Bengaluru Traffic: ಬೆಂಗಳೂರು ಸಂಚಾರ ದಟ್ಟಣೆ ತಗ್ಗಿಸಲು ಕೆಲವು ಸಲಹೆಗಳು, ಇಲ್ಲಿದೆ ಮಾಹಿತಿ ವಿವರ
ಬೆಂಗಳೂರು, ಡಿಸೆಂಬರ್ 05: ಸಂಚಾರ ದಟ್ಟಣೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಕುಖ್ಯಾತಿ ಪಡೆದಿದೆ. ವಾಹನಗಳು ಆಮೆಗತಿಯಲ್ಲಿ ನಿಧಾನವಾಗಿ ಸಾಗುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ವಿಶ್ವದ 2ನೇ ಸ್ಥಾನ ಪಡೆದಿದೆ. ಯಾವುದೇ ರೀತಿಯ ಕ್ರಮಕೈಗೊಂಡರು ಸಹ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ.
ಬೆಂಗಳೂರಿನ ಟ್ರಾಫಿಕ್ ಗಣನೀಯವಾಗಿ ಕಡಿಮೆ ಮಾಡಲು ಮತ್ತು ಬೆಂಗಳೂರು ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ವಾಸಿಸುವ 2 ಕೋಟಿಗೂ ಹೆಚ್ಚು ಜನರ ಜೀವನ ಮಟ್ಟ ಸುಧಾರಿಸಲು ಸಿಟಿಜನ್ ಫಾರ್ ಸಿಟಿಜನ್ ಕೆಲವು ಸಲಹೆಗಳನ್ನು ನೀಡಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಸಾರಿಗೆಯನ್ನು ಜನರು ಸಮರ್ಥವಾಗಿ ಬಳಸಲು ಮಾಡಬೇಕಾದ ಸಲಹೆಗಳನ್ನು ನೀಡಿದೆ.

ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಜನರು ಖಾಸಗಿ ವಾಹನಗಳ ಬಳಕೆ ಕಡಿಮೆ ಮಾಡಿ, ಸಾರ್ವಜನಿಕ ಸಾರಿಗೆಯನ್ನು ಬಳಸಬೇಕು. ಮೊದಲು ಸಾರ್ವಜನಿಕ ಸಾರಿಗೆ ಜನರ ಬಳಕೆಗೆ ಸಮರ್ಥವಾಗಿರಬೇಕು ಹಾಗೂ ಅನುಕೂಲಕರವಾಗಿರಬೇಕಾಗಿದೆ.
ಬಿಎಂಟಿಸಿಯಲ್ಲಿ ಆಗಬೇಕಾದ ಬದಲಾವಣೆಗಳೇನು..?
ಬಿಎಂಟಿಸಿಯಲ್ಲಿ ಈಗಿರುವ ಬಸ್‌ಗಳ ಸಂಖ್ಯೆಗಿಂತ ಕನಿಷ್ಠ ದ್ವಿಗುಣವಾಗಬೇಕು. ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಎಲ್ಲಾ ಮೆಟ್ರೋ ಮತ್ತು ರೈಲು ನಿಲ್ದಾಣಗಳಿಗೆ ಸೂಕ್ತ ಸಮಯಕ್ಕೆ ಬಸ್ ವ್ಯವಸ್ಥೆ ಇರಬೇಕು. ಕೆಲವು ಶಿಕ್ಷಣ ಸಂಸ್ಥೆಗಳಿಗೆ ಸಹ ಬಿಎಂಟಿಸಿ ಬಸ್ ವ್ಯವಸ್ಥೆ ಇರಬೇಕು. ಸಬ್ಸಿಡಿ ದರದಲ್ಲಿ ಸೇವೆಗಳನ್ನು ನೀಡಬೇಕು.

