BS Yediyurappa: ಜಗದೀಶ್ ಶೆಟ್ಟರ್, ಸವದಿ ಸೋಲಿಗೆ ಬಿಎಸ್‌ವೈ ರಣತಂತ್ರ?
ಬೆಂಗಳೂರು: ಲಿಂಗಾಯತ ನಾಯಕರಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ ಬಳಿಕ ಕಮಲ ಪಾಳಯ ಕೆಂಡವಾಗಿದೆ. ಹೀಗಾಗಿಯೇ ಇವರಿಬ್ಬರನ್ನೂ ಸೋಲಿಸಿಯೇ ಸಿದ್ಧ ಎಂದು ಪಣತೊಟ್ಟಿರುವ ಮಾಜಿ ಸಿಎಂ ಯಡಿಯೂರಪ್ಪ (BSY) ಇಂದು ಬೆಂಗಳೂರಿನಲ್ಲಿ ಲಿಂಗಾಯತ ನಾಯಕರ ಸಭೆ ನಡೆಸಿದ್ದಾರೆ.
ಚುನಾವಣೆ ಇನ್ನೇನು ಹತ್ತಿರ ಬಂತು ಅನ್ನುವಷ್ಟರಲ್ಲಿ ಬಿಜೆಪಿಗೆ ಶಾಕ್ ಮೇಲೆ ಶಾಕ್ ಸಿಗುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಮುಖ ಲಿಂಗಾಯತ ನಾಯಕರೇ ಬಿಜೆಪಿಗೆ ಕೈಕೊಟ್ಟು ಕಾಂಗ್ರೆಸ್ ಜೊತೆ ಸೇರಿ ಟಿಕೆಟ್ ಪಡೆದಿದ್ದಾರೆ. ಹೀಗಾಗಿ ಇವರಿಬ್ಬರ ವಿರುದ್ಧ ರಣತಂತ್ರ ಹೆಣೆಯುವ ಜೊತೆಗೆ ಲಿಂಗಾಯತ ಮತಗಳನ್ನ ಉಳಿಸಿಕೊಳ್ಳುವುದು ಬಿಜೆಪಿಗೆ ದೊಡ್ಡ ಸವಾಲು. ಹೀಗಾಗಿ ಲಿಂಗಾಯತ ನಾಯಕರಿಗೆ ಬಿಜೆಪಿ ಹೈಕಮಾಂಡ್ ಖಡಕ್ ಸಂದೇಶ ನೀಡಿದ್ದು, ಬಿಎಸ್‌ವೈ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಗಿದೆ.

ಮಾಜಿ ಸಿಎಂ ಯಡಿಯೂರಪ್ಪ ಅವರ ಕುಮಾರಕೃಪಾ ರಸ್ತೆಯಲ್ಲಿರುವ ಕಾವೇರಿ ನಿವಾಸದಲ್ಲಿ ಸಭೆ ನಡೆಯಿತು. ಲಿಂಗಾಯತ ಸಮುದಾಯದ 23 ಮುಖಂಡರ ಜೊತೆ ಸಂಜೆ ಸಭೆ ಆರಂಭವಾಗಿತ್ತು. ಸಿಎಂ ಬೊಮ್ಮಾಯಿ ಸೇರಿ ಸಚಿವರು, ಶಾಸಕರು, ಸಂಸದರು, ನಿಗಮ ಮಂಡಳಿ ಅಧ್ಯಕ್ಷರು ಸೇರಿದಂತೆ 23 ಮುಖಂಡರು ಭಾಗಿಯಾಗಿದ್ದರು. ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮತ್ತು ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ. ರಾಜೇಶ್ ಉಪಸ್ಥಿತರಿದ್ದರು. ಸಭೆಯಲ್ಲಿ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
