ಬೆಂಗಳೂರಿನ ಈ ಭಾಗದಲ್ಲಿ ಸ್ವಚ್ಛತಾ ಕಾರ್ಯಾಚರಣೆ ಚುರುಕು!
ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಸಮಸ್ಯೆ ಜೊತೆ ಜೊತೆಗೆ ಸ್ವಚ್ಛತೆಯ ಬಗ್ಗೆಯೂ ಹೆಚ್ಚು ಚರ್ಚೆ ಆಗುತ್ತಿದೆ. ಇದೀಗ ಗ್ರೇಟರ್ ಬೆಂಗಳೂರು ಆಡಳಿತದ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಪೂರ್ವ ನಗರ ಪಾಲಿಕೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಹಾಗೂ ಸಾಮೂಹಿಕ ಸ್ವಚ್ಛತಾ ಕಾರ್ಯಾಚರಣೆ ನಡೆದಿದೆ.
ಪೂರ್ವ ನಗರ ಪಾಲಿಕೆಯ ಆಯುಕ್ತರಾದ ಡಿ.ಎಸ್.ರಮೇಶ್ ಅವರ ನಿರ್ದೇಶನದಂತೆ ಶುಕ್ರವಾರ ವಾರ್ಡ್ ಸಂಖ್ಯೆ:84 ಹಗದೂರು ವ್ಯಾಪ್ತಿಯ ವೈಟ್ ಫೀಲ್ಡ್ ಮುಖ್ಯರಸ್ತೆ, ವಾರ್ಡ್ ಸಂಖ್ಯೆ-82ರ ಗರುಡಾಚಾರಪಾಳ್ಯ ಹಾಗೂ ವಾರ್ಡ್ ಸಂಖ್ಯೆ-51 ವಿಜೀನಾಪುರದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಮತ್ತು ಸಾಮೂಹಿಕ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗಿದೆ.

ಮಹದೇವಪುರ ವಿಭಾಗ ವ್ಯಾಪ್ತಿಯ ವಾರ್ಡ್ ಸಂಖ್ಯೆ:84 ಹಗದೂರು ವ್ಯಾಪ್ತಿಯ ವೈಟ್ ಫೀಲ್ಡ್ ಮುಖ್ಯರಸ್ತೆಯ ವರ್ತೂರು ಕೋಡಿಯಿಂದ ಹೋಪ್ ಫಾರ್ಮ್ ವರೆಗೆ , ವಾರ್ಡ್ ಸಂಖ್ಯೆ-82 ಗರುಡಾಚಾರಪಾಳ್ಯದಲ್ಲಿನ ಸಿಂಗಯ್ಯಪಾಳ್ಯ ಮೇಟ್ರೋ ನಿಲ್ದಾಣದ ಬಳಿಯಲ್ಲಿ ಹಾಗೂ ಕೆ.ಆರ್.ಪುರಂ ವಿಭಾಗ ವಾರ್ಡ್ ಸಂಖ್ಯೆ-51ವಿಜೀನಾಪುರದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗಿದೆ. ಮಹದೇವಪುರ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳಲ್ಲಿ ಈಗಾಗಲೇ ನಿಗದಿಪಡಿಸಿರುವ ದಿನಾಂಕದಂತೆ ಮುಂದಿನ ದಿನಗಳಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗುವುದು ಎಂದು ಮಹಾದೇವಪುರ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದಾರೆ.
ಪಾದಚಾರಿ ಮಾರ್ಗಗಳಲ್ಲಿ ನಿರ್ಮಿಸಿದ ಪೆಟ್ಟಿಗೆ ಅಂಗಡಿಗಳು, ವಾಣಿಜ್ಯ ಮಳಿಗೆಗಳ ಮುಂದಿನ ಮೇಲ್ಚಾವಣಿಗಳು, ತಾತ್ಕಾಲಿಕ ಮೇಲ್ಚಾವಣಿ, ತಳ್ಳುವ ಗಾಡಿಗಳು, ಹಣ್ಣಿನ ಅಂಗಡಿಗಳು, ಡೆಬ್ರಿಸ್, ಅನಧಿಕೃತ ಕೇಬಲ್ ಗಳು, ಫುಟ್ ಪಾತ್ ಹೋಟೆಲ್ ಗಳು ಮುಂತಾದವುಗಳನ್ನು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕಾಗಿ ಅನುವು ಮಾಡಿಕೊಡಲಾಗಿದೆ.
ಸಾಮೂಹಿಕ ಸ್ವಚ್ಛತಾ ಕಾರ್ಯ: ಪೂರ್ವ ನಗರ ಪಾಲಿಕೆಯ ಕೆಆರ್ ಪುರ ಮುಖ್ಯ ರಸ್ತೆ, ಬಸವನಪುರ, ಬೆಳ್ಳಂದೂರು, ಹೂಡಿ, ವಿಜ್ಞಾನ ನಗರ ಮತ್ತು ದೇವಸಂದ್ರ ವಾರ್ಡ್ ವ್ಯಾಪ್ತಿಯ ಹಲವು ಕಡೆಗಳಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು. ಹಾಗೂ ಬಿ ನಾರಾಯಣಪುರ, ಕೆ.ಆರ್ ಪುರ, ಪೈ ಬಡಾವಣೆ ಪ್ರದೇಶಗಳಲ್ಲಿನ ಸೈಡ್ ಡ್ರೈನ್ ಗಳಲ್ಲಿ ತುಂಬಿದ್ದ ಸಿಲ್ಟ್ ನ್ನು ಹೊರತೆಗೆದು ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿದೆ.
ಇನ್ನು ಇಂದು ನಡೆದ ತೆರವು ಕಾರ್ಯಾಚರಣೆ ಮತ್ತು ಸಾಮೂಹಿಕ ಸ್ವಚ್ಛತಾ ಕಾರ್ಯದಲ್ಲಿ ಕಾರ್ಯಪಾಲಕ ಎಂಜಿನಿಯರರು, ಸಹಾಯಕ ಕಾರ್ಯಪಾಲಕ ಎಂಜಿನಿಯರರು ಹಾಗೂ ಸಹಾಯಕ ಎಂಜಿನಿಯರ್‌ಗಳು, ಜೆಹೆಚ್ಐಗಳು, ವಾರ್ಡ್ ಮಾರ್ಷಲ್ಗಳು ಹಾಗೂ ಪೌರಕಾರ್ಮಿಕರು ಸೇರಿದಂತೆ ಹಲವರು ಹಾಜರಿದ್ದರು.












Click it and Unblock the Notifications