಗಿಲ್ಲ. ಯಲಹಂಕ, ಕೆ.ಆರ್. ಪುರಂ ಭಾಗಗಳಲ್ಲಿ ತೊಂದರೆಯಾಗಿಲ್ಲ. ಹೊಸಕೆರೆಹಳ್ಳಿಯಲ್ಲು ಕಾಮಗಾರಿ ಪ್ರಾರಂಭವಾಗಿದೆ. ನಿರಂತರ ಮಳೆಯಿಂದ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿಲ್ಲ. ಸರ್ಕಾರ ಎಲ್ಲಾ ಕಾಮಗಾರಿಗಳಿಗೂ ಟೆಂಡರ್ ನೀಡಿದೆ, ಮಳೆ ಬಿಡುವು ಕೊಡುತ್ತಿದ್ದಂತೆ, ಕಾಮಗಾರಿ ಪ್ರಾರಂಭಿಸಲಾಗುವುದು" ಎಂದು ಹೇಳಿದರು.












Click it and Unblock the Notifications