BWSSB: ಬೆಂಗಳೂರು ನೀರಿನ ಸಮಸ್ಯೆಗೆ ಇನ್ಮುಂದೆ ಶಾಶ್ವತ ಪರಿಹಾರ: ಜಲಮಂಡಳಿ ಹೊಸ ಪ್ಲ್ಯಾನ್!
ಬೆಂಗಳೂರು: ನೀರು ಪೂರೈಕೆ ಸಮಸ್ಯೆಗೆ ಸಂಬಂಧಿಸಿದಂತೆ ದೂರು ನಿವಾರಣೆ ಕೇವಲ ತಾತ್ಕಾಲಿಕ ದುರಸ್ತಿಗೆ ಸೀಮಿತವಾಗಬಾರದು. ಮರುಕಳಿಸುವ ಸಮಸ್ಯೆಗಳ ಮೂಲ ಕಾರಣವನ್ನು ಗುರುತಿಸಿ ಶಾಶ್ವತ ಪರಿಹಾರ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ದುರಸ್ತಿ ಕಾರ್ಯವನ್ನು ಜಲಮಂಡಳಿಯ ಜಿಐಎಸ್ ವ್ಯವಸ್ಥೆಯಲ್ಲಿ ದಾಖಲಿಸುವ ವ್ಯವಸ್ಥೆ ರೂಪಿಸಬೇಕು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ( BWSSB) ಅಧ್ಯಕ್ಷೆ ಡಾ. ಎನ್. ಮಂಜುಳಾ ಅವರು ಅಧಿಕಾರಿಗಳು ಸೂಚಿಸಿದರು.
ಬೆಂಗಳೂರು ಜಲಮಂಡಳಿಯ ಉತ್ತರ ವಲಯದ ವಿವಿಧ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕಾಮಗಾರಿಗಳು ಮತ್ತು ನೀರು ಸರಬರಾಜು ವ್ಯವಸ್ಥೆಯನ್ನು ಪರಿಶೀಲಿಸಿದರು. ದೂರು ನಿವಾರಣೆ ಕೇವಲ ತಾತ್ಕಾಲಿಕ ದುರಸ್ತಿಗೆ ಸೀಮಿತವಾಗಬಾರದು. ಮರುಕಳಿಸುವ ಸಮಸ್ಯೆಗಳ ಮೂಲ ಕಾರಣವನ್ನು ಗುರುತಿಸಿ ಶಾಶ್ವತ ಪರಿಹಾರ ಕೈಗೊಳ್ಳಬೇಕು ಎಂದು ಹೇಳಿದರು.

ಜಲಮಂಡಳಿಗೆ ದಿನನಿತ್ಯ ವಿವಿಧ ರೀತಿಯ ದೂರುಗಳು ಬರುತ್ತಿದ್ದು, ಹಲವಾರು ಸಂದರ್ಭಗಳಲ್ಲಿ ಒಂದೇ ಸ್ಥಳ ಅಥವಾ ಒಂದೇ ಪೈಪ್‌ಲೈನ್‌ಗೆ ಸಂಬಂಧಿಸಿದ ಸಮಸ್ಯೆಗಳು ಮರುಕಳಿಸುತ್ತಿವೆ. ಪ್ರತಿಯೊಂದು ದುರಸ್ತಿ ಕಾರ್ಯದ ವಿವರವನ್ನು ಜಿಐಎಸ್‌ನಲ್ಲಿ ದಾಖಲಿಸಿದರೆ, ಯಾವ ಪ್ರದೇಶದಲ್ಲಿ ಯಾವ ರೀತಿಯ ಸಮಸ್ಯೆ ಪದೇಪದೇ ಉಂಟಾಗುತ್ತಿದೆ, ಯಾವ ಪೈಪ್‌ಲೈನ್ ಹೆಚ್ಚು ದುರಸ್ತಿಗೆ ಒಳಗಾಗುತ್ತಿದೆ ಎಂಬ ಐತಿಹಾಸಿಕ ದತ್ತಾಂಶ ಲಭ್ಯವಾಗುತ್ತದೆ ಎಂದು ವಿವರಿಸಿದರು.
ದೂರು ಬಂದಾಗ ದುರಸ್ತಿ ಮಾಡುವುದು ಮಾತ್ರ ಸಾಕಾಗುವುದಿಲ್ಲ. ಅದೇ ಸಮಸ್ಯೆ ಮತ್ತೆ ಮತ್ತೆ ಏಕೆ ಉಂಟಾಗುತ್ತಿದೆ ಎಂಬುದನ್ನು ದತ್ತಾಂಶದ ಆಧಾರದಲ್ಲಿ ವಿಶ್ಲೇಷಿಸಿ, ಅಗತ್ಯವಿದ್ದರೆ ಪೈಪ್‌ಲೈನ್ ಬದಲಾವಣೆ ಅಥವಾ ಶಾಶ್ವತ ತಾಂತ್ರಿಕ ಪರಿಹಾರ ಕೈಗೊಳ್ಳಬೇಕು. ಜಿಐಎಸ್ ಆಧಾರಿತ ದುರಸ್ತಿ ಇತಿಹಾಸವು ಇದಕ್ಕೆ ನೆರವಾಗಲಿದೆ ಎಂದರು.
