ಹಣಕ್ಕಾಗಿ ಹೆಂಡತಿಯ ಕಾಟ: 4.93 ಕೋಟಿ ಮೌಲ್ಯದ ಚಿನ್ನವಿದ್ದರು ಧರಿಸಲಾಗಲಿಲ್ಲ..!
ಬೆಂಗಳೂರು, ಜೂನ್ 07: ಹೆಂಡತಿ ಕಾಟಕ್ಕೆ ಬೇಸತ್ತು ಮಾಲೀಕನನ್ನ ಕೊಲೆ ಮಾಡಿ ಐದು ಕೋಟಿಗಿಂತ ಹೆಚ್ಚು ಮೌಲ್ಯದ ನಗ-ನಾಣ್ಯ ದೋಚಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಚಾಮರಾಜಪೇಟೆಯಲ್ಲಿ ನಡೆದಿದ್ದ ಜುಗ್ಗುರಾಜ್ ಜೈನ್ ಕೊಲೆ ಪ್ರಕರಣದಲ್ಲಿ ಗುಜರಾತ್ ನಲ್ಲಿ ಸೆರೆಯಾಗಿದ್ದ ಪ್ರಮುಖ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದ ಪೊಲೀಸರಿಗೆ ಕೃತ್ಯ ಎಸಗಲು ಎರಡು ದಿನಗಳ ಹಿಂದೆಯೇ ಸಂಚು ರೂಪಿರುವುದು ಕಂಡುಕೊಂಡಿದ್ದು ಕೃತ್ಯದ ಹಿಂದೆ ನಾಲ್ವರು ಆರೋಪಿಗಳು ಭಾಗಿಯಾಗಿದ್ದು ಈ ಸಂಬಂಧ ಮತ್ತೆ ಮೂವರನ್ನು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಚಾಮರಾಜಪೇಟೆಯ ಟೆಂಪಲ್ ಸ್ಟ್ರೀಟ್ ನಿವಾಸಿಯಾಗಿದ್ದ ದೀಪಂ ಎಲೆಕ್ಟ್ರಿಕಲ್ ಅಂಗಡಿ ಮಾಲೀಕ ಜುಗ್ಗುರಾಜ್ ಜೈನ್‌ನನ್ನು ಮೇ 24 ರಂದು ಕೆಲಸ ಮಾಡುತ್ತಿದ್ದ ಪ್ರಮುಖ ಆರೋಪಿ ರಾಜಸ್ತಾನ ಮೂಲದ ಬಿಜಾರಾಮ್, ಕಣ್ಣಿಗೆ ಖಾರದಪುಡಿ ಎರಚಿ ಕೈಕಾಲು ಕಟ್ಟಿ ಹತ್ಯೆ ಮಾಡಿ ಕೋಟ್ಯಂತರ ರೂಪಾಯಿ ನಗ-ನಾಣ್ಯ ದೋಚಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪಶ್ಚಿಮ ವಿಭಾಗದ ಪೊಲೀಸರು ಗುಜರಾತ್ ಪೊಲೀಸರ ಸಹಕಾರದೊಂದಿಗೆ ಬಿಜಾರಾಮ್‌ನನ್ನು ಸೆರೆಹಿಡಿದು 23 ಲಕ್ಷ ಚಿನ್ನಾಭರಣ ಜಪ್ತಿ ಮಾಡಿತ್ತು.
ಬೆಂಗಳೂರು ನಗರಕ್ಕೆ ಪ್ರಮುಖ ಆರೋಪಿಯನ್ನು ಕರೆತಂದು ವಿಚಾರಣೆಗೊಳಪಡಿಸಿದಾಗ ಸಹಚರರ ನೆರವಿನಿಂದ ಕೃತ್ಯ ಎಸಗಲು ಎರಡು ದಿನಗಳ ಹಿಂದೆ ಸಂಚು ರೂಪಿಸಿದ್ದೆ ಎಂದು ಬಾಯ್ಬಿಟ್ಟಿದ್ದ. ಈತ ನೀಡಿದ ಮಾಹಿತಿ ಮೇರೆಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮಹೇಂದ್ರ, ಪೂರಾನ್ ಹಾಗೂ ಓಂ ಪ್ರಕಾಶ್ ಎಂಬುವರನ್ನು ಬಂಧಿಸಿ ಒಟ್ಟು 4,93 ಕೋಟಿ ಮೌಲ್ಯದ 8 ಕೆಜಿ 752 ಗ್ರಾಂ ಚಿನ್ನ, 3 ಕೆ.ಜಿ.870 ಗ್ರಾಂ ಬೆಳ್ಳಿ ಹಾಗೂ 53 ಲಕ್ಷ ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಓಂರಾಮ್ ದೇವಸಿ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

