ಜಾಮೀನು ಶ್ಯೂರಿಟಿಗೆ ನಕಲಿ ದಾಖಲೆಗಳು: ನ್ಯಾಯಾಂಗಕ್ಕೆ ವಂಚಿಸಿದ್ದ ಗ್ಯಾಂಗ್ ಅಂದರ್
ಬೆಂಗಳೂರು, ಏಪ್ರಿಲ್ 23: ಜನ ಯಾರಿಗೆ ಹೆದರುತ್ತಾರೋ ಇಲ್ಲವೋ ಗೊತ್ತಿಲ್ಲ. ನ್ಯಾಯಾಲಯಕ್ಕೆ ಪತರಗುಟ್ಟಿ ಹೋಗತ್ತಾರೆ. ಅಂಥದರಲ್ಲಿ ಸಿಟಿ ಮಾರ್ಕೆಟ್ ಪೊಲೀಸರು ಬಂಧಿಸಿರೋ ಖತರ್ನಾಕ್ ಗ್ಯಾಂಗ್ ನ್ಯಾಯಾಂಗವನ್ನೇ ಯಾಮಾರಿಸೋ ಕೆಲಸವನ್ನು ಮಾಡಿದ್ದರೆ.
ಸಿಟಿ ಮಾರ್ಕೆಟ್ ಸರ್ಕಲ್‌ನಲ್ಲಿ ಪೊಲೀಸರು ಏಪ್ರಿಲ್ 19ರ ರಾತ್ರಿ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಒರ್ವ ಪುರುಷ ಮತ್ತ ಹೆಂಗಸಿದ್ದ ಆಟೋ ತಪಸಣೆಗೆ ಪೊಲೀಸರು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಆಟೋ ಚಾಲಕ ಇಳಿದು ಓಡಲು ಪ್ರಾರಂಭಿಸಿದ್ದಾನೆ. ಆಟೋಚಾಲಕನನ್ನು ಬೆನ್ನತ್ತಿದ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಬಳಿಕ ಆಟೋ ಪರಿಶೀಲನೆ ಮಾಡಿದ್ದಾರೆ.
ಸರ್ಕಾರಿ ಸೀಲು ರಾಶಿ ರಾಶಿ ದಾಖಲೆಗಳು
ಆಟೋವನ್ನು ಪರಿಶೀಲನೆ ಸಂದರ್ಭದಲ್ಲಿ ಸರ್ಕಾರಿ ಸೀಲುಗಳು, ಆರ್‌ಟಿಸಿ ಮತ್ತು ಮ್ಯೂಟಿಯೇಷನ್ ಪಡೆದ ಕೆಲವು ದಾಖಲೆಗಳು ಲಭ್ಯವಾಗಿವೆ. ನಕಲಿ ಡಾಕ್ಯೂಮೆಂಟ್ ಕಂಡು ತಕ್ಷಣವೇ, ಪುಟ್ಟಸ್ವಾಮಿ ಮತ್ತು ನಸ್ರಿನ್ ಸೇರಿ ಹಾಗೂ ಆಟೋ ಚಾಲಕ ವಶಕ್ಕೆ ಪಡೆಯಲಾಗಿದೆ.

