ವಿರೋಧ ಪಕ್ಷದ ನಾಯಕನ ಆಯ್ಕೆ ಯಾವಾಗ? ಬಿ.ಎಸ್. ಯಡಿಯೂರಪ್ಪ ಕೊಟ್ರು ಸ್ಪಷ್ಟ ಮಾಹಿತಿ
ಬೆಂಗಳೂರು, ಜುಲೈ 3: ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಆಯ್ಕೆಗಿಂತ ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆಯೇ ಹೆಚ್ಚು ಕಗ್ಗಂಟಾಗಿದೆ. ಫಲಿತಾಂಶ ಬಂದು ಒಂದೂವರೆ ತಿಂಗಳಾದರೂ ಬಿಜೆಪಿ ಇನ್ನೂ ವಿರೋಧ ಪಕ್ಷದ ನಾಯಕನ ಹೆಸರು ಘೋಷಿಸಿಲ್ಲ. ಸದನ ಆರಂಭಕ್ಕೆ ಮುನ್ನ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡುವುದಾಗಿ ಬಿಜೆಪಿ ನಾಯಕರು ಹೇಳಿದ್ದರೂ ಅದು ಇನ್ನೂ ಆಗಿಲ್ಲ.
ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿದೆ. ಇದಕ್ಕಾಗಿ ಬಿಎಸ್ ಯಡಿಯೂರಪ್ಪ ಅವರನ್ನು ದೆಹಲಿಗೆ ಕರೆಸಿಕೊಂಡು ಚರ್ಚಿಸಿದೆ. ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ ಬಳಿಕ ಬಿಎಸ್‌ವೈ ಬೆಂಗಳೂರಿಗೆ ವಾಪಸಾಗಿದ್ದು, ವಿರೋಧ ಪಕ್ಷದ ನಾಯಕನ ಆಯ್ಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಿಎಸ್‌ವೈ, ಹೈಕಮಾಂಡ್ ಜೊತೆ ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರವಾಗಿ ಚರ್ಚೆ ಮಾಡಿದ್ದು, ನಾಳೆ (ಜುಲೈ 4) ಹೆಸರು ಘೋಷಣೆ ಮಾಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.
ನಾಳೆ ಅಂತಿಮ ನಿರ್ಧಾರ!
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ಮಾತನಾಡಿದ್ದೇನೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಸಿಕ್ಕಿದ್ದರು, ಅವರ ಜೊತೆ ಕೂಡ ಚರ್ಚೆ ಮಾಡಿದ್ದೇನೆ. ನಾಳೆ ಅವರು ಅಂತಿಮ ತೀರ್ಮಾನ ಮಾಡುತ್ತಾರೆ. ಹೆಸರು ಅಂತಿಮಗೊಳಿಸಿ ನಮಗೆ ತಿಳಿಸುತ್ತಾರೆ ಎಂದು ಹೇಳಿದರು.
ಬಿಜೆಪಿಗೆ ಕಗ್ಗಂಟಾದ ವಿರೋಧ ಪಕ್ಷದ ನಾಯಕನ ಆಯ್ಕೆ!
ಅಷ್ಟಕ್ಕೂ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಹೈಕಮಾಂಡ್ ಇಷ್ಟೊಂದು ತಡ ಮಾಡುತ್ತಿರುವುದು ಏಕೆ ಎನ್ನುವ ಪ್ರಶ್ನೆ ಕಾಡುವುದು ಸಹಜ. ರಾಜ್ಯದಲ್ಲಿ ಬಿಜೆಪಿ ಹೀನಾಯ ಸೋಲಿನ ನಂತರ ಪಾಠ ಕಲಿತಿರುವ ಹೈಕಮಾಂಡ್ ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿದೆ. 2024ರಲ್ಲಿ ಲೋಕಸಭಾ ಚುನಾವಣೆ ಇರುವುದರಿಂದ ಸಮರ್ಥವಾದ ವಿರೋಧ ಪಕ್ಷದ ನಾಯಕನ ಅಗತ್ಯವಿದೆ. ಜಾತಿ ಲೆಕ್ಕಾಚಾರ ಕೂಡ ಆಯ್ಕೆಯಲ್ಲಿ ಕೆಲಸ ಮಾಡಲಿದೆ.
ಹಲವು ಆಕಾಂಕ್ಷಿಗಳು ಇರುವುದರಿಂದ ಆಯ್ಕೆ ಮತ್ತಷ್ಟು ಕಗ್ಗಂಟಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್, ಅಶೋಕ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ರೇಸ್‌ನಲ್ಲಿದ್ದಾರೆ. ಎಲ್ಲರನ್ನೂ ಅಳೆದು ತೂಗಿ ಹೈಕಮಾಂಡ್ ತೀರ್ಮಾನ ಮಾಡಲಿದೆ, ಇವರಲ್ಲೇ ಯಾರನ್ನಾದರೂ ನೇಮಕ ಮಾಡುತ್ತಾ ಅಥವಾ ಅಚ್ಚರಿಯ ಹೆಸರು ಘೋಷಿಸುತ್ತಾ ಎನ್ನುವುದು ಜುಲೈ 4ರಂದು ತಿಳಿಯುವ ಸಾಧ್ಯತೆ ಹೆಚ್ಚಾಗಿದೆ.












Click it and Unblock the Notifications