ಬೆಂಗಳೂರು ನಾಗರಿಕರ ಕುಂದುಕೊರತೆ ಆಲಿಸಲು ನವೆಂಬರ್ 13ಕ್ಕೆ ನೇರ ಫೂನ್ ಇನ್ ಕಾರ್ಯಕ್ರಮ
ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮತ್ತು ಬೆಂಗಳೂರು ಉತ್ತರ ನಗರ ಪಾಲಿಕೆ ವತಿಯಿಂದ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ನವೆಂಬರ್ 13 ರಂದು ಶುಕ್ರವಾರ ನೇರ ಫೋನ್-ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾರ್ವಜನಿಕರು ತಮ್ಮ ಕುಂದು ಕೊರತೆಗಳು, ದೂರು ತಿಳಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಯಿಂದ ಶುಕ್ರವಾರ ಬೆಳಗ್ಗೆ 09:30 ರಿಂದ 10:30 ರವರೆಗೆ ಫೋನ್ ಇನ್ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ತಮ್ಮ ವಲಯ/ಪ್ರದೇಶಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಮತ್ತು ಒಳಚರಂಡಿ ಕೊಳವೆ/ಇಳಿ ಗುಂಡಿಯಿಂದ ತ್ಯಾಜ್ಯ ನೀರು ಹೊರಬರುತ್ತಿರುವ ಬಗ್ಗೆ, ಜಲಮಾಪನ ಹಾಗೂ ನೀರಿನ ಬಿಲ್ಲಿನ ಸಮಸ್ಯೆಯ ಬಗ್ಗೆ ನೇರವಾಗಿ ಮಾತನಾಡಿ ಕುಂದು-ಕೊರತೆಗಳನ್ನು ಬಗೆಹರಿಸಿಕೊಳ್ಳಬಹುದು.

ಸಾರ್ವಜನಿಕರು ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ- 080-22945119 ಮತ್ತು 080-22229639. ನೀರಿನ ಸಂಪರ್ಕ ಹೊಂದಿರುವ ಗ್ರಾಹಕರು ತಮ್ಮ ಆರ್.ಆರ್.ಸಂಖ್ಯೆಯನ್ನು ತಿಳಿಸಿ ದೂರನ್ನು ನೀಡಲು ಕೋರಲಾಗಿದೆ. ಸಾರ್ವಜನಿಕರು ಈ ನೇರ ಫೋನ್-ಇನ್ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಲು ಪ್ರಕಟಣೆಯಲ್ಲಿ ಕೋರಿದೆ.
ನಗರ ಪಾಲಿಕೆ: ಫೋನ್ ಇನ್ ಕಾರ್ಯಕ್ರಮ
ಇನ್ನೂ ಪ್ರತ್ಯೇಕವಾಗಿ ಉತ್ತರ ನಗರ ಪಾಲಿಕೆಯಲ್ಲಿ ನಾಗರಿಕರ ಸೇವಾ ಸುಧಾರಣೆಗಾಗಿ ಪ್ರತೀ ಶುಕ್ರವಾರ ಫೋನ್-ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರ ಅಹವಾಲುಗಳನ್ನು ನೇರವಾಗಿ ಆಲಿಸುವ ಉದ್ದೇಶದಿಂದ ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ಪ್ರತೀ ಶುಕ್ರವಾರ ಸಾರ್ವಜನಿಕರೊಂದಿಗೆ ಫೋನ್-ಇನ್ ಕಾರ್ಯಕ್ರಮ ಆರಂಭಿಸಿದ್ದಾರೆ ಈ ವಾರದ ಫೋನ್-ಇನ್ ಕಾರ್ಯಕ್ರಮವು 2026ರ ನವೆಂಬರ್ 13 ರಂದು (ಶುಕ್ರವಾರ) ಬೆಳಗ್ಗೆ 7.00ರಿಂದ 9.00 ಗಂಟೆಯವರೆಗೆ ನಡೆಯಲಿದೆ.
