ಇದ್ರೀಸ್ ಪಾಷಾ ಹತ್ಯೆ ಆರೋಪಿ ಪುನೀತ್ ಕೆರೆಹಳ್ಳಿ ಪರಾರಿ, ಪತ್ತೆಗೆ ನಾಲ್ಕು ತಂಡ ರಚಿಸಿದ್ದೇವೆ; ರಾಮನಗರ ಎಸ್ಪಿ
ರಾಮನಗರ, ಏಪ್ರಿಲ್. 04: ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಇದ್ರೀಸ್ ಪಾಷಾ ಹತ್ಯೆ ಪ್ರಕರಣದ ಆರೋಪಿ ಪುನೀತ್ ಕೆರೆಹಳ್ಳಿ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗೆ ನಾಲ್ಕು ತಂಡ ರಚಿಸಲಾಗಿದೆ ಎಂದು ರಾಮನಗರ ಪೋಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
ರಾಮನಗರ ಜಿಲ್ಲೆಯ ಕನಕಪುರದ ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಮುಂಜಾನೆ ಜಾನುವಾರು ಸಾಗಟ ವಾಹನದ ಸಹಾಯಕ ಚಾಲಕ ಇದ್ರೀಸ್ ಪಾಷಾ ಎಂಬುವವರನ್ನು ಹತ್ಯೆ ಮಾಡಲಾಗಿದೆ ಎಂದು ಮೃತರ ಕುಟುಂಬಸ್ಥರಿ ದೂರು ದಾಖಲಿಸಿದ್ದಾರೆ. ಈ ಕೊಲೆಯ ಆರೋಪ ಹೊತ್ತಿರುವ ಬಲಪಂಥೀಯ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ತಲೆ ಮರೆಸಿಕೊಂಡಿದ್ದಾನೆ ಎಂದು ರಾಮನಗರ ಎಸ್‌ಪಿ ಕಾರ್ತೀಕ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ಕಳೆದ ಶುಕ್ರವಾರ ರಾತ್ರಿ ದನಗಳನ್ನು ಸಾಗಿಸುತ್ತಿದ್ದ ವಾಹನವನ್ನು ಪುನೀತ್ ಕೆರೆಹಳ್ಳಿ ಮತ್ತು ಆತನ ತಂಡ ಅಕ್ರಮವಾಗಿ ಅಡ್ಡಗಟ್ಟಿದ್ದರು. ಪೊಲೀಸ್ ಮೂಲಗಳ ಪ್ರಕಾರ ಸಾತನೂರು ಪೊಲೀಸ್ ಠಾಣೆ ಎದುರು ವಾಹನ ನಿಲ್ಲಿಸಿ ಇದ್ರೀಸ್ ಪಾಷಾ ಹಾಗೂ ಲೋಡರ್ ಇರ್ಫಾನ್ ಅವರನ್ನು ಹಿಂಬಾಲಿಸಿದ್ದಾರೆ. ಕೆಲವರು ಮೃತ ಇದ್ರೀಸ್ ಪಾಷಾ ಅವರನ್ನು ಹಿಂಬಾಲಿಸಿದರೆ, ಇಬ್ಬರು ಕಂಟೈನರ್ ಬಳಿ ನಿಂತಿದ್ದ ಜಹೀರ್ ಮೇಲೆ ಹಲ್ಲೆ ನಡೆಸಿದ್ದಾರೆ.
ಇದ್ರೀಸ್ ಪಾಷಾ ಅವರು ಸ್ಥಳೀಯ ಮಾರುಕಟ್ಟೆಯಿಂದ ಜಾನುವಾರುಗಳನ್ನು ಖರೀದಿಸಿರುವುದಾಗಿ ದಾಖಲೆಗಳನ್ನು ತೋರಿಸಿದ್ದರೂ, ಪುನೀತ್ ಕೆರೆಹಳ್ಳಿ ಮತ್ತು ಇತರರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ, ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಮರುದಿನ ಮುಂಜಾನೆ ಪ-ೊಲೀಸ್ ಠಾಣೆಯಿಂದ ನೂರು ಮೀಟರ್ ದೂರದಲ್ಲಿ ಇದ್ರೀಸ್ ಪಾಷಾ ಶವವಾಗಿ ಪತ್ತೆಯಾಗಿದ್ದರು. ಅವರ ದೇಹದ ಮೇಲೆ ಚಿತ್ರಹಿಂಸೆಯ ಗುರುತುಗಳಿದ್ದವು. ಬಳಿಕ ಅವರ ಕುಟುಂಬದವರು ಪಿನೀತ್ ಕೆರೆಹಳ್ಳಿ ಮತ್ತು ಇತರ ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಘಟನೆ ನಡೆದು ಇಷ್ಟು ದಿನಗಳಾದರೂ ಆರೋಪಿಯನ್ನು ಬಂಧಿಸಲಾಗಿಲ್ಲ. ಘಟನೆ ಬಗ್ಗೆ ಮಾಹಿತಿ ನೀಡಿರುವ ರಾಮನಗರ ಎಸ್‌ಪಿ ಕಾರ್ತೀಕ್ ರೆಡ್ಡಿ " ನಮ್ಮ ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಸಾತನೂರು ಟೌನ್‌ನಲ್ಲಿ ಪುನೀತ್ ಕೆರೆಹಳ್ಳಿ ಮತ್ತು ಆತನ ನಾಲ್ವರು ಸ್ನೇಹಿತರು ಮಂಡ್ಯದಿಂದ ಬರುತ್ತಿದ್ದ ಕ್ಯಾಮಟರ್ ಗಾಡಿಗೆ ಅಡ್ಡ ಹಾಕಿ ಅದರಲ್ಲಿ ಮಂಡ್ಯದಿಂದ ಅಕ್ರಮವಾಗಿ ಹಸು ಸಾಗಿಸುತ್ತಿದ್ದಾರೆ ಅಂತ ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ನಮ್ಮ ಸಾತನೂರು ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ" ಎಂದಿದ್ದಾರೆ.

