BWSSB: ಬೆಂಗಳೂರು ಐತಿಹಾಸಿಕ ನೀರು ಪಂಪಿಂಗ್ ಸ್ಟೇಷನ್ ಪುನಃಶ್ಚೇತನ, ವಿವರ
ಬೆಂಗಳೂರು, ಏಪ್ರಿಲ್ 14: ಇಂದಿನ ಕರ್ನಾಟಕ ರಾಜಧಾನಿ ಬೆಂಗಳೂರಿಗೆ ಬ್ರಿಟಿಷರ ಕಾಲದಲ್ಲಿ ಕುಡಿಯು ನೀರು ಪೂರೈಕೆ ಮಾಡುತ್ತಿದ್ದ ಐತಿಹಾಸಿಕ ಪಂಪ್ ಸ್ಟೇಷನ್ ಪುನಃಶ್ಚೇತನಗೊಳಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಐತಿಹಾಸಿಕ ನಿರ್ಧಾರವನ್ನು ಜಲಮಂಡಳಿ ಕೈಗೊಂಡಿದೆ.
ಭಾರತದ ಬಹುಮುಖ್ಯ ನಗರಗಳಲ್ಲಿ ಹೆಸರುವಾಸಿಯಾದ ಬೆಂಗಳೂರಿಗೆ 1896 ರಲ್ಲಿ ಆರ್ಕಾವತಿ ನದಿಯ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡುತ್ತಿದ್ದ 'ಸೋಲದೇವನಹಳ್ಳಿ ಪಂಪಿಂಗ್ ಸ್ಟೇಷನ್' ಅನ್ನು ಪುನರ್ ಅಭಿವೃದ್ಧಿಗೊಳಿಸಲಾಗುವುದು ಎಂದು ಜಲಮಂಡಳಿ ತಿಳಿಸಿದೆ.

ಬೆಂಗಳೂರಿನಲ್ಲಿರುವ ಇತ್ತೀಚಿಗೆ ಹೆಸರಘಟ್ಟ ಕೆರೆಗೆ ಮತ್ತು ಸೋಲದೇವನಹಳ್ಳಿ ಪಂಪಿಂಗ್ ಸ್ಟೇಷನ್ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಭೇಟಿ ನೀಡಿದ ಬೆನ್ನಲ್ಲೆ ಈ ಪುನಶ್ಚೇತನದ ಮಾಹಿತಿ ಹೊರ ಬಿದ್ದಿದೆ.
'ಮಿಲ್ಲರ್ಸ್ ಟ್ಯಾಂಕ್ಸ್' ಮುಖೇನ ನೀರು
ವ್ಯವಸ್ಥಿತವಾಗಿ ನೀರು ಪೂರೈಕೆಯ ವ್ಯವಸ್ಥೆ ಹೊಂದಿದ್ದ ದೇಶದ ಎರಡನೇ ನಗರ ಎಂಬ ಬಿರುದಿಗೆ ಬೆಂಗಳೂರು ಆ ಕಾಲದಲ್ಲೇ ಪಾತ್ರವಾಗಿತ್ತು. 1873 ರಲ್ಲಿ ಮೊದಲ ಬಾರಿಗೆ 'ಮಿಲ್ಲರ್ಸ್ ಟ್ಯಾಂಕ್ಸ್' ಎಂದು ಹೆಸರು ಪಡೆದಂತಹ ಹಲವಾರು ಕೆರೆಗಳ ಜಾಲದ ಮೂಲಕ ಬೆಂಗಳೂರು ನಗರಕ್ಕೆ ನೀರು ಪೂರೈಸುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.
1875-77 ರ ಧಾತು ಈಶ್ವರ ಕ್ಷಾಮ (Great Famine of 1875-77) ದಿಂದ ಎರಡೂವರೆ ವರ್ಷಗಳ ಕಾಲ ಮಳೆ ಇಲ್ಲದೆ ಎಲ್ಲಾ ಜಲಮೂಲಗಳು ಬರೆದಾದವು. ಅಂತರ್ಜಲ ಸಹ ಬತ್ತಿ ಹೋಗಿತ್ತು. ಬೆಳೆಯುತ್ತಿರುವ ನಗರದ ನೀರಿನ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಅಂದಿನ ಮೈಸೂರು ರಾಜರ ದಿವಾನರಾಗಿದ್ದ ಕೆ. ಶೇಷಾದ್ರಿ ಅಯ್ಯರ್ ಅವರು, ಹೆಸರುಘಟ್ಟ ಕೆರೆಯ ಮೂಲಕ ಅರ್ಕಾವತಿ ನದಿಯ ನೀರನ್ನ ಬೆಂಗಳೂರಿಗೆ ಹರಿಸುವ ಚಿಂತನೆ ನಡೆಸಿದರು.
ಅಂದಿನ ನೀರು ಪೂರೈಕೆಯ ಯೋಜನೆಗೆ ಚಾಮರಾಜೇಂದ್ರ ವಾಟರ್ ವರ್ಕ್ಸ್ ಎಂದು ನಾಮಕರಣ ಮಾಡಲಾಯಿತು. ತೀವ್ರ ಜಲಕ್ಷಾಮದಿಂದ ಬಳಲಿದ್ದ ನಗರಕ್ಕೆ ನೀರು ಹರಿಸಲು ಸೋಲದೇವನಹಳ್ಳಿಯಲ್ಲಿ 1896 ರಲ್ಲಿ ಸ್ಥಾಪಿತವಾದ ಸೋಲದೇವನಹಳ್ಳಿ ಪಂಪಿಂಗ್ ಸ್ಟೇಷನ್ ದುರಸ್ಥಿ ಎದುರು ನೋಡುತ್ತಿದೆ. ಹೀಗಾಗಿ ಮಹತ್ವ ನಿರ್ಧಾರ ಜಲಮಂಡಳಿ ಮಾಡಿದೆ.