ಯಲಹಂಕದ ಚೌಡೇಶ್ವರಿ ವಾರ್ಡ್ ವ್ಯಾಪ್ತಿಯ ಕಾಮಾಕ್ಷಮ್ಮ ಲೇಔಟ್‌ನ ಕೈಮಗ್ಗ ಕೇಂದ್ರಗಳಿಗೆ ಭೇಟಿ ನೀಡಿದ ಅಧ್ಯಕ್ಷರು, ಬೋರ್‌ವೆಲ್ ನೀರಿಗಿಂತ ಜಲಮಂಡಳಿ ಸರಬರಾಜು ಮಾಡುವ ಕಾವೇರಿ ನೀರು ಶುದ್ಧ ಮತ್ತು ವಿಶ್ವಾಸಾರ್ಹವಾಗಿದ್ದು, ಸಾಧ್ಯವಾದಷ್ಟು ಕಾವೇರಿ ನೀರಿನ ಸಂಪರ್ಕ ಪಡೆದು ಗೃಹೋಪಯೋಗಿ ಕಾರ್ಯಗಳಿಗೆ ಬಳಸುವಂತೆ ಕೈಮಗ್ಗ ಮಾಲೀಕರಿಗೆ ಮನವಿ ಮಾಡಿದರು.
ಕೋಗಿಲು ಕೆರೆ ಎಸ್‌ಟಿಪಿ ಕಾಮಗಾರಿ ತ್ವರಿತಗೊಳಿಸಿ
ಕಟ್ಟಿಗೇನಹಳ್ಳಿಯಲ್ಲಿ ನಡೆಯುತ್ತಿರುವ ಪೈಪ್‌ಲೈನ್ ಕಾಮಗಾರಿ ಪರಿಶೀಲಿಸಿದ ಬಳಿಕ, ಕೋಗಿಲು ಕೆರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕದ (ಎಸ್‌ಟಿಪಿ) ಕಾಮಗಾರಿ ಸ್ಥಳಕ್ಕೂ ಡಾ. ಮಂಜುಳಾ ಭೇಟಿ ನೀಡಿದರು.
ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಮತ್ತು ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರ ಸುರಕ್ಷತೆಗೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಬಾರದು ಎಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ಕಾರ್ಮಿಕರ ಮಕ್ಕಳೊಂದಿಗೆ ಸಂವಾದ
ಎಸ್‌ಟಿಪಿ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರ ಮಕ್ಕಳಿಗಾಗಿ ನಿರ್ಮಿಸಿರುವ ಟೆಂಟ್ ಶಾಲೆಗೆ ಭೇಟಿ ನೀಡಿದ ಡಾ. ಮಂಜುಳಾ ಅವರು ಮಕ್ಕಳೊಂದಿಗೆ ಸಂವಾದ ನಡೆಸಿದರು. ಮಕ್ಕಳಿಗೆ ಗುಣಮಟ್ಟದ ಆಹಾರ ಮತ್ತು ಅಗತ್ಯ ಮೂಲಸೌಲಭ್ಯಗಳು ಸಮರ್ಪಕವಾಗಿ ದೊರೆಯುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸಿದರು.
ನೀರಿನ ಟ್ಯಾಂಕ್‌ಗಳ ಶುಚಿತ್ವಕ್ಕೆ ಆದ್ಯತೆ
ಯಲಹಂಕ ವಿಭಾಗೀಯ ಕಚೇರಿ ಆವರಣದಲ್ಲಿನ ಕಾಮಗಾರಿಗಳನ್ನು ಪರಿಶೀಲಿಸಿದ ಅಧ್ಯಕ್ಷರು, ನೀರಿನ ಟ್ಯಾಂಕ್‌ಗಳನ್ನು ನಿಗದಿತ ಅವಧಿಗೆ ಅನುಗುಣವಾಗಿ ಸ್ವಚ್ಛಗೊಳಿಸಬೇಕು ಎಂದು ನಿರ್ದೇಶಿಸಿದರು. ಕುಡಿಯುವ ನೀರಿನ ಗುಣಮಟ್ಟ ಕಾಪಾಡುವಲ್ಲಿ ಟ್ಯಾಂಕ್‌ಗಳ ನಿರ್ವಹಣೆ ಅತ್ಯಂತ ಪ್ರಮುಖವಾಗಿದೆ ಎಂದು ಹೇಳಿದರು.
ಯಲಹಂಕ ನ್ಯೂ ಟೌನ್‌ನ ಜಲಮಂಡಳಿ ವಿಭಾಗೀಯ ಕಚೇರಿಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಮಿರ್ಜಾ ಅನ್ವರ್ ಅವರಿಂದ ವಿವಿಧ ಕಾಮಗಾರಿಗಳ ಪ್ರಗತಿ ಕುರಿತು ಮಾಹಿತಿ ಪಡೆದ ಡಾ. ಮಂಜುಳಾ ಅವರು, ಬಳಿಕ ಸಿಂಗಾಪುರ ಸೇವಾ ಠಾಣೆ, ಯಲಹಂಕ ನ್ಯೂ ಟೌನ್, ಕಾಮಾಕ್ಷಮ್ಮ ಲೇಔಟ್, ಕಟ್ಟಿಗೇನಹಳ್ಳಿ ಮತ್ತು ಕೋಗಿಲು ಕೆರೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.


Click it and Unblock the Notifications
