ಮಾಜಿ ಸಂಸದ ಆರ್ ಎಲ್ ಜಾಲಪ್ಪ ಅವರ ವಿರುದ್ಧ ಎಫ್ ಐಆರ್
ಬೆಂಗಳೂರು, ಅಕ್ಟೋಬರ್ 18: ಕೇಂದ್ರದ ಮಾಜಿ ಸಚಿವ, ಮಾಜಿ ಸಂಸದ ಆರ್ ಎಲ್ ಜಾಲಪ್ಪ ಅವರ ವಿರುದ್ಧ ಸಿಬಿಐನ ಭ್ರಷ್ಟಾಚಾರ ನಿಗ್ರಹ ವಿಭಾಗದಿಂದ ಎಫ್ ಐಆರ್ ಹಾಕಲಾಗಿದೆ.
ಆರ್ ಎಲ್ ಜಾಲಪ್ಪ ಅವರು ದೇವರಾಜ್ ಅರಸ್ ಅಕಾಡೆಮಿ ಫಾರ್ ಹೈಯರ್ ಎಜುಕೇಷನ್ ಅಂಡ್ ರಿಸರ್ಚ್(ಎಸ್ ಡಿಯುಎಚ್ ಇಆರ್) ನ ಮುಖ್ಯಸ್ಥರಾಗಿದ್ದಾರೆ. ಜಾಲಪ್ಪ ಅವರಿಗೆ ಸೇರಿದ ಎಲ್ಲಾ ವಿದ್ಯಾಸಂಸ್ಥೆಗಳು ತೆರಿಗೆ ವಂಚನೆ ಆರೋಪ ಎದುರಿಸುತ್ತಿವೆ. 2015ರಲ್ಲಿ ಆದಾಯ ತೆರಿಗೆ ಇಲಾಖೆಯಿಂದ ದಾಳಿ ಕೂಡಾ ನಡೆಸಲಾಗಿತ್ತು.

ಬೆಂಗಳೂರು, ಕೋಲಾರದಲ್ಲಿರುವ ಶ್ರೀದೇವರಾಜ್ ಅರಸ್ ಮೆಡಿಕಲ್ ಕಾಲೇಜ್, ಆರ್ ಎಲ್ ಜಾಲಪ್ಪ ಆಸ್ಪತ್ರೆ ಹಾಗೂ ಇನ್ನಿತರ ಕಾಲೇಜು ಕಮ್ ಆಸ್ಪತ್ರೆಗಳ ಮೇಲೆ ಐಟಿ ದಾಳಿ ನಡೆಸಿ ಕೋಟ್ಯಂತರ ರುಪಾಯಿ ಅಕ್ರಮ ಹಣ ವಶಪಡಿಸಿಕೊಳ್ಳಲಾಗಿತ್ತು.
ತಮ್ಮ ಒಡೆತನದ ಕಾಲೇಜುಗಳಲ್ಲಿ ಸೀಟುಗಳ ಹೆಚ್ಚಳಕ್ಕಾಗಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪವನ್ನು ಜಾಲಪ್ಪ ಹೊಂದಿದ್ದಾರೆ. ಜಾಲಪ್ಪ ಅಲ್ಲದೆ ಎಂಸಿಐನ ಅಧಿಕಾರಿಗಳಾದ ಎಸ್ ಅಜಯ್ ಕುಮಾರ್, ಡಾ. ಜಿ ನರೇಂದ್ರ ರೆಡ್ಡಿ, ಡಾ. ಎಸ್ ಆರ್ ವಾಕೊಡೆ, ಪ್ರೊ ಶಂಕರ್ ರಾವ್ ಮುಂತಾದವರ ಮೇಲೂ ಎಫ್ ಐಆರ್ ಹಾಕಲಾಗಿದೆ.
ಕೋಲಾರದ ದೇವರಾಜ್ ಇನ್ಸ್ಟಿಟ್ಯೂಟ್ ಟ್ರಸ್ಟ್ ಕಾಲೇಜಿನಲ್ಲಿ ಎಂಬಿಬಿಎಸ್, ಎಂಡಿ ಹಾಗೂ ಎಂಎಸ್ ಸೀಟುಗಳ ಹೆಚ್ಚಳಕ್ಕಾಗಿ ಲಂಚ ನೀಡಲಿರುವ ಆರೋಪ ಹೊತ್ತಿದ್ದಾರೆ.












Click it and Unblock the Notifications