ಚಾಮರಾಜಪೇಟೆ ಈದ್ಗಾ ಮೈದಾನ ಗಣೇಶೋತ್ಸವ; ಡಿಸಿ ತೀರ್ಮಾನ ಕೈಗೊಳ್ಳಲಿ
ಬೆಂಗಳೂರು, ಸೆಪ್ಟೆಂಬರ್ 21; ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನ ಮತ್ತೆ ಸುದ್ದಿಯಲ್ಲಿದೆ. ವಿವಾದಿತ ಮೈದಾನದಲ್ಲಿ ಇದೇ ಸೆಪ್ಟೆಂಬರ್ 22ರಿಂದ ಮೂರು ದಿನ ಗಣೇಶೋತ್ಸವ ಆಚರಿಸಲು ಅನುಮತಿ ಕೋರಿ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಸಲ್ಲಿಸಿರುವ ಮನವಿ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಸೂಚಿಸಿದೆ.
ಬುಧವಾರದ ಕೋರ್ಟ್ ಕಲಾಪ ಆರಂಭವಾಗುತ್ತಿದ್ದಂತೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಪರ ವಕೀಲ ಶ್ರೀಧರಪ್ರಭು ಹಾಜರಾಗಿ, ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಆಗ ನ್ಯಾಯಪೀಠ ಗಣೇಶ ಚತುರ್ಥಿ ಮುಗಿದು ಎರಡು ದಿನ ಆಗಿದೆ. ಸೆಪ್ಟೆಂಬರ್ 18ರಂದು ಹಬ್ಬ ಇದೆ ಎಂದು ಬಹಳ ಹಿಂದೆಯೇ ದಿನ ನಿಗದಿಯಾಗಿತ್ತು. ಈ ವಿಚಾರ ನಿಮಗೆ ಗೊತ್ತಿರಲಿಲ್ಲಎಂದು ಹೇಳುವಂತಿಲ್ಲ. ಅಧಿಕ ಮಾಸದ ಕಾರಣಕ್ಕೆ ಕೆಲವು ಕಡೆ ಸೆಪ್ಟೆಂಬರ್ 19ಕ್ಕೆ ಹಬ್ಬ ಆಚರಿಸಲಾಗಿದೆ. ಏನೇ ಇರಲಿ ಹಬ್ಬ ಮುಗಿದ ಎರಡು ದಿನಗಳ ನಂತರ ವಿಳಂಬವಾಗಿ ಕೋರ್ಟ್‌ಗೆ ಯಾಕೆ ಬಂದಿದ್ದೀರಿ?, ಮುಂಚಿತವಾಗಿ ಬಂದಿದ್ದರೆ ಏನಾದರೊಂದು ಪರಿಹಾರ ಸೂಚಿಸಬಹುದಿತ್ತು ಎಂದು ವಕೀಲರನ್ನು ಪ್ರಶ್ನಿಸಿತು.
ಅದಕ್ಕೆ ಉತ್ತರಿಸಿದ ವಕೀಲರು, ನಾವು ಆಚರಿಸುತ್ತಿರುವುದು ಸಾರ್ವಜನಿಕ ಗಣೇಶ ಉತ್ಸವ. ವಿವಿಧತೆಯಲ್ಲಿಏಕತೆಯ ಸಂದೇಶ ಸಾರುವುದು ನಮ್ಮ ಉದ್ದೇಶವಾಗಿದೆ. ಚಾಮರಾಜಪೇಟೆ ನಾಗರಿಕರ ಒಕ್ಕೂಟ ಸೆಪ್ಟೆಂಬರ್ 22ರಿಂದ 24ರವರೆಗೆ ಈದ್ಗಾ ಮೈದಾನದಲ್ಲಿಗಣೇಶ ಉತ್ಸವ ಆಚರಿಸಲು ನಿರ್ಧರಿಸಿದೆ ಎಂದು ವಿವರಿಸಿದರು.
ನ್ಯಾಯಪೀಠ, ನಿಮ್ಮ ಉದ್ದೇಶ ಒಳ್ಳೆಯದಾಗಿರಬಹುದು. ಆದರೆ ತಡವಾಗಿ ನೀವು ಕೋರ್ಟ್‌ಗೆ ಬಂದಿದ್ದೀರಿ. ಅಷ್ಟಕ್ಕೂ ಖಾಸಗಿ ವ್ಯಕ್ತಿಗಳಿಗೆ, ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ದಿನ ಬೇರೆ-ಬೇರೆ ಇರಲ್ಲ. ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಸಂಪ್ರದಾಯ ನಮ್ಮ ದೇಶದಲ್ಲಿ ಸುಮಾರು 80 ವರ್ಷಗಳಿಗೆ ನಡೆದುಕೊಂಡು ಬಂದಿರುವುದು ಗಮನಾರ್ಹ ಎಂದು ಹೇಳಿತು.
