Boycott of Voting: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಶಿವಪುರಿ ಕಾಲೋನಿಯಲ್ಲಿ ಮತದಾನ ಬಹಿಷ್ಕಾರ: ಕಾರಣವೇನು?
ಬೆಂಗಳೂರು ಏಪ್ರಿಲ್ 26: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಶಿವಪುರಿ ಕಾಲೋನಿಯಲ್ಲಿ ಮತದಾನ ಬಹಿಷ್ಕಾರ ಮಾಡಲಾಗಿದೆ. ಇಲ್ಲಿನ ಸಮಸ್ಯೆಗಳನ್ನು ಬಗೆ ಹರಿಸುವವರೆಗೂ ಮತ ಚಲಾಯಿಸುವುದಿಲ್ಲ ಎಂದು ಮತದಾರರು ಪಟ್ಟು ಹಿಡಿದಿದ್ದಾರೆ.
ಟಿ ದಾಸರಹಳ್ಳಿ ವ್ಯಾಪ್ತಿಯಲ್ಲಿ ಬರುವ ಶಿವಪುರಿ ಕಾಲೋನಿಯಲ್ಲಿ ಈವರೆಗೂ ಒಂದೇ ಒಂದು ಮತದಾನವಾಗಿಲ್ಲ. ಮಧ್ಯಾಹ್ನವಾದರೂ ಮತದಾರರು ಮತ ಚಲಾಯಿಸುವುದಿಲ್ಲ ಎಂದು ಮತದಾನ ಬಹಿಷ್ಕಾರ ಮಾಡಿದ್ದಾರೆ. ಶಿವಪುರಿಯಲ್ಲಿ ದಲಿತರು ಹೆಚ್ಚು ವಾಸವಾಗಿದ್ದಾರೆ.
ಇಲ್ಲಿ ಮೂಲಭೂತ ಸೌಕರ್ಯಗಳಿಂದ ಜನ ವಂಚಿತರಾಗಿದ್ದಾರೆ. ತಮಗೆ ಸೌಕರ್ಯಗಳನ್ನು ನೀಡುವವರೆಗೂ ಮತ ಚಲಾಯಿಸುವುದಿಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.
'ನಮಗೆ ಹಕ್ಕು ಪತ್ರ ಇಲ್ಲ. ಅರ್ಜಿ ಹಾಕಿದಿವಿ ಆದರೂ ಬಂದಿಲ್ಲ. ಬೆಳಿಗ್ಗೆಯಿಂದ ಸಂಜೆಯವರೆಗೆ ಶಾಸಕರ ಮನೆ ಮುಂದೆ ನಾಯಿಯಂತೆ ಕಾದರೂ ಪ್ರಯೋಜನವಾಗಿಲ್ಲ' ಎಂದು ನಿಂದಿಸಿದರು. 'ಅಭ್ಯರ್ಥಿಗಳು ಬರುತ್ತಾರೆ ಹೋಗುತ್ತಾರೆ. ಮತ ನೀಡಿ ಎಂದು ಮನವಿ ಮಾಡುತ್ತಾರೆ. ನಮ್ಮ ಸಮಸ್ಯೆಗಳನ್ನೂ ಆಲಿಸುತ್ತಾರೆ. ಆದರೆ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ' ಎಂದು ಸ್ಥಳೀಯರು ಆರೋಪಿಸಿದ್ದಾರೆ.
'ಬೇಸಿಗೆಯಲ್ಲಿ ನೀರಿನ ಸಮಸ್ಯೆ ತುಂಬಾ ಇದೆ. ಒಂದು ನೀರಿನ ಟ್ಯಾಂಕ್ ಇಲ್ಲಿಲ್ಲ. ಕಾವೇರಿ ನೀರು ಮೂರು ದಿನಕ್ಕೆ ಒಂದು ಬಾರಿ ಬಿಟ್ಟರೆ ಅದು ದೊಡ್ಡ ವಿಚಾರ. ಆ ನೀರನ್ನು ಒಂದು ವಾರ ಇಟ್ಟುಕೊಂಡರೆ ಹುಳ ಬೀಳುತ್ತವೆ. ಇದನ್ನು ಬಳಕೆ ಮಾಡುವುದು ಹೇಗೆ? ಎಷ್ಟೋ ಬಾರಿ ಶಾಸಕರ ಗಮನಕ್ಕೆ ತಂದಿದ್ದೇವೆ. ಆದರೆ ಪ್ರಯೋಜನವಾಗಿಲ್ಲ' ಎಂದು ಶಿವಪುರಿ ಕಾಲೋನಿಯ ಜನ ಆರೋಪಿಸಿದ್ದಾರೆ.

