ಸಿಸಿಬಿ ಪೊಲೀಸರ ದಾಳಿ: ಕಟ್ಟಡ ಹಾರಿ ಪರಾರಿಯಾದ ರೌಡಿ ಕುಣಿಗಲ್ ಗಿರಿ
ಬೆಂಗಳೂರು, ಜೂನ್ 15: ಕುಖ್ಯಾತ ರೌಡಿ ಕುಣಿಗಲ್ ಗಿರಿ ಯನ್ನು ಬಂಧಿಸುವ ಸಲುವಾಗಿ ನಿನ್ನೆ ರಾತ್ರಿ ಸಿಸಿಬಿ ಪೊಲೀಸರು ನಗರದ ಪಬ್ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಪೊಲೀಸರಿಗೆ ಹೆದರಿ ಗಿರಿ ಕಟ್ಟಡದಿಂದ ಕಟ್ಟಡಕ್ಕೆ ಹಾರಿ ತಪ್ಪಿಸಿಕೊಂಡಿದ್ದಾನೆ.
ನಿನ್ನೆ ಕುಣಿಗಲ್ ಗಿರಿಯ ಹುಟ್ಟುಹಬ್ಬ ಇತ್ತು, ರೆಸಿಡೆನ್ಸಿ ರಸ್ತೆಯ ಟೈಮ್ಸ್ ಬಿಲ್ಡಿಂಗ್‌ನಲ್ಲಿರುವ ಪಬ್‌ನಲ್ಲಿ 150 ಡಾನ್ಸರ್‌ಗಳನ್ನು ಕರೆಸಿ ಭಾರಿ ಜೋರಾಗಿ ಬರ್ತ್ ಡೇ ಪಾರ್ಟಿ ಆಚರಿಸುತ್ತಿದ್ದ. ವಿಷಯ ತಿಳಿದ ಸಿಸಿಬಿ ಪೊಲೀಸರು ಗಿರೀಶ್ ಅವರ ನೇತೃತ್ವದಲ್ಲಿ ದಿಢೀರನೆ ದಾಳಿ ನಡೆಸಿದರು.
ಸಿಸಿಬಿ ಪೊಲೀಸರ ದಾಳಿ ಆಗಿದ್ದು ಗೊತ್ತಾಗುತ್ತಿದ್ದಂತೆ, ಕಟ್ಟಡ ಮೇಲ್ಭಾಗಕ್ಕೆ ಹೋಗಿ ಅಲ್ಲಿಂದ ಪಕ್ಕದ ಕಟ್ಟಡದ ಮೇಲೆ ಹಾರಿ ಕುಣಿಗಲ್ ಗಿರಿ ತಪ್ಪಿಸಿಕೊಂಡಿದ್ದಾನೆ. ತನ್ನ ಇನ್ನೋವಾ ವಾಹನವನ್ನು ಅಲ್ಲಿಯೇ ಬಿಟ್ಟು ಆತ ಪರಾರಿಯಾಗಿದ್ದಾನೆ.

ಟೈಮ್ಸ್ ಬಿಲ್ಡಿಂಗ್ ಒಂದರಲ್ಲೇ ಐದು ಪಬ್ ಮತ್ತು ಲೈವ್ ಬಾಂಡ್‌ಗಳು ಇದ್ದು, ಎಲ್ಲದರ ಮೇಲೂ ಸಿಸಿಬಿ ಪೊಲೀಸರು ದಾಳಿ ನಡೆಸಿ ಸುಮಾರು 250 ಮಂದಿ ಯುವತಿಯರನ್ನು ರಕ್ಷಿಸಿದ್ದಾರೆ. ಜೊತೆಗೆ 300 ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಕುಣಿಗಲ್ ಗಿರಿಯ ಆಪ್ತರು ಹಲವರಿದ್ದಾರೆ. ಎಲ್ಲರ ವಿಚಾರಣೆ ನಡೆಸಲಾಗುತ್ತಿದೆ.
ಲೈವ್ ಬ್ಯಾಂಡ್‌ನಲ್ಲಿ ವಶಕ್ಕೆ ಪಡೆದ ಯುವತಿಯರಲ್ಲಿ ಹಲವರು ಹೊರ ರಾಜ್ಯದವರಾಗಿದ್ದಾರೆ. ದಾಳಿ ವೇಳೆ ಐದು ಲಕ್ಷ ಹಣ ವಶಪಡಿಸಿಕೊಳ್ಳಲಾಗಿದೆ. ಲೈವ್ ಬ್ಯಾಂಡ್ ಮಾಲೀಕರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

ರೌಡಿ ಶೀಟರ್ ಕುಣಿಗಲ್ ರವಿಗೆ ಕೆಲವು ದಿನಗಳ ಹಿಂದೆಯಷ್ಟೆ ಸಿಸಿಬಿ ಪೊಲೀಸರು ಖಡಕ್ ವಾರ್ನಿಂಗ್ ನೀಡಿದ್ದರು. ಈ ಹಿಂದೆ ಆತನನ್ನು ಗೌರಿ ಹತ್ಯೆ ಪ್ರಕರಣದಲ್ಲೂ ವಿಚಾರಣೆಗೆ ಒಳಪಡಿಸಲಾಗಿತ್ತು, ಅಲ್ಲದೆ ಉದ್ಯಮಿಯೊಬ್ಬರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಬಿಡುಗಡೆ ಆದಾಗ ತಾನು ಊರಿಗೆ ಹೋಗಿ ಕೃಷಿ ಮಾಡುತ್ತೇನೆ ಎಂದಿದ್ದ ರವಿ ಮತ್ತೆ ಪಾತಕ ಲೋಕದಲ್ಲಿಯೇ ಮುಂದುವರೆದಿದ್ದ.












Click it and Unblock the Notifications