ಕೊನೆಗೆ ಇದಕ್ಕಾಗಿ ಸಕ್ಷಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದೀರಾ? ಎಂದು ನ್ಯಾಯಪೀಠ ವಕೀಲರನ್ನು ಪ್ರಶ್ನಿಸಿತು. ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಸೆಪ್ಟೆಂಬರ್ 13ರಂದು ಮನವಿ ಕೊಡಲಾಗಿದೆ. ಆದರೆ, ಈವರೆಗೆ ಯಾವುದೇ ಕ್ರಮ ಆಗಿಲ್ಲಎಂದು ವಕೀಲರು ತಿಳಿಸಿದರು.
ಆಗಲಿ, ನಿಮ್ಮ ಮನವಿ ಸರ್ಕಾರಿ ವಕೀಲರಿಗೆ ಕೊಡಿ ಅವರು, ಬೆಂಗಳೂರು ನಗರ ಜಿಲ್ಲಾಧಿಕಾರಿಯೊಂದಿಗೆ ಮಾತುಕತೆ ನಡೆಸಿ ಏನಾದರೊಂದು ತೀರ್ಮಾನವನ್ನು ನಿಮಗೆ ತಿಳಿಸುತ್ತಾರೆ ಎಂದು ಒಕ್ಕೂಟದ ಪರ ವಕೀಲರಿಗೆ ನ್ಯಾಯಪೀಠ ಮೌಖಿಕವಾಗಿ ಹೇಳಿತು.
ಏನಿದು ವಿವಾದ?: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ದಸರಾ, ಶಿವರಾತ್ರಿ, ಗಣೇಶ ಉತ್ಸವ, ಕನ್ನಡ ರಾಜ್ಯೋತ್ಸವ, ಕ್ರೀಡೆಗಳು ಆಯೋಜಿಸುವ ಸಂಬಂಧ 2006ರ ಸೆಪ್ಟೆಂಬರ್ 19ರಂದು ಅಂದಿನ ಸಚಿವರು, ಶಾಸಕರು ಪಾಲಿಕೆ ಸದಸ್ಯರು, ವಿವಿಧ ಪಕ್ಷಗಳ ಮುಖಂಡರ ಸಮಕ್ಷಮ ಚಾಮರಾಜಪೇಟೆ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿತ್ತು.
ಅಲ್ಲದೇ 2022ರ ಆಗಸ್ಟ್‌ನಲ್ಲಿ ಮೈದಾನದಲ್ಲಿ ಸ್ವಾತಂತ್ರೋತ್ಸವ ಆಚರಣೆಗೆ ಸರ್ಕಾರ ಮತ್ತು ಬಿಬಿಎಂಪಿಗೆ ಅವಕಾಶ ನೀಡಿದ್ದ ಹೈಕೋರ್ಟ್, ಆಟದ ಮೈದಾನ ಮತ್ತು ಮುಸ್ಲಿಂ ಸಮುದಾಯಕ್ಕೆ ವರ್ಷದಲ್ಲಿಎರಡು ಬಾರಿ (ರಂಜಾನ್ ಮತ್ತು ಬಕ್ರೀದ್) ಹಬ್ಬದ ಪ್ರಾರ್ಥನೆಗೆ ಅವಕಾಶ ಮುಂದುವರಿಸುವಂತೆ ಆದೇಶ ನೀಡಿತ್ತು. ಈ ಆದೇಶವನ್ನು ಮಾರ್ಪಡಿಸಿದ್ದ ಹೈಕೋರ್ಟ್ ಈದ್ಗಾ ಮೈದಾನದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗೆಗಳನ್ನು ಆಚರಿಸಲು ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇತ್ಯರ್ತಪಡಿಸಿತ್ತು.
ಈಗ ಸೆಪ್ಟೆಂಬರ್ 22ರಿಂದ 24ರವರೆಗೆ ಸಾರ್ವಜನಿಕ ಗಣೇಶ ಉತ್ಸವ ಆಚರಿಸಲು ಚಾಮರಾಜಪೇಟೆ ನಾಗರಿಕರ ಒಕ್ಕೂಟ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಆದರೆ, ಈವರೆಗೆ ಯಾವುದೇ ಕ್ರಮ ಆಗಿಲ್ಲ. ಆದ್ದರಿಂದ ಒಕ್ಕೂಟದ ಮನವಿಯಂತೆ ನಿಗದಿತ ದಿನಾಂಕದಂದು ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವ ಆಚರಿಸಲು ಅನುಮತಿ ನೀಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು.












Click it and Unblock the Notifications