ಕಾನೂನು ಎಲ್ಲರಿಗೂ ಒಂದೇ, ಅನುಮತಿ ಇಲ್ಲದೇ ಅನಧಿಕೃತ ಪೋಸ್ಟರ್ ಅಂಟಿಸಿದ ಬೆಂಬಲಿಗನ ವಿರುದ್ಧವೇ FIR: ಸಚಿವರ ನಡೆಗೆ ಭಾರೀ ಮೆಚ್ಚುಗೆ
ಬೆಂಗಳೂರು: ರಾಜಕಾರಣಿಗಳ ಮೇಲಿನ ಅಭಿಮಾನದಿಂದ ಎಲ್ಲೆಂದರಲ್ಲಿ ಪೋಸ್ಟರ್‌ಗಳನ್ನ ಅಂಟಿಸುವುದು ಸಾಮಾನ್ಯ. ಆದರೆ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಅನಧಿಕೃತ ಪೋಸ್ಟರ್‌ಗಳನ್ನ ಸಾರ್ವಜನಿಕ ಗೋಡೆಗಳ ಮೇಲೆ ಅಂಟಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ವಿಶೇಷವೆಂದರೆ, ತಮ್ಮದೇ ಪೋಸ್ಟರ್ ಅಂಟಿಸಿದವರ ವಿರುದ್ಧ ಅಧಿಕಾರಿಗಳು ಕೈಗೊಂಡಿರುವ ಈ ಕಠಿಣ ಕ್ರಮಕ್ಕೆ ಸಚಿವ ಕೃಷ್ಣ ಬೈರೇಗೌಡ ಅವರು ನೀಡಿದ ಸಕಾರಾತ್ಮಕ ಸ್ಪಂದನೆ ಸದ್ಯ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆಗೆ ಕಾರಣವಾಗಿದೆ.

ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಆಗಸ್ಟ್ 19ರಂದು ಸಚಿವ ಕೃಷ್ಣ ಬೈರೇಗೌಡ ಅವರ ಬೆಂಬಲಿಗನೊಬ್ಬ ಅನಧಿಕೃತವಾಗಿ ಪೋಸ್ಟರ್‌ಗಳನ್ನು ಅಂಟಿಸಿದ್ದರು. ಯಾವುದೇ ಅಧಿಕೃತ ಅನುಮತಿ ಪಡೆಯದೆ ಸಾರ್ವಜನಿಕ ರಸ್ತೆಗಳ ಉದ್ದಕ್ಕೂ ಗೋಡೆಗಳ ಮೇಲೆ ಪೋಸ್ಟರ್‌ಗಳನ್ನ ಹಾಕಲಾಗಿತ್ತು. ಈ ಮೂಲಕ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಲಾಗಿದೆ ಎಂದು ಆರೋಪಿಸಿ ವಿದ್ಯಾರಣ್ಯಪುರ ಮತ್ತು ಕೊಡಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಟ್ಟು ಮೂರು ಎಫ್‌ಐಆರ್‌ಗಳು ದಾಖಲಾಗಿವೆ.
ವರದಿಗಳ ಪ್ರಕಾರ, ಪೋಸ್ಟರ್ ಅಂಟಿಸಿದ ವ್ಯಕ್ತಿಯನ್ನು ಶಿವಕುಮಾರ್ ಎಂದು ಗುರುತಿಸಲಾಗಿದ್ದು, ಈತ ಯಾವುದೇ ಪರವಾನಗಿ ಇಲ್ಲದೆ ಗೋಡೆಗಳನ್ನು ವಿರೂಪಗೊಳಿಸಿದ್ದಾನೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕೈಗೊಂಡ ಕಠಿಣ ಕ್ರಮ
ನಗರದ ಸೌಂದರ್ಯವನ್ನ ಕಾಪಾಡುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಈ ಹೆಜ್ಜೆ ಇಟ್ಟಿದ್ದಾರೆ. ಜಿಬಿಎ ಅಧಿಕಾರಿಗಳು 'ಕರ್ನಾಟಕ ತೆರೆದ ಸ್ಥಳಗಳ ಕಾಯ್ದೆ, 1981' ರ ಅಡಿಯಲ್ಲಿ ಈ ಪ್ರಕರಣವನ್ನ ದಾಖಲಿಸಿದ್ದಾರೆ. ಜಿಬಿಎ ಅಧಿಕಾರಿಗಳ ಪೂರ್ವಾನುಮತಿಯಿಲ್ಲದೆ ಸಾರ್ವಜನಿಕ ಗೋಡೆಗಳ ಮೇಲೆ ರಾಜಕೀಯ ನಾಯಕರ ಪೋಸ್ಟರ್‌ಗಳನ್ನ ಹಾಕುವುದು ಕಾನೂನುಬಾಹಿರ. ಇದು ನಗರದ ಸೌಂದರ್ಯ ಮೇಲೆ ಪರಿಣಾಮ ಬೀರುತ್ತದೆ.