ನಮ್ಮ ಮೆಟ್ರೋ
ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಕಾಮಗಾರಿ ವೇಗವನ್ನು ಹೆಚ್ಚಿಸುವ ಅಗತ್ಯವಿದೆ. 2025ರ ಅಂತ್ಯದ ವೇಳೆಗೆ ನಮ್ಮ ಮೆಟ್ರೋ ಕಾರಿಡಾರ್ ಉದ್ದವನ್ನು 75 ಕಿಲೋಮೀಟರ್‌ಗಳಿಂದ 150 ಕಿಲೋ ಮೀಟರ್‌ಗಳಿಗೆ ಹೆಚ್ಚಿಸಬೇಕಿದೆ. ಹಾಗೂ ತುರ್ತಾಗಿ ಮೆಟ್ರೋ ಕೋಚ್‌ಗಳನ್ನು ಖರೀದಿಸಬೇಕಾಗಿದೆ.
ನೈಋತ್ಯ ರೈಲ್ವೆಯು ಕನಿಷ್ಠ ಮುಂದಿನ ಎರಡು-ಮೂರು ವರ್ಷದೊಳಗೆ ಸ್ಥಳೀಯ ಪ್ರಯಾಣಿಕರ ರೈಲು ಸೇವೆಯನ್ನು ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಲಾಯಿಸಲು ಪ್ರಾರಂಭಿಸಬೇಕು.
ಕೆಆರ್‌ಐಡಿಇ ಸಂಸ್ಥೆ ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್‌ಆರ್‌ಪಿ) ಎಲ್ಲಾ 4 ಕಾರಿಡಾರ್‌ಗಳಲ್ಲಿ ಸಮರೋಪಾದಿಯಲ್ಲಿ ಕೆಲಸಗಳನ್ನು ಕೈಗೊಳ್ಳಬೇಕು. ಈ ಕಾರಿಡಾರ್‌ಗಳನ್ನು ತ್ವರಿತವಾಗಿ ಹತ್ತಿರದ ಪಟ್ಟಣಗಳಿಗೆ ವಿಸ್ತರಿಸಬೇಕು ಎಂದು ಸಿಟಿಜನ್ ಫಾರ್ ಸಿಟಿಜನ್ ಆಗ್ರಹಿಸಿದೆ.
ಸಂಚಾರ ದಟ್ಟಣೆ ತಗ್ಗಿಸಲು ಸಲಹೆಗಳು
ಇನ್ನು ಎಲ್ಲಾ ಮಂಜೂರಾದ ಮತ್ತು ಪ್ರಗತಿಯಲ್ಲಿರುವ ಯೋಜನೆಗಳನ್ನು ಬಹುಬೇಗ ಪೂರ್ಣಗೊಳಸಬೇಕು. ನಗರದಲ್ಲಿ ಉತ್ತಮ ಟ್ರಾಫಿಕ್ ಮಾನಿಟರಿಂಗ್ ಮತ್ತು ನಿರ್ವಹಣೆ ಹಾಗೂ ಬೆಂಗಳೂರಿನ ನಗರದಲ್ಲಿ ಉತ್ತಮ ಪಾರ್ಕಿಂಗ್ ನಿರ್ವಹಣೆ, ಮಳೆ ನೀರು ಹರಿದು ಹೋಗಲು ಒಳ ಚರಂಡಿ ವ್ಯವಸ್ಥೆ, ಕಾಲುದಾರಿಗಳು, ರಸ್ತೆಗಳ ನಿರ್ವಹಣೆಯಾಗಬೇಕು. ಅಲ್ಲದೇ ನಗರದಲ್ಲಿ ಡಾರ್ಕ್ ಬ್ಲ್ಯಾಕ್ ಮತ್ತು ಯೆಲ್ಲೋ ಸ್ಪಾಟ್ಟ್ ನಿರ್ಮೂಲನೆ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಬಹಳಷ್ಟು ಯಶಸ್ಸನ್ನು ತರುತ್ತವೆ ಎಂದು ಸಿಟಿಜನ್ ಫಾರ್ ಸಿಟಿಜನ್ ಅಭಿಪ್ರಾಯಪಟ್ಟಿದೆ.












Click it and Unblock the Notifications