ಕಾವೇರಿ: ಬೆಂಗಳೂರಿನಲ್ಲಿ ಅ.16ಕ್ಕೆ 'ಕರಾಳ ದಿನಾಚರಣೆ ಹಾಗೂ ಕಪ್ಪುಬಾವುಟ ಪ್ರದರ್ಶನ'
ಬೆಂಗಳೂರು, ಅಕ್ಟೋಬರ್ 15: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಇತ್ತೀಚೆಗೆ ಎರಡು ಬಂದ್ ಕಂಡಿರುವ ಬೆಂಗಳೂರು ನಾಳೆ ಸೋಮವಾರ (ಅ.16)ರಂದು ಮತ್ತೊಂದು ಹೋರಾಟಕ್ಕೆ ಸಾಕ್ಷಿಯಾಗಲಿದೆ. ಮಧ್ಯಾಹ್ನ 12 ಗಂಟೆಗೆ ಕಾವೇರಿ ವಿಚಾರದಲ್ಲಿನ ಅನ್ಯಾಯ ಖಂಡಿಸಿ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಯಲಿದೆ.
ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಸೋಮವಾರ 'ಕರಾಳ ದಿನಾಚರಣೆ ಹಾಗೂ ಕಪ್ಪುಬಾವುಟ ಪ್ರದರ್ಶನ' ನಡೆಯಲಿದೆ. ಈ ಮೂಲಕ ರಾಜ್ಯ ಬಿಜೆಪಿ ವಿರುದ್ಧ ಹಾಗೂ ಕೆಂದ್ರ ಸರ್ಕಾರದ ಕಡೆಗಣನೆ ವಿರುದ್ಧ ಆಕ್ರೋಶ ವ್ಯಕ್ತವಾಗಲಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಕಾವೇರಿ ನೀರು ನಿರ್ವಹಣಾ ಸಮಿತಿಯಿಂದ ನಮಗೆ ತೀವ್ರವಾಗಿ ಅನ್ಯಾಯವಾಗಿದೆ. ಇತ್ತ ಕೇಂದ್ರ ಸರ್ಕಾರ ಸಹ ನಮ್ಮನ್ನು ಕಡೆಗಾಣಿಸಿದ್ದಾರೆ. ನಮ್ಮ ಲೋಕಸಭಾ ಸದಸ್ಯರು ಸಂಪೂರ್ಣ ವಿಫಲರಾಗಿದ್ದಾರೆ. ರಾಜ್ಯ ಸರ್ಕಾರ ಯಾವ ಅಡ್ಡಿ ಆತಂಕವಿಲ್ಲದೇ ನೀರನ್ನು ಬಿಡುತ್ತಿದ್ದಾರೆ ಎಂದು ವಾಟಾಳ್ ನಾಗರಾಜ್ ಅವರು ಕಿರಿ ಕಾರಿದರು.
ನೀರಿಲ್ಲದೇ ಜನರು, ರೈತರು ತತ್ತರ
ಕರ್ನಾಟಕಕ್ಕೆ, ಕನ್ನಡಿಗರಿಗೆ ಯಾರಿಂದಲೂ ರಕ್ಷಣೆ ಇಲ್ಲ, ಎಲ್ಲವೂ ನಾಟಕೀಯ, ಕನ್ನಡಪರ ಸಂಘಟನೆಗಳು ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ನಮಗೆ ನಿರಂತವಾಗಿ ಅನ್ಯಾಯವಾಗುತ್ತಿದೆ. ಕೆಆರ್‌ಎಸ್‌ನಲ್ಲಿ ನೀರಿಲ್ಲ. ಕಬಿನಿ, ಹಾರಂಗಿ, ಹೇಮಾವತಿಯಲ್ಲೂ ನೀರಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಬೆಂಗಳೂರಿಗೆ ಕುಡಿಯುವ ನೀರು ನಿಲ್ಲುವ ಸೂಚನೆ ಇದೆ. ಹೀಗಾದರೆ ಮುಂದೆ ಬೆಂಗಳೂರಿನ ಜನರ ಗತಿ ಏನು ? ನೀರಿಲ್ಲದೆ ಒಣಗುತ್ತಿರುವ ನಮ್ಮ ರೈತರ ಗತಿ ಏನು? ಎಂದು ಪ್ರಶ್ನಿಸಿದರು. ಕರ್ನಾಟಕ ರಾಜ್ಯ ಕಗ್ಗತ್ತಿನಲ್ಲಿದೆ. ಕರ್ನಾಟಕದಲ್ಲಿ ಬೆಳಕಿದ್ದರೂ ಬೆಳಕಿಲ್ಲದಂತಾಗಿದೆ. ಕಾವೇರಿ ನೀರು ಬಿಡಬೇಡಿ ಎಂದು ಒತ್ತಾಯಿಸಿ, ಈ ಹೋರಾಟ ಮಾಡಲಿದ್ದೇವೆ ಎಂದು ಅವರು 'ಕನ್ನಡ ಒಕ್ಕೂಟ-ಕರ್ನಾಟಕ ರಾಜ್ಯ'ದ ಪ್ರಕಟಣೆಯಲ್ಲಿ ಅವರು ತಿಳಿಸಿದರು.












Click it and Unblock the Notifications