ಚಾಮರಾಜಪೇಟೆ ಈದ್ಗಾ ಮೈದಾನ ಬಿಬಿಎಂಪಿ ಆಸ್ತಿ- ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
ಬೆಂಗಳೂರು, ಜೂನ್ 08: ಬೆಂಗಳೂರಿನ ಈದ್ಗಾ ಮೈದಾನ ಅಥವಾ ಎಮ್ಮೆ ಮೈದಾನ ಅಂತೆಲ್ಲಾ ಕರೆಯಲ್ಪಡುವುದು ಚಾಮರಾಜಪೇಟೆಯ ಸಿರಸಿ ಸರ್ಕಲ್ ಬಳಿಯಿರುವ ಜಾಗ ಈಗ ರಾಜಕೀಯ ಮೈದಾನವಾಗಿದೆ. ಹಿಂದೂಗಳು ಯೋಗ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಆಚರಣೆಗೆ ಅನುಮತಿಯನ್ನು ಕೇಳಿದೆ. ಇನ್ನು ಮುಸ್ಲಿಂ ಮುಖಂಡರು ಈದ್ಗಾ ಮೈದಾನ ವಕ್ಫ್ ಮಂಡಳಿಗೆ ಸೇರಿದ್ದಾಗಿದ್ದು ಆಟದ ಹೊರತು ಬೇರೆ ಚಟುವಟಿಕೆಗೆ ನೀಡಬಾರದು ಎನ್ನುತ್ತಿದ್ದಾರೆ. ಇದರ ನಡುವೆ ಈದ್ಗಾ ಮೈದಾನ ಬಿಬಿಎಂಪಿಯ ಆಸ್ತಿ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಚಾಮರಾಜ ಪೇಟೆಯಲ್ಲಿರುವ ಮೈದಾನವೀಗ ವಿವಾದದ ಕೇಂದ್ರಬಿಂದುವಾಗಿದೆ. 1974 ರ ಸಿಟಿ ಸರ್ವೆಯಲ್ಲಿ ಆಟದ ಮೈದಾನ ಅಂತಲೇ ಇದೆ. ಇದರ ಮಾಲೀಕತ್ವ ಸಿಟಿ ಕಾರ್ಪೋರೇಷನ್ ಅಂತಿದೆ. ವರ್ಷಕ್ಕೆ ಎರಡು ಬಾರಿ ಪ್ರಾರ್ಥನೆಗೆ ಅವಕಾಶ ನೀಡಲಾಗಿದೆ. ಯಾರು ಮೈದಾನದ ಮಾಲೀಕರು ಅಂತ ಹೇಳ್ತಾರೋ ಅವರು ದಾಖಲೆ ಇದ್ದರೆ ಕೊಡಲಿ. ನಾವು ನಮ್ಮ ದಾಖಲೆಯನ್ನ ಅವರಿಗೆ ನೀಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಹೇಳಿದ್ದಾರೆ.
1962 ರಲ್ಲಿ ಸುಪ್ರಿಂ ಕೋರ್ಟ್ ಆದೇಶ ಕೊಟ್ಟಿದೆ, ಸುಪ್ರಿಂಕೋರ್ಟ್ ನ ದಾಖಲೆ ಇದ್ದರೂ ಅದರಲ್ಲಿ ಒಂದು ಪೇಜ್ ಮಿಸ್ಸಿಂಗ್ ಇದೆ. ಖಾತಾ ನೋಂದಣಿಯಲ್ಲಿ ಈದ್ಗಾ, ದರ್ಗಾ, ಅಂತಾನೂ ಇದೆ, ಯಾವ ಆಧಾರದ ಮೇಲೆ ಈದ್ಗಾ ಮೈದಾನ ಆಗಿದೆ ಅನ್ನೋದು ಗೊತ್ತಾಗಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಬಿಬಿಎಂಪಿ ಕಡತದಲ್ಲಿ ಆಟದ ಮೈದಾನ ಎಂದಿದೆ
