"ಅಮಾವಾಸ್ಯೆ" ದಿನವೂ "ಸೂರ್ಯ" ಇರುತ್ತಾನೆ ಬೇಸಿಕ್ ಅರ್ಥ ಮಾಡಿಕೊಳ್ಳಿ: ಸಿ.ಎಂಗೆ ತೇಜಸ್ವಿ ಸೂರ್ಯ ಟಾಂಗ್!
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಮಾವಾಸ್ಯೆ ಎಂದು ಕರೆದಿರುವ ವಿಡಿಯೋವನ್ನು ಹಂಚಿಕೊಂಡಿರುವ ತೇಜಸ್ವಿ ಸೂರ್ಯ ಅವರು ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಅವರು ಆಗಾಗ್ಗೆ ರಾಜ್ಯ ಸರ್ಕಾರದ ವಿರುದ್ಧ ತಿರುಗಿ ಬೀಳುವುದು ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಬಗ್ಗೆ ಅವರು ಕಟುವಾಗಿ ಟೀಕೆ ಮಾಡುವುದು ಇದೆ. ಆದರೆ, ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರು ಸಹ ಸಂಸದ ತೇಜಸ್ವಿ ಸೂರ್ಯಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವುದು ಇದೆ. ಇದೀಗ ತೇಜಸ್ವಿ ಸೂರ್ಯ ಅವರನ್ನು ಅಮಾವಾಸ್ಯೆ ಎಂದು ಕರೆಯುವುದು ಭಾರೀ ಚರ್ಚೆಗೆ ಕಾರಣವಾಗಿದ್ದು, ಇದಕ್ಕೆ ತೇಜಸ್ವಿ ಸೂರ್ಯ ರಿಯಾಕ್ಟ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಂಸದ ತೇಜಸ್ವಿ ಸೂರ್ಯ ಅವರು, ಮಾನ್ಯ ಶ್ರೀ ಸಿದ್ಧರಾಮಯ್ಯ ರವರೇ, ಅಮಾವಾಸ್ಯೆಯಲ್ಲಿಯೂ ಸೂರ್ಯ ಇರುತ್ತಾನೆ. ಹುಣ್ಣಿಮೆಯಲ್ಲಿ ಕೂಡ ಸೂರ್ಯ ಇರುತ್ತಾನೆ. ಸೂರ್ಯ ವರ್ಷದ 365 ದಿನವೂ ಪ್ರಕಾಶಿಸ್ತಾನೆ. ಅಮವಾಸ್ಯೆಯಂದು ಇಲ್ಲದಿರುವುದು ಚಂದ್ರ ಮಾತ್ರ. ಚಂದ್ರನನ್ನು ಪೂಜೆ ಮಾಡುವವರ ಸಹವಾಸ ಮಾಡಿ, ಬಹುಶಃ ಸೂರ್ಯ & ಚಂದ್ರರ ನಡುವಿನ ವ್ಯತ್ಯಾಸವೇ ನಿಮಗೆ ಗೊತ್ತಾಗುತ್ತಿಲ್ಲವೆಂದು ತೋರುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಮುಂದುವರಿದು ಇನ್ನಾದರೂ ವೈಯಕ್ತಿಕ ಟೀಕೆ ಮಾಡುವುದನ್ನು ಬಿಟ್ಟು, ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಿ, ರಾಜ್ಯದ ಜನಕ್ಕೆ ಒಳ್ಳೆಯ ಆಡಳಿತ ಕೊಡುವ ಕಡೆ ಗಮನಹರಿಸಿ ಎಂದು ತಿವಿದಿದ್ದಾರೆ.












Click it and Unblock the Notifications