ಮೊದಲೇ ಹೇಳಿದಂತೆ ಬಿಜೆಪಿ ಹೈಕಮಾಂಡ್ ನಿರ್ದೇಶನದ ಮೇರೆಗೆ ಮಾಜಿ ಸಿಎಂ ಯಡಿಯೂರಪ್ಪ ಈ ಸಭೆ ನಡೆಸಿದರು. ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಕಾರ್ಯ ಮುಗಿಯುತ್ತಿದ್ದಂತೆ ಈ ಸಭೆ ಕರೆದಿರುವುದು ತೀವ್ರ ಕುತೂಹಲ ಕೆರಳಿಸಿದೆ. ಮತ್ತೊಂದು ಕಡೆ ಬಿಜೆಪಿಗೆ ತೀವ್ರ ಮುಜುಗರ ಉಂಟುಮಾಡುತ್ತಿರುವ ಲಿಂಗಾಯತ ವಿರೋಧಿ ಅಸ್ತ್ರಕ್ಕೆ ಪ್ರತಿಯಾಗಿ, ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಲು ರಣತಂತ್ರ ರೂಪಿಸಲಾಗಿದೆ. ಇದರ ಜೊತೆಗೆ ಪಕ್ಷಕ್ಕೆ ಆಗುತ್ತಿರುವ ಡ್ಯಾಮೇಜ್ ಸರಿಪಡಿಸಿ, ಹೆಚ್ಚಿನ ಸ್ಥಾನಗಳ ಗೆಲುವಿಗೆ ಸಭೆಯಲ್ಲಿ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ ಎನ್ನಲಾಗಿದೆ.
ಲಿಂಗಾಯತರ ವಿರುದ್ಧ ಲಿಂಗಾಯತರು?
ಈಗಿನ ಬೆಳವಣಿಗೆ ಗಮನಿಸುತ್ತಿದ್ದರೆ ಹಾಲಿ ಬಿಜೆಪಿ ನಾಯಕರು VS ಮಾಜಿ ಬಿಜೆಪಿ ನಾಯಕರ ನಡುವೆ ಭೀಕರ ಚುನಾವಣಾ ಕದನಕ್ಕೆ ಕರ್ನಾಟಕ ಸಾಕ್ಷಿಯಾಗುವುದು ಬಹುತೇಕ ಪಕ್ಕಾ. ಒಂದು ಕಡೆ ಬಿಜೆಪಿ ಹೈಕಮಾಂಡ್ ಡ್ಯಾಮೇಜ್ ಕಂಟ್ರೋಲ್‌ಗೆ ಖುದ್ದು ಬಿಎಸ್‌ವೈ ಅವರನ್ನ ಅಖಾಡಕ್ಕೆ ಇಳಿಸಿದೆ. ಇನ್ನೊಂದು ಕಡೆ ಲಿಂಗಾಯತ ನಾಯಕನ ವಿರುದ್ಧ ಲಿಂಗಾಯತ ನಾಯಕನನ್ನೇ ವಾಗ್ದಾಳಿಗೆ ಇಳಿಸುವ ತಂತ್ರ ಇದಾಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಇಷ್ಟೆಲ್ಲದರ ನಡುವೆ ಟ್ವೀಟ್ ವಾರ್ ಕೂಡ ಬಲುಜೋರಾಗಿ ಸಾಗಿದೆ.
ಅವರು ಹೋದರೂ ಸಮಸ್ಯೆಯಿಲ್ಲ!