ಇನ್ನು ಸುಪ್ರಿಂ ಆದೇಶವನ್ನ ಅಧಿಕೃತವಾಗಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಕಾನೂನು ಘಟಕದ ಸಲಹೆ ಪಡೆದು ಮುಂದಿನ ತೀರ್ಮಾನ ಮಾಡುತ್ತೇವೆ. ಮೈದಾನದಲ್ಲಿ ಕಾರ್ಯಕ್ರಮಕ್ಕೆ ಕೆಲ ಹಿಂದೂ ಸಂಘಟನೆಗಳ ಮನವಿ ಮಾಡಿದ್ದಾರೆ. ಮಕ್ಕಳಿಗೆ ಆಟದ ಮೈದಾನ ಅಂತ ಇದೆ ಆಟಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು, ಹಿಂದೂ ಸಂಘಟನೆಗಳ ಅನುಮತಿ ನೀಡುವುದು ಬಿಡುವುದು ಜಂಟಿ ಆಯುಕ್ತರ ವಿವೇಚನೆಗೆ ಬಿಟ್ಟಿದ್ದು, ಅಗತ್ಯ ಬಿದ್ದರೆ ಪೊಲೀಸರ ಸಲಹೆ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಕಾನೂನಿನ ಅಡಿಯಲ್ಲಿ ಸಮಸ್ಯೆಯನ್ನು ಬಗೆಹರಿಸುತ್ತೇವೆ
ಹಿಂದೂಗಳು ಈದ್ಗಾ ಮೈದಾನದಲ್ಲಿ ಜೂನ್ 21 ರಂದು ಯೋಗ ದಿನಾಚರಣೆ ಮತ್ತು ಜನವರಿ 26ರಂದು ಗಣರಾಜ್ಯೋತ್ಸವದ ಆಚರಣೆಗೆ ಅವಕಾಶವನ್ನು ಕೇಳಿದ್ದಾರೆ. ಆದರೆ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆಚರಣೆಗೆ ಅವಕಾಶವನ್ನು ನೀಡುವುದು ಬಿಡುವುದು ಜಂಟಿ ಆಯುಕ್ತರ ವಿವೇಚನೆಗೆ ಬಿಟ್ಟಿದ್ದು ಎನ್ನುತ್ತಿದ್ದಾರೆ. ಇದರಿಂದಾಗಿ ಬಿಬಿಎಂಪಿ ಒಮ್ಮತದ ತೀರ್ಮಾನ ತೆಗೆದುಕೊಳ್ಳುವ ಬದಲು ಇಬ್ಬಗೆಯ ನೀತಿಯನ್ನು ಅನುಸರಿಸುತ್ತಿದ್ಯಾ ಅನ್ನೋ ಅನುಮಾನ ವ್ಯಕ್ತವಾಗಿದೆ. ಇನ್ನು'' ಇಷ್ಟು ದಿನ ವಿವಾದ ಇರಲಿಲ್ಲ. ಈಗ ಸಮಸ್ಯೆ ಎದುರಾಗಿದೆ, ಕಾನೂನಿನ ಅಡಿಯಲ್ಲಿ ಸಮಸ್ಯೆಯನ್ನು ಬಗೆಹರಿಸುತ್ತೇವೆ. ದರ್ಗಾ ಕಟ್ಟಲು ಕಾರ್ಪೋರೇಷನ್‌ನಿಂದ ಅನುಮತಿಯನ್ನು ಪಡೆದಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟಪಡಿಸಿದ್ದಾರೆ.