'ನೀರು ಒಂದೇ ಅಲ್ಲ ವಿದ್ಯುತ್ ಕೂಡ ಇಲ್ಲ. ವಿದ್ಯುತ್ ಇಲ್ಲದೆ ಜೀವನ ಮಾಡುವುದು ಹೇಗೆ? ನಾವೆಲ್ಲಾ ಬದುಕುವುದು ಹೇಗೆ? ನಮಗಿಲ್ಲದ ರಾಜಕಾರಣಿಗಳಿಗೆ ನಮ್ಮ ಮತ ಯಾಕೆ?' ಎಂದು ಜನ ಆಕ್ರೋಶಗೊಂಡರು. ಮಧ್ಯಾಹ್ನದಿಂದ ಮತದಾನ ಆಗದೇ ಇದ್ದರೂ ಯಾವುದೇ ರಾಜಕಾರಣಿಗಳು ಇಲ್ಲಿಗೆ ಭೇಟಿ ನೀಡಿ ಮತಚಲಾಯಿಸುವಂತೆ ಮನವೊಲಿಸುವ ಪ್ರಯತ್ನವನ್ನೂ ಮಾಡಿಲ್ಲ. ಹೀಗಾಗಿ ಸಂಜೆವರೆಗೂ ಇಲ್ಲಿನ ಜನ ಮನಬದಲಾಯಿಸುವ ಲಕ್ಷಣಗಳು ಕಾಣಿಸುತ್ತಿಲ್ಲ.
ಚಿತ್ರದುರ್ಗದಲ್ಲೂ ಮತ ಬಹಿಷ್ಕಾರ
ಚಿತ್ರದುರ್ಗದ ಸಿದ್ದಾಪುರ ಗ್ರಾಮದ ಮತಗಟ್ಟೆ 76ರಲ್ಲಿ ಮತದಾನವೇ ಆಗಿಲ್ಲ. ಯಾಕೆಂದರೆ ಇಲ್ಲಿ ಮತದಾರರು ನಾನಾ ಬೇಡಿಕೆಗಳನ್ನು ಮುಂದಿಟ್ಟಿದ್ದು, ಬೇಡಿಕೆ ಈಡೇರಿದರೆ ಮಾತ್ರ ಮತ ಚಲಾಯಿಸುವುದಾಗಿ ಪಟ್ಟು ಹಿಡಿದಿದ್ದಾರೆ.
ಈ ಸ್ಥಳದಲ್ಲಿ 500 ಹೆಚ್ಚು ಮತದಾರರು ಇದ್ದಾರೆ. DMF ಫಂಡ್ ಇಲ್ಲದೆ ಗ್ರಾಮ ಅಭಿವೃದ್ಧಿ ಆಗಿಲ್ಲ. ಹೀಗಾಗಿ ಗಣಿಬಾಧಿತ ಪ್ರದೇಶ ಪಟ್ಟಿಗೆ ಊರನ್ನು ಸೇರುವಂತೆ ಒತ್ತಾಯಿಸಿದ್ದಾರೆ. ಆದರೆ ಮಧ್ಯಾಹ್ನ ಕಳೆಯುತ್ತಾ ಬಂದರೂ ಇಲ್ಲಿನ ಜನರನ್ನು ಮನವೊಲಿಸುವ ಪ್ರಯತ್ನಗಳು ನಡೆದಿಲ್ಲ.












Click it and Unblock the Notifications