ನ್ಯಾಯಾಲಯದಲ್ಲಿ ಜಾಮೀನು ಪಡೆಯಲು ನಕಲಿ ದಾಖಲೆ ಸೃಷ್ಟಿ
ಜೈಲು ಸೇರಿರುವ ಆರೋಪಿ ಜಾಮೀನು ಪಡೆಯಲು ಶ್ಯೂರಿಟಿಯನ್ನು ಕೊಡಬೇಕು. ಶ್ಯೂರಿಟಿ ಕೊಡಲು ಪಹಣಿ ಪತ್ರ, ಆರ್‌ಟಿಸಿ, ಸೇರಿದಂತೆ ಆಧಾರ್ ಕಾರ್ಡ್ ಮತ್ತು ಜಾಮೀನು ಕೊಡುವ ವ್ಯಕ್ತಿ ನ್ಯಾಯಾಲಯಕ್ಕೆ ಹಾಜರಾಗಬೇಕು. ಆದರೆ, ಈ ಗ್ಯಾಂಗ್ ನವರು ರೈತರ ಹೆಸರಿನಲ್ಲಿರುವ ಪಹಣಿಯನ್ನು ನಕಲು ಮಾಡಿ ಬೇರೊಂದು ಹೆಸರಿಗೆ ಪಹಣಿಯನ್ನು ಸೃಷ್ಟಿಸುತ್ತಿದ್ದರು. ಆರ್‌ಟಿಸಿ, ಸಾಲ್ವೆನ್ಸಿ ಸರ್ಟಿಫಿಕೇಟು ಸಹ ನಕಲು ಮಾಡುತ್ತಿದ್ದರು. ಆದರೆ ಇದ್ಯಾವುದೂ ರೈತರ ಗಮನಕ್ಕೆ ಬರುತ್ತಿರಲಿಲ್ಲ. ರೈತರಿಗೆ ಮೋಸ ಮಾಡುವ ಉದ್ದೇಶವಾಗಿ ಅಸಲಿ ಡಾಕ್ಯೂಮೆಂಟ್ ನ ಬದಲಾವಣೆಯನ್ನು ಮಾಡುತ್ತಿರಲಿಲ್ಲ. ಕೇವಲ ಜಾಮೀನಿಗೆ ಬೇಕಾದಂತೆ ನಕಲಿ ದಾಖಲೆಯನ್ನು ಸೃಷ್ಟಿಸುತ್ತಿದ್ದರು.
ಆಧಾರ್ ನಕಲಿಗೆ ಕ್ಯೂ ಆರ್ ಕೋಡ್ ಮೇಕರ್ ಬಳಕೆ
ಆಧಾರ್ ಅನ್ನು ನಕಲು ಮಾಡಲು ಕ್ಯೂ ಆರ್ ಕೋಡ್ ಮೇಕರ್ ಎಂಬ ಮೊಬೈಲ್ ಆ್ಯಪ್ ಅನ್ನು ಬಳಕೆ ಮಾಡುತ್ತಿದ್ದರು. ಈ ಮೊಬೈಲ್ ಆ್ಯಪ್ ಮೂಲಕ ಬೇರೆ ಯಾರದ್ದೋ ಆಧಾರ್ ನಂಬರ್ ನಲ್ಲಿ ತನ್ನ ಫೋಟೋ ಅಡ್ರೆಸ್ ಬರುವಂತೆ ಮಾಡುತ್ತಿದ್ದರು. ಜಾಮೀನು ನೀಡುವ ವೇಳೆ ನ್ಯಾಯಾಲಯದಲ್ಲಿ ಬಾರ್ ಕೋಡ್ ಸ್ಕ್ಯಾನ್ ಮಾಡಿದಾಗ ಹೆಸರು ಮತ್ತು ಅಡ್ರೆಸ್ ಮಾತ್ರ ಕಾಣಿಸುತ್ತದೆ. ಈ ತಂತ್ರಜ್ಞಾನವನ್ನು ಬಳಸಿಕೊಂಡು ನ್ಯಾಯಾಲಯಕ್ಕೆ ಯಾಮಾರಿಸುತ್ತಿದ್ದರು.