ಯೋಗದಿನಾಚರಣೆ ಅನುಮತಿಗೆ ಪರಾಮರ್ಶೆ
''ಇಷ್ಟು ದಿನ ನಮ್ಮ ಸ್ವತ್ತು ಅಂತ ಯಾರೂ ಹೇಳಿಲ್ಲ ಕೇಳಿಲ್ಲ , ಅದರ ಜೊತೆ ಇದುವರೆಗೂ ಯಾರೂ ಕೂಡಾ ಯಾವುದೇ ಕಾರ್ಯಕ್ರಮಕ್ಕೂ ಅನುಮತಿ ಕೇಳಿಲ್ಲ, ಆದ್ರೆ ಈಗ ಯೋಗ ದಿನಾಚರಣೆ ಮತ್ತು ಗಣರಾಜ್ಯೋತ್ಸವದಂದು ಧ್ವಜಾರೋಹಣಕ್ಕೆ ಅನುಮತಿ ಕೇಳಿದ್ದಾರೆ. ಇದರಿಂದ ನಮ್ಮ ಇಂಜಿನಿಯರಿಂಗ್ ಸೆಕ್ಷನ್ ನಿಂದ ಹಾಗೂ ಪೊಲೀಸ್ ಜೊತೆ ಮಾತುಕತೆ ನಡೆಸಿಸುತ್ತೇವೆ. ಅನುಮತಿ ಹಾಗೂ ಮಾನ ದಂಡಗಳನ್ನು ಪಡೆದು ಅನುಮತಿ ನೀಡಲಾಗುತ್ತದೆ.ಈಗಾಗಲೇ ಕೆಲ ಸಂಘಟನೆಗಳು ಕಾರ್ಯಕ್ರಮ ಮಾಡೋದಕ್ಕೆ ಅರ್ಜಿ ಸಲ್ಲಿಸಿದ್ದಾರೆ.ಅರ್ಜಿಯನ್ನು ಇಂಜಿನಿಯರ್ ಡಿಪಾರ್ಟ್ ಮೆಂಟ್ ಗೆ ಕಳುಹಿಸಲಾಗಿದೆ. ವರದಿ ಬಂದ ನಂತರ .ಪೊಲೀಸ್ ಆಯುಕ್ತರನ್ನ ಹಾಗೂ ಗುಪ್ತಚರ ಇಲಾಖೆ ಮಾಹಿತಿ ಪಡೆದು ಅನುಮತಿ ನೀಡಬೇಕೋ ಬೇಡವೋ ಎಂದು ತೀರ್ಮಾನ ಮಾಡ್ತಿವಿ"ಎಂದು ಪಶ್ಚಿಮ ವಲಯದ ಜಂಟಿ ಆಯುಕ್ತ ಶ್ರೀನಿವಾಸ್ ಹೇಳಿದ್ದಾರೆೆ.

ಅರ್ಜಿಯನ್ನು ಸಲ್ಲಿಸಿದವರು ಯಾರು..?
ಬಿಬಿಎಂಪಿ ಪಶ್ಚಿಮ ವಲಯ ಆಯುಕ್ತರ ಕಚೇರಿಗೆ ಅರ್ಜಿಯನ್ನು ಸಲ್ಲಿಸಲಾಗಿದೆ. ಹಿಂದೂಪರ ಸಂಘಟನೆಗಳು ಅರ್ಜಿಯನ್ನು ಸಲ್ಲಿಸಿವೆ.
* ಶ್ರೀರಾಮ ಸೇನೆ ಸಂಘಟನೆಯಿಂದ 21- 6-2022 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆಸಲು ಅನುಮತಿ ಕೋರಿ ಅರ್ಜಿ
* ವಿಶ್ವ ಸನಾತನ ಪರಿಷತ್ 14-8 -22 ಹಾಗೂ 15-8-22 ರಂದು ಭಾರತ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವ ಆಚರಣೆಗೆ ಅನುಮತಿ ಕೋರಿ ಅರ್ಜಿ
* ವಂದೇ ಮಾತರಂ ಸಮಾಜ ಸೇವೆ ಸಂಸ್ಥೆ - 15-8-22 ಸ್ವಾತಂತ್ರ್ಯ ದಿನಾಚರಣೆ ಆಚರಣೆಗೆ ಅವಕಾಶ ಕೋರಿ ಅರ್ಜಿಯನ್ನು ಸಲ್ಲಿಸಿದೆ. ಬಿಬಿಎಂಪಿ ಅಧಿಕಾರಿಗಳು ಅನುಮತಿ ನೀಡುವ ಬಗ್ಗೆ ತಮ್ಮ ವಿವೇಚನೆ ಮತ್ತು ಕೋಮ ಸಾಮರಸ್ಯಕ್ಕೆ ಅಡಚಣೆಯಾಗದಂತೆ ಗಮನವನ್ನು ಕೇಂದ್ರೀಕರಿಸಿ ತೀರ್ಮಾನ ತೆಗೆದುಕೊಳ್ಳಬೇಕಿದೆ.












Click it and Unblock the Notifications