ಚಂದ್ರಯಾನ-2 ಉಡಾವಣೆಗೆ ಇನ್ನು ನಾಲ್ಕೇ ತಿಂಗಳು ಬಾಕಿ
ಬೆಂಗಳೂರು, ಆಗಸ್ಟ್ 28: ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಮುಂದಿನ ವರ್ಷದ ಜನವರಿ-ಫೆಬ್ರುವರಿ ಮಧ್ಯಭಾಗದಲ್ಲಿ ಉಡಾವಣೆಯಾಗಲಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಮಂಗಳವಾರ ತಿಳಿಸಿದ್ದಾರೆ.
ಜನವರಿ 3ರಿಂದ ಫೆಬ್ರುವರಿ 19ರ ಅವಧಿಯ ನಡುವೆ ಚಂದ್ರಯಾನ-2 ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆಸಲಾಗಿದೆ.
ಜಿಎಸ್‌ಎಲ್‌ವಿ-ಎಂಕೆ-III-ಎಂ1 ರಾಕೆಟ್ ಮೂಲಕ ಚಂದ್ರನತ್ತ ಉಪಗ್ರಹ ಧಾವಿಸಲಿದೆ. ಈ ಯೋಜನೆಯ ಕುರಿತು ದೇಶದಾದ್ಯಂತ ಪರಿಣತರ ಅಭಿಪ್ರಾಯಗಳನ್ನು ಪಡೆದುಕೊಳ್ಳಲಾಗಿದೆ. ಅವರೆಲ್ಲರೂ ನಮ್ಮ ಪ್ರಯತ್ನವನ್ನು ಶ್ಲಾಘಿಸಿದ್ದು, ಇದು ಇಸ್ರೋ ಈವರೆಗೂ ನಡೆಸಿರುವ ಯೋಜನೆಗಳಲ್ಲಿಯೇ ಅತ್ಯಂತ ಸಂಕೀರ್ಣ ಯೋಜನೆ ಎಂಬುದಾಗಿ ಹೇಳಿದ್ದಾರೆ ಎಂದು ಶಿವನ್ ಹೇಳಿದ್ದಾರೆ.

ಇದು ಆಗಸದ ಯಾವುದೇ ಭಾಗದಲ್ಲಿ ಆಕಾಶಕಾಯವನ್ನು ಇಳಿಸುವ ಇಸ್ರೋದ ಮೊದಲ ಅಂತರ್ ಗ್ರಹ ಯೋಜನೆ ಇದಾಗಿದೆ.
ಚಂದ್ರಯಾನ 2 ಉಪಗ್ರಹದ ತೂಕವು 3.8 ಟನ್‌ನಷ್ಟು ಹೆಚ್ಚಾಗಿದ್ದು, ಜಿಎಸ್‌ಎಲ್‌ವಿ ರಾಕೆಟ್‌ನಿಂದ ಉಡಾವಣೆ ಮಾಡುವುದು ಅಸಾಧ್ಯ. ಹೀಗಾಗಿ ಇಸ್ರೋ ಜಿಎಸ್‌ಎಲ್‌ವಿಯನ್ನು ಜಿಎಸ್‌ಎಲ್‌ವಿ-III-ಎಂಕೆಯಾಗಿ ಉನ್ನತೀಕರಿಸಲಾಗಿದೆ.
ಚಂದ್ರನ ದಕ್ಷಿಣ ಧ್ರುವದ ಸಮೀಪ ಸಾಗಲಿರುವ ಜಗತ್ತಿನ ಮೊಟ್ಟಮೊದಲ ಉಪಗ್ರಹ ಇದಾಗಲಿದೆ. ಅದು ದಕ್ಷಿಣದಿಂದ 72 ಡಿಗ್ರಿ ದಿಕ್ಕಿನಲ್ಲಿ ನೆಲೆಯೂರಲಿದೆ ಎಂದು ಶಿವನ್ ತಿಳಿಸಿದರು.
ಚಂದ್ರಯಾನ 2 ಯೋಜನೆಯನ್ನು 2018ರ ಅಕ್ಟೋಬರ್‌ನಲ್ಲಿ ಕಾರ್ಯಗತಗೊಳಿಸಲು ಉದ್ದೇಶಿಸಲಾಗಿತ್ತು. ಆದರೆ, ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ ಉಡಾವಣೆ ದಿನಾಂಕವನ್ನು ಮುಂದೂಡಲಾಗಿದೆ.

ಈ ಅಕ್ಟೋಬರ್‌ನಲ್ಲಿ ಡಿಜಿಟಲ್ ಇಂಡಿಯಾ ಯೋಜನೆಗಾಗಿ ಇಸ್ರೋ ಜಿಸ್ಯಾಟ್29 ಅನ್ನು ಹಾಗೂ 30 ವಾಣಿಜ್ಯ ಉಪಗ್ರಹಗಳ ಜತೆಗೆ ಹೈಪರ್ ಸ್ಪೆಕ್ಟ್ರಮ್ ಇಮೇಜಿಂಗ್ ಸ್ಯಾಟಲೈಟ್‌ಅನ್ನು ಉಡ್ಡಯನ ಮಾಡಲಿದೆ.
ನವೆಂಬರ್‌ನಲ್ಲಿ ಜಿಸ್ಯಾಟ್-7ಎ ಉಡಾವಣೆಯಾಗಲಿದೆ. ಡಿಸೆಂಬರ್‌ನಲ್ಲಿ ಎರಡು ಯೋಜನೆಗಳಿದ್ದು, ಜಿಎಸ್‌ಎಲ್‌ವಿ- ಎಫ್ 11 ರಾಕೆಟ್ ಅಮಿಸ್ಯಾಟ್ ಮತ್ತು ಇನ್ಸ್ಯಾಟ್ 4ಸಿಆರ್ ಬದಲಿಗೆ ಜಿಸ್ಯಾಟ್-31ಅನ್ನು ಸಹ ಹಾರಿಸಲಿದೆ. ಇವು ಜನವರಿಯಲ್ಲಿ ಕಾರ್ಯಾಚರಣೆ ಆರಂಭಿಸಲಿವೆ.












Click it and Unblock the Notifications