ನೀರು ಪೂರೈಕೆಗೆ ಅಗತ್ಯವಾದ ಈ ಪಂಪಿಂಗ್ ಸ್ಟೇಷನ್
ಸದ್ಯ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ. ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಾಗು ನಿರೀಕ್ಷೆ ಇದೆ. 1896 ರಲ್ಲೂ ಇದಕ್ಕಿಂತಲೂ ಭಾರಿ ಜಲಕ್ಷಾಮ ಎದುರಾದಾಗ ಬೆಂಗಳೂರು ನಗರಕ್ಕೆ ಇದೇ ಸೋಲದೇವನಹಳ್ಳಿ ಪಂಪಿಂಗ್ ಸ್ಟೇಷನ್ ನಿಂದ ನೀರು ಹರಿಸಲಾಗಿತ್ತು. ಸದ್ಯ ಹೆಸರುಘಟ್ಟ ಕೆರೆಯಿಂದ ಇದೇ ಪಂಪಿಂಗ್ ಸ್ಟೇಷನ್‌ನಿಂದ ನೀರು ಹರಿಸಲು ಜಲಮಂಡಳಿ ಚಿಂತನೆ ನಡೆಸಿದೆ. ಸದ್ಯ ಹೆಸರಘಟ್ಟ ಕೆರೆಯಲ್ಲಿ ಸುಮಾರು 0.3 ಟಿಎಂಸಿಯಷ್ಟು ನೀರು ಲಭ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲಭ್ಯ ನೀರನ್ನು ನಗರಕ್ಕೆ ಹರಿಸಲು ಸೋಲದೇವನಹಳ್ಳಿ ಪಂಪಿಂಗ್ ಸ್ಟೇಷನ್ ನಲ್ಲಿ ಅಗತ್ಯ ಟ್ರೀಟ್‌ಮೆಂಟ್ ನೀಡಲು ನಿರ್ಧರಿಸಲಾಗಿದೆ. ಅಲ್ಲಿಂದ ಎಂ.ಇ.ಐ ಲೇಔಟ್‌ನಲ್ಲಿರುವ ಜಲಸಂಗ್ರಾಹಾರಕ್ಕೆ ಪಂಪ್ ಮಾಡಲಾಗುವುದು. ಇಲ್ಲಿನಿಂದ ಅಗತ್ಯವಿರುವಂತಹ ಪ್ರದೇಶಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವ ಉದ್ದೇಶ ಜಲಮಂಡಳಿ ಹೊಂದಿದೆ.
ಪುನಶ್ಚೇತನಕ್ಕೆ ಸಿದ್ಧತೆಗೆ ಅಧಿಕಾರಿಗಳಿಗೆ ಸೂಚನೆ
ಹೆಸರಘಟ್ಟ ಕೆರೆಗೆ ಹಾಗೂ ಸೋಲದೇವನಹಳ್ಳಿ ಪಂಪಿಂಗ್ ಸ್ಟೇಷನ್ ಭೇಟಿ ವೇಳೆ, 125 ವರ್ಷಗಳ ಹಿಂದಿನ ತಾಂತ್ರಿಕತೆಯ ಬಗ್ಗೆ ಜಲಮಂಡಳಿ ಅಧ್ಯಕ್ಷರು ಅಚ್ಚರಿ ವ್ಯಕ್ತಪಡಿಸಿದರು. ಈ ಪಂಪಿಂಗ್ ಸ್ಟೇಷನ್ ನಲ್ಲಿರುವಂತಹ ಅನುಕೂಲತೆಗಳ ಬಗ್ಗೆ ಹಾಗೂ ನೀರು ಸರಬರಾಜಿಗೆ ಇಲ್ಲಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದರು. ಪುನಶ್ಚೇತನಕ್ಕೆ ಇನ್ನೊಂದು ವಾರದಲ್ಲಿ ತಯಾರಿ ಮಾಡಿಕೊಳ್ಳುವಂತೆ ಅವರು ಸೂಚಿಸಿದರು.












Click it and Unblock the Notifications