ಹಣವನ್ನು ಮಾಡಲು ಅಡ್ಡ ಮಾರ್ಗ
ರಾಜಸ್ತಾನದ ಪಾಲಿ ಜಿಲ್ಲೆಯ ಬೀಜೊರಾಮ್ ಕಳೆದ ಆರು ತಿಂಗಳಿಂದ ಕೊಲೆಯಾದ ಜುಗ್ಗುರಾಜ್ ಜೈನ್ ಬಳಿ ಕೆಲಸಕ್ಕೆ ಸೇರಿಕೊಂಡಿದ್ದ. ತಿಂಗಳಿಗೆ 15 ಸಾವಿರ ರೂಪಾಯಿ ವೇತನ ಪಡೆಯುತ್ತಿದ್ದ. ಹೆಚ್ಚಿನ ಸಂಬಳ ತರುವಂತೆ ಪತ್ನಿಯು ಬಿಜಾರಾಮ್ ಗೆ ಪೀಡಿಸುತ್ತಿದ್ದಳು. ಹೆಂಡತಿಯ ಕಾಟಕ್ಕೆ ಬೇಸತ್ತಿದ್ದ ಬೀಜೋರಾಮ್ ಹೆಚ್ಚಿೆ ಸಂಪಾದನೆಯನ್ನು ಮಾಡುವ ಮಾರ್ಗ ತೋಚಲಿಲ್ಲ. ಸುಲಭವಾಗಿ ಹಣವನ್ನು ಮಾಡಲು ಅಡ್ಡ ಮಾರ್ಗವನ್ನು ಆಯ್ಕೆ ಮಾಡಿಕೊಂಡ ಬೀಜೊರಾಮ್ ಮಾಲೀಕನನ್ನೇ ಕೊಂದು ಹಣವನ್ನು ಚಿನ್ನಾಭರಣವನ್ನು ದೋಚುವ ಪ್ಲಾನ್ ಮಾಡಿಬಿಟ್ಟಿದ್ದ.

ಕಣ್ಣಿಗೆ ಕಾರದ ಪುಡಿ ಎರಚಿ ಕೈಕಾಲನ್ನು ಕಟ್ಟಿ ಹತ್ಯೆ
ಹೆಂಡತಿಯ ಹಣದಾಹಕ್ಕೆ ಬೇಸತ್ತಿದ್ದ ಆರೋಪಿ ಮಾಲೀಕನ ಮನೆಯಲ್ಲಿ ಚಿನ್ನಾಭರಣ ದೋಚುವ ಪ್ಲ್ಯಾನ್ ಮಾಡಿದ್ದಾನೆ. ಇದಕ್ಕೆ ಪೂರಕವಾಗಿ ಸಂಬಂಧಿಕರಾದ ಮಹೇಶ್, ಪೂರಾನ್ ಇನ್ನಿತರರು ಸಾಥ್ ನೀಡಿದ್ದಾರೆ. ಒಟ್ಟು ಐವರನ್ನು ತಂಡವನ್ನು ರಚಿಸಿಕೊಂಡಿದ್ದ. ಮೇ 24ರಂದು ಮಾಲೀಕ ಜುಂಗರಾಜ್ ಮನೆಯಲ್ಲಿ ಏಕಾಂಗಿಯಾಗಿದ್ದಾಗ ಮನೆಗೆ ಹೋಗಿದ್ದ ಆರೋಪಿ ಜುಂಗರಾಜ್ ಕಣ್ಣಿಗೆ ಕಾರದ ಪುಡಿ ಎರಚಿ ಕೈಕಾಲನ್ನು ಕಟ್ಟಿ ಹತ್ಯೆಯನ್ನು ಮಾಡಿ ನಗ ನಾಣ್ಯವನ್ನೆಲ್ಲಾ ದೋಚಿಕೊಂಡು ಹೋಗಿದ್ದ.

