286 ಕೋಟಿ ವೆಚ್ಚದಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯ ಪುನಶ್ಚೇತನ
ಬೆಂಗಳೂರು, ಜನವರಿ 01 : ತಿಪ್ಪಗೊಂಡನಹಳ್ಳಿ ಜಲಾಶಯ ಪುನಶ್ಚೇತನಗೊಳಿಸುವ ಕಾರ್ಯವನ್ನು ಬೆಂಗಳೂರು ಜಲಮಂಡಳಿ ಆರಂಭಿಸಲಿದೆ. ಎತ್ತಿನಹೊಳೆ ಯೋಜನೆಯ ನೀರನ್ನು ಜಲಾಶಯಕ್ಕೆ ಹರಿಸಲು ಜಲಮಂಡಳಿ ತೀರ್ಮಾನಿಸಿದೆ.
ತಿಪ್ಪಗೊಂಡನಹಳ್ಳಿ ಜಲಾಶಯ ಅಭಿವೃದ್ಧಿಗೆ 286 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. 2019ರ ಏಪ್ರಿಲ್‌ನಲ್ಲಿ ಕಾಮಗಾರಿಗೆ ಚಾಲನೆ ಸಿಗಲಿದೆ. ಜಲಾಶಯ 3.3 ಟಿಎಂಸಿ ಅಡಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು, ಈಗ ಹೂಳು ತುಂಬಿದೆ.
ಒಂದು ಕಾಲದಲ್ಲಿ ಜಲಾಶಯದಿಂದ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿತ್ತು. ಹೂಳು ತುಂಬಿಕೊಂಡು ನೀರು ಕಲುಷಿತವಾಗಿದೆ ಎಂಬ ಕಾರಣಕ್ಕಾಗಿ ಜಲಾಶಯದ ನೀರಿನ ಬಳಕೆಯನ್ನು ನಿಲ್ಲಿಸಲಾಗಿದೆ.

ಕರ್ನಾಟಕ ಸರ್ಕಾರ ಎತ್ತಿನ ಹೊಳೆ ಯೋಜನೆಯ ನೀರನ್ನು ತಿಪ್ಪಗೊಂಡನಹಳ್ಳಿಗೆ ಹರಿಸುವುದಾಗಿ ಹೇಳಿದೆ. ಆದ್ದರಿಂದ, ಜಲಮಂಡಳಿ ಜಲಾಶಯವನ್ನು ಸ್ವಚ್ಛಗೊಳಿಸಲು ಮುಂದಾಗಿದೆ. ಈ ಜಲಾಶಯ ಶುದ್ಧಗೊಂಡು ನೀರು ಹರಿಸಿದರೆ, ಬೆಂಗಳೂರು ನಗರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇದೆ.
ಎತ್ತಿನಹೊಳೆ ಯೋಜನೆಯ ಮೂಲಕ ಬೆಂಗಳೂರಿಗೆ 2.5 ಟಿಎಂಸಿ ಅಡಿ ನೀರು ಸಿಗಲಿದೆ. ಈ ನೀರಿನಲ್ಲಿ 1.7 ಟಿಎಂಸಿ ನೀರನ್ನು ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಪೂರೈಸಲು ತೀರ್ಮಾನಿಸಲಾಗಿದೆ. ಮೊದಲು ಹೂಳು ಎತ್ತಿ, ಅನಂತರ ನೀರು ಸಂಸ್ಕರಣೆ ಘಟಕ ಸ್ಥಾಪನೆ ಮಾಡಲಾಗುತ್ತದೆ. ಕೊಳಚೆ ನೀರು ಸಂಸ್ಕರಣೆ ಮಾಡಲು 22 ಕಿ.ಮೀ. ಪೈಪ್ ಲೈನ್ ಅಳವಡಿಕೆ ಮಾಡಲಾಗುತ್ತದೆ.












Click it and Unblock the Notifications