ಕಂಪನಿಗಳ ಎಕ್ಸಿಪೀರಿಯನ್ಸ್ ಸರ್ಟಿಫಿಕೇಟು, ಸೀಲು, ಆಧಾರ್ ಕಾರ್ಡ್ ಲಭ್ಯ
ನ್ಯಾಯಾಲಯಕ್ಕೆ ಮಾತ್ರವಲ್ಲದೇ ಇವರು ವಿವಿಧ ಕಂಪನಿಯ ನಕಲಿ ಎಕ್ಸ್ ಪೀರಿಯನ್ಸ್ ಸರ್ಟಿಫಿಕೇಟು , 14 ಸೀಲು , 40ಕ್ಕೂ ಹೆಚ್ಚು ಸಾಲ್ವೆನ್ಸೀ ಸರ್ಟಿಫಿಕೇಟು , 100ಕ್ಕೂ ಅಧಿಕ ಪಹಣಿಗಳನ್ನು ಸಿಟಿ ಮಾರ್ಕೆಟ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ದಾಳಿ
ಚಿಕ್ಕಬಳ್ಳಾಪುರದಲ್ಲಿ ಹರಿ ಗ್ರಾಫಿಕ್ಸ್ ಎಂಬ ಡಿಟಿಪಿ ಸೆಂಟರ್ ಮೇಲೆ ದಾಳಿ ಮಾಡಿ ಮಾಲೀಕ ಮಂಜುನಾಥ್ ನನ್ನು ಬಂಧಿಸಿದ್ದಲ್ಲದೇ ಆತನಿಂದ ಕಂಪ್ಯೂಟರ್ , ಪ್ರಿಂಟರ್ ಕಂ ಸ್ಕ್ಯಾನರ್ , ಲ್ಯಾಮಿನೇಷನ್ ಮಿಷ್ ಅನ್ನು ವಶಕ್ಕೆ ಪಡೆಯಲಾಗಿದೆ.

ಸಿಟಿ ಮಾರ್ಕೆಟ್ ಇನ್ಸ್‌ಪೆಕ್ಟರ್ ಕುಮಾರಸ್ವಾಮಿ, ಪಿಎಸ್‌ಐ ಪಾಟೀಲ್ , ಚನ್ನಪ್ಪ, ಸುರೇಶ್, ವಿಜಯ್ ಕುಮಾರ್, ಕಾವ್ಯರವರ ತಂಡ ಮಹತ್ವದ ಕಾರ್ಯಾಚರಣೆನ ನಡೆಸಿ ನ್ಯಾಯಾಂಗಕ್ಕೆ ವಂಚಿಸುತ್ತಿದ್ದ ಪುಟ್ಟಸ್ವಾಮಿ, ನಸ್ರಿನ್, ರಾಜಣ್ಣ, ಮಂಜುನಾಥ್, ಆಂಜಿನಪ್ಪ, ಕುಮಾರ್, ಚಂದ್ರಗೌಡ, ಸೊಣ್ಣೆಗೌಡ, ಟಿಎಂ ರಾಜಪ್ಪ ಸೇರಿ 9 ಆರೋಪಿಗಳನ್ನು ಬಂಧಿಸುವುವಲ್ಲಿ ಯಶಸ್ವಿಯಾಗಿದ್ದಾರೆ.
"ರೈತರ ಹೆಸರಿನಲ್ಲಿರುವ ಜಮೀನಿಗೆ ನಕಲಿ ಪಹಣಿಯನ್ನು ತಯಾರಿಸಿ ಮತ್ತು ಆರ್‌ಟಿಸಿ ಪಡೆೆದು ಕ್ಯೂ ಆರ್ ಕೋಡ್ ಬಳಸಿ ಆಧಾರ್ ಅನ್ನು ನಕಲು ಮಾಡಿ ಜಾಮೀನು ಪಡೆಯಲು ಸರ್ಕಾರಿ ಸೀಲುಗಳನ್ನು ದುರ್ಬಳಕೆ ಮಾಡಿ ಆರೋಪಿಗಳಿಗೆ ಜಾಮೀನು ಕೊಡುತ್ತಿದ್ದರು. ಎಷ್ಟು ಕೇಸ್ ಗೆ ಸಂಬಂಧಿಸಿದಂತೆ ಈ ರೀತಿ ಜಾಮೀನು ನೀಡಿದ್ದಾರೆ" ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications