'ಹಿಂದಿನ ಸರ್ಕಾರ ವಚನಭ್ರಷ್ಟ ಸರ್ಕಾರ, ಇದು ವಂಚಕರ ಸರ್ಕಾರ'
ಬೆಂಗಳೂರು, ಸೆಪ್ಟೆಂಬರ್ 07 : ಕಾವೇರಿ ನೀರು ಬಿಟ್ಟ ಸರ್ಕಾರಕ್ಕೆ ಕನ್ನಡ ಪರ ಸಂಘಟನೆಗಳು ನೀರು ಇಳಿಸುತ್ತಿವೆ. ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶಕ್ಕೆ ತಲೆಬಾಗಿದ ಕರ್ನಾಟಕ ಸರ್ಕಾರದ ನೀತಿ ಖಂಡಿಸಿ ವಿವಿಧ ಕನ್ನಡಪರ ಸಂಘಟನೆಗಳು ಬೀದಿಗೆ ಇಳಿದಿವೆ.
ಬೆಂಗಳೂರಿನಲ್ಲಿ ಪ್ರತಿಭಟನೆ ಕಾವು ಏರುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಕನ್ನಡ ಪರ ಸಂಘಟನೆಗಳು ಆಗ್ರಹಿಸುತ್ತಿವೆ.[ಸೆ.9ರ ಕರ್ನಾಟಕ ಬಂದ್ ಬಿಸಿ ಎಲ್ಲಿಗೆ ತಟ್ಟಲಿದೆ?]
ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತ, ಪುರಭವನ, ರೈಲ್ವೆ ನಿಲ್ದಾಣದ ಬಳಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಸಿದ್ದರಾಮಯ್ಯ ಮತ್ತು ಎಂ ಬಿ ಪಾಟೀಲ್ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸುತ್ತಿವೆ. ರಾಜ್ಯದಾದ್ಯಂತ ಕಾವೇರಿ ಹೋರಾಟ ನಡೆಯುತ್ತಿದ್ದು ಕನ್ನಡಪರ ಸಂಘಟನೆಗಳು ಸೆಪ್ಟೆಂಬರ್ 9 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿವೆ.

ಶಿವರಾಮೇಗೌಡ ಆಕ್ರೋಶ
ರಾಜ್ಯ ಸರ್ಕಾರ ರೈತರಿಗೆ ವಿಷ ನೀಡಿದೆ. ಇಂಥ ಸರ್ಕಾರ ಇರುವ ಬದಲು ಆತ್ಮಹತ್ಯೆ ಮಾಡಿಕೊಳ್ಳಬೇಕು. ಅಧಿಕಾರದ ಆಸೆಗೆ ಜನರ ಹಿತ ಬಲಿಕೊಟ್ಟ ಸರ್ಕಾರಕ್ಕೆ ಧಿಕ್ಕಾರ ಎನ್ನುತ್ತ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಎಚ್ ಶಿವರಾಮೇಗೌಡ ಆಕ್ರೋಶ ಹೊರಹಾಕಿದರು.

ಅರೆಬೆತ್ತಲೆ ಪ್ರತಿಭಟನೆ
ಮೈಸೂರು ಬ್ಯಾಂಕ್ ವೃತ್ತದಲ್ಲಿ ಸೇರಿದ ಕರ್ನಾಟಕ ರಕ್ಷಣಾ ವೇದಿಕೆ( ಎಚ್ ಶಿವರಾಮೇಗೌಡ ಬಣ) ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು. ಖಾಲಿ ಕೊಡಗಳನ್ನು ತಲೆ ಮೇಲೆ ಹೊತ್ತು ತಮಿಳುನಾಡು ಮತ್ತು ಸುಪ್ರೀಂ ಕೋರ್ಟ್ ವಿರುದ್ಧ ಘೋಷಣೆ ಕೂಗಿದರು.

ಪ್ರತಿಕೃತಿ ದಹನ
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಸಿಎಂ ಸಿದ್ದರಾಮಯ್ಯ ಮತ್ತು ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ರೈಲ್ವೆ ನಿಲ್ದಾಣಕ್ಕೆ ನುಗ್ಗಲು ಯತ್ನ
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೇಂದ್ರ ರೈಲ್ವೆ ನಿಲ್ದಾಣಕ್ಕೆ ಬುಧವಾರ ಬೆಳಗ್ಗೆ ನೂರಾರು ಕನ್ನಡಪರ ಕಾರ್ಯಕರ್ತರು ನುಗ್ಗಲು ಯತ್ನ ಮಾಡಿದರು. ಆದರೆ ಪೊಲೀಸರು ಅವರನ್ನು ತಡೆದು ಹಿಂದಕ್ಕೆ ಕಳುಹಿಸಿದರು.

ವಂಚಕರ ಸರ್ಕಾರ
ಹಿಂದಿನ ಸರ್ಕಾರ ವಚನಭ್ರಷ್ಟ ಸರ್ಕಾರ, ಈ ಸರ್ಕಾರ ವಂಚಕರ ಸರ್ಕಾರ. ಜನರಿಗೆ ಅನ್ಯಾಯ ಮಾಡಿ ನೀರು ಬಿಟ್ಟ ಸರ್ಕಾರ. ಬಡವರ ಮನೆ ನೆಲಸಮ ಮಾಡಿ ಶ್ರೀಮಂತನ್ನು ಹಾಗೇ ಬಿಟ್ಟ ಸರ್ಕಾರ ಎಂದು ಶಿವರಾಮೇಗೌಡ ಆರೋಪ ಮಾಡಿದರು.

ಪಾಟೀಲರನ್ನು ವಜಾ ಮಾಡಿ
ರೈತರ ಸಮಸ್ಯೆಗೆ ಸ್ಪಂದಿಸದ ಸಚಿವ ಎಂಬಿ ಪಾಟೀಲರನ್ನು ವಜಾ ಮಾಡಿ. ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ಕೂಡಲೇ ನಿಲ್ಲಿಸಿ. ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಎಚ್ಚರಿಕೆ ನೀಡಿದವು.












Click it and Unblock the Notifications