ಜಗದೀಶ್ ಶೆಟ್ಟರ್, ಲಕ್ಷಣ್ ಸವದಿ ವಿರುದ್ಧ ನಿನ್ನೆ ಶಿವಮೊಗ್ಗದಲ್ಲಿ ವಾಗ್ದಾಳಿ ನಡೆಸಿದ್ದ ಮಾಜಿ ಸಿಎಂ ಬಿಎಸ್‌ವೈ, ರಾಜ್ಯದಲ್ಲಿ ಬಿಜೆಪಿ ಗೆಲುವು ನಿಶ್ಚಿತ, ಜಗದೀಶ್ ಶೆಟ್ಟರ್, ಲಕ್ಷಣ್ ಸವದಿ ಹೋದ್ರೂ ಪಕ್ಷಕ್ಕೆ ಸಮಸ್ಯೆಯಿಲ್ಲ ಎಂದು ತಿರುಗೇಟು ನೀಡಿದ್ದರು. ಅಲ್ಲದೆ ಮೊದಲಿನಂತೆಯೇ 125-130 ಗೆದ್ದು ಬಿಜೆಪಿ ಅಧಿಕಾರಕ್ಕೆ ಬರಲಿದೆ. ಯಾರ ಸಹಕಾರ ಇಲ್ಲದೇ ಸರ್ಕಾರ ರಚನೆ ಸಹ ಮಾಡುತ್ತೇವೆ ಎಂದಿದ್ದರು. ತವರು ಕ್ಷೇತ್ರದಲ್ಲಿ ನಿಂತು ಬಿಜೆಪಿ ಗೆಲುವಿನ ಬಗ್ಗೆ ಯಡಿಯೂರಪ್ಪ ಭರವಸೆ ವ್ಯಕ್ತಪಡಿಸಿದ್ದರು. ಮರುದಿನವೇ ಲಿಂಗಾಯತ ನಾಯಕರ ಸಭೆ ನಡೆಸಿದ್ದಾರೆ.
ಸವದಿ, ಶೆಟ್ಟರ್ ಕ್ಷೇತ್ರಗಳೇ ಟಾರ್ಗೆಟ್?
ಬಿಜೆಪಿ ತಮಗೆ ಟಿಕೆಟ್ ನೀಡಿಲ್ಲ ಅಂತಾ ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಡಿಸಿಎಂ ಲಕ್ಷಣ್ ಸವದಿ ವಿರುದ್ಧ ಬಿಜೆಪಿ ತೊಡೆತಟ್ಟಿದೆ. ಈ ಕಾರಣಕ್ಕೆ ಜಗದೀಶ್ ಶೆಟ್ಟರ್ ಮತ್ತು ಲಕ್ಷಣ್ ಸವದಿ ಸ್ಪರ್ಧಿಸುವ ಕ್ಷೇತ್ರಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಈ ಇಬ್ಬರೂ ನಾಯಕರ ಸೋಲಿಗೆ ರಣತಂತ್ರ ಸಿದ್ಧವಾಗುತ್ತಿದೆ. ಇದಕ್ಕಾಗಿ ಬಿಜೆಪಿಯ ಕೇಂದ್ರದ ಘಟಾನುಘಟಿ ನಾಯಕರೇ ಶೆಟ್ಟರ್ ಮತ್ತು ಸವದಿ ಕ್ಷೇತ್ರದಲ್ಲಿ ಭಾರಿ ಪ್ರಚಾರ ನಡೆಸುವ ಸಾಧ್ಯತೆ ಇದೆ.
ಒಟ್ಟಾರೆ ಮತದಾನಕ್ಕೆ ಕೌಂಟ್‌ಡೌನ್ ಶುರುವಾಗಿರುವ ಬೆನ್ನಲ್ಲೇ ಪಕ್ಷಾಂತರ ಪರ್ವ ಜೋರಾಗಿದೆ. ಈ ನಡುವೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟಿರುವುದು ಬಿಜೆಪಿ ನಾಯಕರನ್ನು ಕೆರಳಿಸಿದೆ. ಇದರ ಜೊತೆಗೆ ಲಕ್ಷ್ಮಣ ಸವದಿ ವಿಚಾರ ಕೂಡ ಇದೇ ರೀತಿ ಬಿಜೆಪಿಗೆ ಹಿನ್ನಡೆ ತಂದಿದೆ. ಇಷ್ಟೆಲ್ಲದರ ನಡುವೆ ರಾಜ್ಯದಲ್ಲಿ ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಅಂದೇ ಎಲ್ಲರ ರಾಜಕೀಯ ಭವಿಷ್ಯವೂ ನಿರ್ಧಾರವಾಗಲಿದೆ.












Click it and Unblock the Notifications