ಮಿತಿ ಮೀರಿದ ಅಕ್ರಮ, ಆರ್.ಆರ್.ನಗರ ಉಪ ಚುನಾವಣೆ ರದ್ದುಗೊಳಿಸಿ
ಬೆಂಗಳೂರು, ಅ. 27: ಆರ್.ಆರ್. ನಗರ ಉಪಚುನಾವಣೆಯಲ್ಲಿ ಅಭ್ಯರ್ಥಿಗಳ ಪ್ರಚಾರದ ಲೆಕ್ಕಾಚಾರ ನೋಡಿದರೆ ಒಬ್ಬ ಅಭ್ಯರ್ಥಿಗೆ ನಿಗದಿಪಡಿಸಿರುವ ಚುನಾವಣಾ ವೆಚ್ಚವನ್ನು ಮೀರಿ ಹೋಗಿದ್ದು ಈ ಕೂಡಲೇ ಈ ಅಪಾರದರ್ಶಕ ಉಪ ಚುನಾವಣೆಯನ್ನು ರದ್ದು ಮಾಡಬೇಕು ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕದ ಉಪಾಧ್ಯಕ್ಷ ಸುರೇಶ್ ರಾಥೋಡ್ ಆಗ್ರಹಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಮಾಧ್ಯಮ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಸಾರಥ್ಯ ವಹಿಸಿದ ಮೇಲೆ ಶತಯಾಗತಯಾ ರಕ್ತಪಾತವಾದರೂ ಚುನಾವಣೆ ಗೆಲ್ಲಲೇ ಬೇಕು ಎನ್ನುವ ಜಿದ್ದಿಗೆ ಬಿದ್ದಿದ್ದಾರೆ. ಅಲ್ಲದೇ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರೇ ಹೇಳಿರುವಂತೆ "ಕ್ಷೇತ್ರಕ್ಕೆ ಹೊರಗಿನಿಂದ 4 ಸಾವಿರಕ್ಕೂ ಹೆಚ್ಚು ಗೂಂಡಾಗಳು ಬಂದು ಸೇರಿಕೊಂಡಿದ್ದಾರೆ" ಎಂದು ಆಡಳಿತರೂಡ ಪಕ್ಷದ ಅಭ್ಯರ್ಥಿ ದೂರಿದರು ಚುನಾವಣಾ ಆಯೋಗ ಕಿಂಚಿತ್ತೂ ಕ್ರಮ ತೆಗೆದುಕೊಂಡಿಲ್ಲ, ಇದರಿಂದ ಜನರಲ್ಲಿ ಭಯದ ವಾರಾವರಣ ಮೂಡಿ ಮತದಾನದ ಪ್ರಮಾಣ ಕುಸಿಯುವ ಸಾಧ್ಯತೆ ಇದೆ ಎಂದರು.
ಆರ್. ಆರ್. ನಗರ ಚುನಾವಣೆ; ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಎಫ್ಐಆರ್
ಚುನಾವಣಾ ಆಯೋಗ ನೇಮಿಸಿರುವ ವಿಶೇಷ ಚುನಾವಣಾ ಅಧಿಕಾರಿ ನಿಷ್ಕ್ರಿಯರಾಗಿದ್ದು ಅಕ್ರಮಗಳ ಬಗ್ಗೆ ಕಿಂಚಿತ್ತೂ ಗಮನ ಹರಿಸದೆ ಕುಳಿತಿದ್ದಾರೆ. ಆಡಳಿತ ಹಾಗೂ ವಿರೋಧ ಪಕ್ಷ ಜಿದ್ದಾಜಿದ್ದಿಗೆ ಬಿದ್ದಿರುವ ಈ ಚುನಾವಣೆಯಲ್ಲಿ ಸಣ್ಣ ಅಕ್ರಮವೂ ನಡೆದಿಲ್ಲವೇ? ಅಕ್ರಮ ರಹಿತವಾದ ಚುನಾವಣೆ ಇದಾಗಿದ್ದರೆ ನಿಜಕ್ಕೂ ವಿಶ್ವ ದಾಖಲೆ ಎಂದೇ ಹೇಳಬಹುದು ಎಂದು ವ್ಯಂಗ್ಯವಾಡಿದರು.
ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು, ಲಾಕ್‌ಡೌನ್ ಸಂದರ್ಭದಲ್ಲಿ ಸೆಟ್ ಟಾಪ್ ಬಾಕ್ಸ್, ದಿನಸಿ ಹಾಗೂ ಗೃಹೋಪಯೋಗಿ ವಸ್ತುಗಳನ್ನು ನೀಡಿ ಮತದಾರರ ಅಸಹಾಯಕತೆಯನ್ನು ತಮ್ಮ ಚುನಾವಣಾ ಲಾಭಕ್ಕೆ ಬಳಸಿಕೊಂಡು ತನಗೆ ಮತ ನೀಡುವಂತೆ ಆಮಿಷ ಮತ್ತು ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾತ್ರಿ ಹೊತ್ತು ಮತದಾರರಿಗೆ ಹಂಚಲು ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳ ಬೂತ್ ಮಟ್ಟದ ಪ್ರಮುಖ ಕಾರ್ಯಕರ್ತರ ಮನೆಯಲ್ಲಿ ಕೋಟ್ಯಂತರ ರೂಪಾಯಿ ಹಣ ಸಂಗ್ರಹವಾಗಿದ್ದರೂ ಚುನಾವಣಾ ಆಯೋಗ ಕಣ್ಣು ಮುಚ್ಚಿ ಕುಳಿತಿದೆ. ಈ ಕೂಡಲೇ ಐಟಿ, ಇಡಿ ಇಲಾಖೆಗಳು ಮಧ್ಯ ಪ್ರವೇಶಿಸಬೇಕು ಹಾಗೂ ಈ ಅಪಾರದರ್ಶಕ, ಅಕ್ರಮ ಗೂಂಡಾಗಿರಿ ಚುನಾವಣೆಯನ್ನು ರದ್ದು ಮಾಡಬೇಕು ಎಂದು ಸುರೇಶ್ ರಾಥೋಡ್ ಒತ್ತಾಯಿಸಿದರು.