ನಾಡಿನ ಜನತೆಗೆ ವಿನಾಯಕ ಚತುರ್ಥಿಯ ಶುಭಾಶಯ ಕೋರಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು, ಆಗಸ್ಟ್ 31: ಕನ್ನಡ ನಾಡಿನ ಮಹಾ ಜನತೆಯ ಕಷ್ಟಗಳು ದೂರವಾಗಲಿ, ಎಲ್ಲಾ ಜನರಿಗೂ ಗಣೇಶ ಒಳ್ಳೆಯದು ಮಾಡಲಿ, ಎಲ್ಲಾ ವಿಘ್ನಗಳನ್ನು ದೂರ ಮಾಡಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಡಿನ ಜನತೆಗೆ ಹಬ್ಬದ ಶುಭಾಶಯ ಕೋರಿದ್ದಾರೆ.
ವಿನಾಯಕ ಚತುರ್ಥ ಅಂಗವಾಗಿ ಬೆಂಗಳೂರಿನ ಆರ್.ಟಿ ನಗರದ ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಹೆಚ್ಚಿನ ಮಳೆಯಿಂದಾಗಿ ನಾಡಿನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನ ಸಮಸ್ಯೆಗೆ ಸಿಲುಕಿದ್ದಾರೆ. ಪ್ರವಾಹ ಕಡಿಮೆಯಾಗಿ ಜನ ಜೀವನ ಯಥಾಸ್ಥಿತಿಗೆ ಬರುವಂತೆ ಭಗವಂತ ಕರುಣಿಸಲಿ ಎಂದು ಹೇಳಿದರು. ಪ್ರವಾಹ ಪೀಡಿತರಿಗೆ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲು ಸಿದ್ಧವಿದೆ. ಪ್ರವಾಹ ಪೀಡಿತರನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ, ರಾಜ್ಯಕ್ಕೆ ಇನ್ನೂ ಒಳ್ಳೆಯ ದಿನಗಳು ಬರಲಿವೆ ಎಂದು" ಹೇಳಿದರು.

ಈಗಾಗಲೇ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕಳೆದ ನಾಲ್ಕೈದು ತಿಂಗಳಿನಿಂದ ರಾಜ್ಯದಲ್ಲಿ ಒಂದೇ ಸಮನೆ ಮಳೆಯಾಗುತ್ತಿದೆ. ಹಲವಾರು ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಡ್ರೈನೇಜ್‌ಗಳು ಕೂಡ ತುಂಬಿ ಹರಿಯುತ್ತಿವೆ. ಬಿಬಿಎಂಪಿ, ಎಸ್‌ಡಿಆರ್ ಎಫ್ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಬುಧವಾರ ಸಂಜೆ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದೇನೆ, ಸಮಸ್ಯೆ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡುತ್ತೇನೆ. ನಾಳೆ ಮಧ್ಯಾಹ್ನ ಪ್ರವಾಹ ಸ್ಥಳಗಳಿಗೆ ಭೇಟಿ ನೀಡಲಿದ್ದೇನೆ. ಮಳೆ ಕಡಿಮೆಯಾಗಲಿ ಎಂದು ಹೇಳಿದರು. ರಕ್ಷಣೆ ಮಾಡುವುದು ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಹೇಳಿದರು. ಉದ್ಯಮಿ ಮೋಹನ್ ದಾಸ್ ಪೈ ಬೆಂಗಳೂರಿನ ಸಮಸ್ಯೆ ಬಗ್ಗೆ ಚರ್ಚಿಸಲು ಭೇಟಿ ಮಾಡಿದ್ದರು. ಸಮಸ್ಯೆಗಳನ್ನು ಸರಿಪಡಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.












Click it and Unblock the Notifications