" ಒಂದು ಹಸು ಸಾಗಾಣೆ ಮಾಡುತ್ತಿದ್ದಾರೆ ಎಂದು ಪುನೀತ್ ಕೆರೆಹಳ್ಳಿ ನೀಡಿರುವುದು, ಮತ್ತೊಂದು ಗಾಡಿ ಚಾಲಕ ನಮ್ಮ ಗಾಡಿಗೆ ಪುನೀತ್ ಕೆರೆಹಳ್ಳಿ ಮತ್ತು ಆತನ ಸ್ನೇಹಿತರು ಅಕ್ರಮವಾಗಿ ತಡೆ ಹಾಕಿದ್ದಾರೆ ಎಂದು ನೀಡಿರುವುದು. ಮತ್ತೊಂದು ಪ್ರಕರಣ ಆ ದಿನ ಬೆಳಗ್ಗೆ ಇಲ್ಲಿಂದ ನೂರು ಮೀಟರ್ ದೂರದಲ್ಲಿ ಇದ್ರೀಸ್ ಅವರ ಮೃತದೇಹ ದೊರಕುತ್ತದೆ ಅದರ ಮೇಲೆ ಅವರ ಅಣ್ಣ ಕೊಲೆ ಕೇಸ್ ದಾಖಲು ಮಾಡಿದ್ದಾರೆ. ಮೂರು ಕೇಸ್‌ಗಳ ತನಿಖೆ ನಡೆಯುತ್ತಿದೆ. ನಾಲ್ಕು ತಂಡಗಳನ್ನು ರಚನೆ ಮಾಡಿದ್ದೇವೆ. ಪುನೀತ್ ಕೆರೆಹಳ್ಳಿ ಪರಾರಿಯಾಗಿದ್ದಾನೆ. ಅವನನ್ನು ಹಿಡಿಯಲು ತಂಡಗಳನ್ನು ರಚಿಸಲಾಗಿದೆ. ಫೇಸ್‌ಬುಕ್‌ನಲ್ಲಿ ಎಲ್ಲಾ ಸಮ್ಮನೆ ಹೇಳುತ್ತಾರೆ. ಆದರೆ ಪರಾರಿಯಾಗಿದ್ದಾನೆ. ನಾವು ಅವನನ್ನು ಪತ್ತೆ ಮಾಡುತ್ತೇವೆ" ಎಂದು ಮಾಹಿತಿ ನೀಡಿದ್ದಾರೆ.
"ಮೃತ ಇದ್ರೀಸ್ ಅವರ ಮರಣೋತ್ತರ ಪರೀಕ್ಷೆ ವರದಿ ಎಫ್‌ಎಸ್‌ಎಲ್ ವರದಿ ಬಂದ ನಂತರ ಸಿಗುತ್ತದೆ. ಕೊಲೆ ಕೇಶ್ ದಾಖಲಾದ ನಂತರ ವೈದ್ಯರ ತಂಡದಿಮದ ಮರಣೋತ್ತರ ಪರೀಕ್ಷೆ ಮಾಡಿಸಿದ್ದೇವೆ. ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ. ನಮ್ಮ ಮೇಲೆ ಯಾವುದೇ ಒತ್ತಡವಿಲ್ಲ. ಕಾನೂನು ಪ್ರಕಾರ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ನೈತಿಕ ಪೊಲೀಸ್‌ಗಿರಿ ಆರೋಪದ ಬಗ್ಗೆ ತನಿಖೆ ನಡೆಸುತ್ತೇವೆ" ಎಂದು ಭರವಸೆ ನೀಡಿದ್ದಾರೆ.
ಆದರೆ, ಘಟನೆ ಬಗ್ಗೆ ಫೇಸ್‌ಬುಕ್ ಲೈವ್ ಬಂದು ಮಾತನಾಡಿರುವ ಆರೋಪಿ ಪುನೀತ್ ಕೆರೆಹಳ್ಳಿ, ನಾನು ತಲೆಮರೆಸಿಕೊಂಡಿಲ್ಲ. ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದೆ. ನನ್ನ ವಿರುದ್ಧ ಎಫ್ ಐಆರ್ ದಾಖಲಾಗಿದ್ದರೆ ವಿಚಾರಣೆ ಎದುರಿಸುತ್ತೇನೆ. ಎಲ್ಲೂ ಕಾನೂನನ್ನು ಮೀರಿಲ್ಲ, ಯಾರಿಗೂ ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ. ಪ್ರಕರಣದ ವಿಚಾರವಾಗಿ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇನೆ ಎಂದು ತಿಳಿಸಿದ್ದಾರೆ.












Click it and Unblock the Notifications