ಗೋವಾಕ್ಕೆ ತೆರಳಿ ಚಿನ್ನಾಭರಣ ಹಂಚಿಕೆ
ಮೇ 24ರಂದು ಜುಂಗರಾಜ್ ಹತ್ಯೆ ಮಾಡಿ ಎರಡು ಬ್ಯಾಗಿನಲ್ಲಿ ಕೋಟ್ಯಂತರ ರೂ. ನಗನಾಣ್ಯ ದೋಚಿದ್ದ ಬಿಜೊರಾಮ್ ಮತ್ತು ಆತನ ಸಹಚರರು ಹುಬ್ಬಳ್ಳಿ ಮಾರ್ಗವಾಗಿ ಗೋವಾಕ್ಕೆ ತೆರಳಿದ್ದರು. ಪರಿಚಿತನಾಗಿದ್ದ ಓಂ ರಾಮ್ ದೇವಸಿ ಮನೆಗೆ ತೆರಳಿದ್ದರು. ಬಳಿಕ ಚಿನ್ನಾಭರಣ ಹಂಚಿಕೊಂಡು ಬಿಜೋರಾಮ್ ಗುಜರಾತ್‌ನತ್ತ ಮುಖ ಮಾಡಿದರೆ ಇನ್ನಿಬ್ಬರು ರಾಜಸ್ತಾನದ ತಮ್ಮ ನಿವಾಸಕ್ಕೆ ತೆರಳಿ ತಲೆಮರೆಸಿಕೊಂಡಿದ್ದರು'' ಎಂದು ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

ಕೋಟಿ ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ
ಬೆಂಗಳೂರು ಮತ್ತು ಗುಜರಾಜ್ ಪೊಲೀಸರು ಯಾಮಾರಿದ್ದರೇ ಬಿಜೊರಾಮ್ ಕದ್ದ ಚಿನ್ನಾಭರಣವನ್ನೆಲ್ಲಾ ಎಲ್ಲೆಲ್ಲಿ ಸಾಗಿಸುತ್ತಿದ್ದನೋ ಗೊತ್ತಿಲ್ಲ. ಚಾಮರಾಜಪೇಟೆ ಪೊಲೀಸರು ಮತ್ತು ಗುಜರಾತ್ ಪೊಲೀಸರ ಸಹಕಾರದಿಂದ ಪ್ರಮುಖ ಆರೋಪಿ ಸಿಕ್ಕಿಬಿದ್ದು ಕೊಲೆಯ ಸುತ್ತಲಿನ ಪ್ಲಾನ್ ಮತ್ತು ಆರೋಪಿಗಳ ವಿವರ ಸಿಕ್ಕಿತ್ತು. ಇದರ ಆಧಾರದಲ್ಲಿ ಇತರ ಆರೋಪಿಗಳನ್ನು ಬಂಧಿಸಿ 4.93 ಕೋಟಿ ಮೌಲ್ಯದ 8 ಕೆಜಿ 752 ಗ್ರಾಂ ಚಿನ್ನ, 3 ಕೆ.ಜಿ.870 ಗ್ರಾಂ ಬೆಳ್ಳಿ ಹಾಗೂ 53 ಲಕ್ಷ ನಗದು ಜಪ್ತಿ ಮಾಡಿಕೊಳ್ಳಲಾಗಿದೆ.












Click it and Unblock the Notifications