ಈ ಅವಧಿಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳು ಹಾಗೂ ದುರಸ್ತಿ ಕಾರ್ಯಗಳು, ಬೀದಿ ದೀಪಗಳ ನಿರ್ವಹಣೆ, ಮನೆಮನೆ ಕಸ ಸಂಗ್ರಹಣೆ ಮತ್ತು ವಿಲೇವಾರಿ, ಅಪಾಯಕಾರಿಯಾದ ಮರಗಳು/ಕೊಂಬೆಗಳ ತೆರವು, ಸೊಳ್ಳೆ ನಿಯಂತ್ರಣ ಕ್ರಮಗಳು, ಬೀದಿ ನಾಯಿಗಳ ನಿಯಂತ್ರಣ, ಉದ್ಯಾನವನಗಳ ಅಭಿವೃದ್ಧಿ ಹಾಗೂ ಸಂರಕ್ಷಣೆ, ಅನಧಿಕೃತ ಬ್ಯಾನರ್ ಮತ್ತು ಪೋಸ್ಟರ್ ಗಳ ತೆರವು, ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿ ನಿವಾರಣೆ, ಇ-ಖಾತಾ ಸಂಬಂಧಿತ ಸಮಸ್ಯೆಗಳು ಸೇರಿದಂತೆ ವಿವಿಧ ನಾಗರಿಕ ಸಮಸ್ಯೆಗಳ ಕುರಿತು ಜನರೇ ನೇರವಾಗಿ ಆಯುಕ್ತರೊಂದಿಗೆ ನೇರವಾಗಿ ಮಾತನಾಡಿ ಸಮಸ್ಯೆ ತಿಳಿಸಬಹುದು.
'ಸಹಾಯ 2.0' ಪೋರ್ಟಲ್ನಲ್ಲಿ ದಾಖಲು
ಫೋನ್-ಇನ್ ಕಾರ್ಯಕ್ರಮದಲ್ಲಿ ಸ್ವೀಕರಿಸಲಾದ ಎಲ್ಲಾ ಅಹವಾಲುಗಳನ್ನು 'ಸಹಾಯ 2.0' ಪೋರ್ಟಲ್ ನಲ್ಲಿ ದಾಖಲಿಸಲಾಗುತ್ತದೆ. ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ತಕ್ಷಣವೇ ಕಳುಹಿಸಲಾಗುತ್ತದೆ. ದೂರು ದಾಖಲಾಗಿರುವ ವಿವರಗಳು ಹಾಗೂ ಸಂಬಂಧಿತ ಅಧಿಕಾರಿಗಳ ಮಾಹಿತಿಯನ್ನು ನಾಗರಿಕರಿಗೆ ಎಸ್.ಎಂ.ಎಸ್ ಮೂಲಕ ತಿಳಿಸಲಾಗುವುದು.
ನಾಗರಿಕರು ಸಂಪರ್ಕಿಸಬೇಕಾದ ಸಂಖ್ಯೆಗಳ ವಿವರ: ಮೊಬೈಲ್ / ವಾಟ್ಸಪ್: 9480685705 ಮತ್ತು ಲ್ಯಾಂಡ್ ಲೈನ್ : 080-22975936 / 080-23636671ಗೆ ಸಂಪರ್ಕಿಸಬಹುದು. ನಾಗರಿಕರು ತಮ್ಮ ದೂರುಗಳನ್ನು 'ಸಹಾಯ 2.0' ಮೊಬೈಲ್ ಅಪ್ಲಿಕೇಶನ್ ಮೂಲಕವೂ ಸಲ್ಲಿಸಬಹುದಾಗಿದೆ ಎಂದು ಪಾಲಿಕೆಯು ಪ್ರಕಟಣೆಯಲ್ಲಿ ತಿಳಿಸಿದೆ.


Click it and Unblock the Notifications
