Bengaluru Skydeck: ಬೆಂಗಳೂರಿನಲ್ಲಿ ಆಕಾಶ ಗೋಪುರ ನಿರ್ಮಾಣದ ಸ್ಥಳ ಬದಲಾವಣೆ
ಬೆಂಗಳೂರು ನವೆಂಬರ್ 8: ಬೆಂಗಳೂರಿನಲ್ಲಿ ಆಕಾಶ ಗೋಪುರ ನಿರ್ಮಾಣದ ಸ್ಥಳ ಬದಲಾವಣೆ ಮಾಡಲು ಚಿಂತನೆಗಳು ನಡೆದಿವೆ. ಬೆಂಗಳೂರಿನಲ್ಲಿ ಆಕಾಶ ಗೋಪುರ ನಿರ್ಮಾಣ ಮಾಡಲು ನಿರ್ಧರಿಸಿದ ಬಿಬಿಎಂಪಿ ನೈಸ್ ಕ್ಲೋವರ್ ಲೀಫ್ ಹತ್ತಿರದ ಹೆಮ್ಮಿಗೆಪುರ ಜಾಗವನ್ನು ಗುರುತಿಸಿತ್ತು. ಆದರೀಗ ಅದು ಬದಲಾವಣೆಯಾಗುವ ಸಾಧ್ಯತೆ ಇದೆ.
ರಾಮನಗರದಲ್ಲಿ ಏರ್‌ಪೋರ್ಟ್ ನಿರ್ಮಾಣಗೊಳ್ಳುವ ಮಾತುಗಳು ಕೇಳಿ ಬಂದಿದ್ದು ಕನಕಪುರಕ್ಕೆ ಆಕಾಶ ಗೋಪುರ ಶಿಫ್ಟ್ ಆಗುವ ಲಕ್ಷಣಗಳು ಇವೆ. ಉನ್ನತ ಮೂಲಗಳು ತಿಳಿಸಿವೆ. ನಗರದಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದ ಮೇಲಿನ ಒತ್ತಡ ನಿವಾರಣೆಗೆ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕಾಗಿ ಬಿಡದಿ ಸೇರಿದಂತೆ ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಚಿಂತನೆ ನಡೆಯುತ್ತಿದೆ.

ಈ ಕಾರಣಕ್ಕೆ ಆಕಾಶ ಗೋಪುರ ಅಥವಾ ಸ್ಕೈಡೆಕ್ ಸ್ಥಳಾಂತರವಾಗುವ ವಿಚಾರ ಮುನ್ನೆಲೆಗೆ ಬಂದಿದೆ. ಬಿಬಿಎಂಪಿ ನಗರವನ್ನು ಆಕರ್ಷಕವಾಗಿಸಲು ಹಾಗೂ ಪ್ರವಾಸಿಗರನ್ನು ಸೆಳೆಯಲು ಆಕಾಶ ಗೋಪುರ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ. ಇದಕ್ಕಾಗಿ ಕೆಂಗೇರಿ ಬಳಿಯ ಹೆಮ್ಮಿಗೆಪುರದಲ್ಲಿ ಸ್ಥಳವನ್ನು ಗುರುತಿಸಲಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಬಿಬಿಎಂಪಿ ಈ ಸ್ಥಳದ ಬಗ್ಗೆ ಸಾರ್ವಜನಿಕರ ಆಕ್ಷೇಪಣೆಯನ್ನು ಆಹ್ವಾನಿಸಿತ್ತು.
ಈ ನಡುವೆ ರಾಮನಗರ ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎನ್ನುವ ಮಾತುಗಳು ಕೇಳಿ ಬಂದಿವೆ. ಹೀಗಾದಲ್ಲಿ ವಿಮಾನ ನಿಲ್ದಾಣದ ಬಳಿ ಯಾವುದೇ ಗೋಪುರ ನಿರ್ಮಾಣಕ್ಕೆ ಅವಕಾಶಗಳು ಇರುವುದಿಲ್ಲ. ವಿಮಾನ ನಿಲ್ದಾಣದ 25ಕಿ.ಮೀ ಸುತ್ತಳತೆಯಲ್ಲಿ ಯಾವುದೇ ಹೈ ರೈಸ್ ಕಟ್ಟಡ ನಿರ್ಮಿಸಲು ಅನುಮತಿಯಿಲ್ಲ.
ಅಷ್ಟಕ್ಕೂ ಬಿಬಿಎಂಪಿ ಆಕಾಶ ಗೋಪುರ ನಿರ್ಮಾಣಕ್ಕೆ ಹೆಮ್ಮಿಗೆಪುರದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣವೊಂದು ಇದೆ. ಹೆಮ್ಮಿಗೆಪುರ(ನೈಸ್ ಕ್ಲೋವರ್ ಲೀಫ್ ಹತ್ತಿರ) ಜಾಗಕ್ಕೆ ತುಮಕೂರು, ಕನಕಪುರ, ಮೈಸೂರು, ಹೊಸೂರು ರಸ್ತೆಗಳಿಂದ ನೈಸ್ ರಸ್ತೆ ಮುಖೇನ ಸುಗಮ ಸಂಪರ್ಕವಿದ್ದು ಜಾಗವು ಹೊರ ವಯಲಯದ ವ್ಯಾಪ್ತಿಯಲ್ಲಿರುವುದರಿಂದ ಪ್ರಸ್ತಾಪಿತ ಆಕಾಶಗೋಪರ ನಿರ್ಮಿಸುವ ಸಮಯದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಂಭವ ಕಡಿಮೆ ಇದೆ.
ಜೊತೆಗೆ ತುರಹಳ್ಳಿ ಕಾಡಿನ ಪ್ರದೇಶ ಹಸಿರು ನೋಟದೊಂದಿಗೆ ಬೆಂಗಳೂರನ್ನು ವೀಕ್ಷಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಹೆಮ್ಮಿಗೆಪುರ (ನೈಸ್‌ರಸ್ತೆ ಹತ್ತಿರ) ಜಾಗವನ್ನು ಪ್ರಥಮವಾಗಿ ಪ್ರಸ್ತಾಪಿಸಲಾಗಿತ್ತು.
ಹೀಗಾಗಿ ಹೆಮ್ಮಿಗೆಪುರ (ನೈಸ್ ಕ್ಲೋವರ್ ಲೀಫ್ ಹತ್ತಿರ) ಜಾಗದಲ್ಲಿ ಆಕಾಶ ಗೋಪುರ ನಿರ್ಮಿಸುವ ಪ್ರಸ್ತಾವನೆಗೆ ಸಾರ್ವಜನಿಕರಿಂದ ಆಕ್ಷೇಪಣೆಗಳು ಅಥವ ಸಲಹೆಗಳು ಇದ್ದಲ್ಲಿ [email protected] ಮುಖೇನ ಲಿಖಿತ ರೂಪದಲ್ಲಿ ಮುಖ್ಯ ಆಯುಕ್ತರಿಗೆ ತಿಳಿಸುವಂತೆ ಬಿಬಿಎಂಪಿ ಸೂಚನೆ ಕೂಡ ನೀಡಿತ್ತು. ಆದರೀಗ ಈ ಸ್ಥಳ ಬದಲಾಗುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.












Click it and Unblock the Notifications