ಅಲ್ಲದೆ, ಗೋಡೆಗಳಿಗೆ ಅಂಟಿಸಿದ ಈ ಪೋಸ್ಟರ್‌ಗಳನ್ನ ತೆರವುಗೊಳಿಸಲು ನಾಗರಿಕ ಸಿಬ್ಬಂದಿ ಮತ್ತು ಪೌರಕಾರ್ಮಿಕರು ಹೆಚ್ಚುವರಿ ಶ್ರಮ ಹಾಕಬೇಕಾಗುತ್ತದೆ. ತೆರಿಗೆದಾರರ ಹಣ ಈ ರೀತಿ ಪೋಲು ಮಾಡುವುದನ್ನ ತಡೆಯಲು ಈ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ದೂರುದಾರರು ಎಫ್‌ಐಆರ್‌ನಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.
ಸಚಿವ ಕೃಷ್ಣ ಬೈರೇಗೌಡ ಅವರ ಮಾದರಿ ನಡೆ
ಸಾಮಾನ್ಯವಾಗಿ ತಮ್ಮ ಬೆಂಬಲಿಗರ ವಿರುದ್ಧ ಎಫ್‌ಐಆರ್ ದಾಖಲಾದರೆ ರಾಜಕೀಯ ನಾಯಕರು ಅಧಿಕಾರಿಗಳ ಮೇಲೆ ಒತ್ತಡ ತಂದು ಪ್ರಕರಣ ಹಿಂಪಡೆಯುವಂತೆ ಮಾಡುತ್ತಾರೆ. ಆದರೆ, ಸಚಿವ ಕೃಷ್ಣ ಬೈರೇಗೌಡ ಅವರು ಇದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಕಾನೂನು ಎಲ್ಲರಿಗೂ ಒಂದೇ, ಸಾರ್ವಜನಿಕ ಆಸ್ತಿಯನ್ನು ವಿರೂಪಗೊಳಿಸುವುದು ಯಾರು ಮಾಡಿದರೂ ಅಪರಾಧವೇ ಎಂದು ಹೇಳುವ ಮೂಲಕ ಅವರು ಮಾದರಿಯಾಗಿದ್ದಾರೆ.
3 Cases (FIR) booked for putting my poster.
— Krishna Byre Gowda (@krishnabgowda) August 20, 2026
Case booked under Karnataka Open Places Disfigurement Act by Corporation (GBA) authorities. Case booked against the person who has put up my posters on walls and public places causing disfigurement of public places. Corporation staff… pic.twitter.com/AAAjeFlOwt
ತಮ್ಮದೇ ಪೋಸ್ಟರ್‌ಗಳನ್ನು ಅಂಟಿಸಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದರೂ, ಸಚಿವರು ಅಧಿಕಾರಿಗಳ ನಡೆಯನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ. ಯಾವುದೇ ರಾಜಕೀಯ ಹಸ್ತಕ್ಷೇಪ ಮಾಡದೆ, ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳಲು ಅವರು ಮುಕ್ತ ಅವಕಾಶ ಮಾಡಿಕೊಟ್ಟಿದ್ದಾರೆ.
ಬೆಂಗಳೂರು ನಗರವನ್ನ ಸ್ವಚ್ಛವಾಗಿ ಮತ್ತು ಸುಂದರವಾಗಿ ಇಟ್ಟುಕೊಳ್ಳುವುದು ಕೇವಲ ಪಾಲಿಕೆ ಅಥವಾ ಅಧಿಕಾರಿಗಳ ಜವಾಬ್ದಾರಿಯಲ್ಲ, ಬದಲಾಗಿ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಇಂತಹ ಕಠಿಣ ಕಾನೂನು ಕ್ರಮಗಳಿಂದಾಗಿ ಮುಂದಿನ ದಿನಗಳಲ್ಲಿ ರಾಜಕೀಯ ಬೆಂಬಲಿಗರು ಸಾರ್ವಜನಿಕ ಗೋಡೆಗಳ ಮೇಲೆ ಅನಧಿಕೃತ ಪೋಸ್ಟರ್ ಅಂಟಿಸುವ ಮುನ್ನ ಎರಡು ಬಾರಿ ಯೋಚಿಸುವಂತಾಗುತ್ತದೆ.


Click it and Unblock the Notifications
