Breaking: ಬೆಂಗಳೂರು ಮಳೆಗೆ ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿತ; 7 ಮಂದಿ ಸಾವು
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ಸಂಜೆ ಅಬ್ಬರಿಸಿದ ಭಾರೀ ಮಳೆಗೆ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದಿದ್ದು, ದುರ್ಘಟನೆಯಲ್ಲಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸಂಜೆ ಸುರಿದ ಧಾರಾಕಾರ ಮಳೆಯ ಆರ್ಭಟಕ್ಕೆ ತಡೆಯಲಾರದೆ ಆಸ್ಪತ್ರೆಯ ಗೋಡೆಯು ದಿಢೀರನೆ ಕುಸಿದು ಬಿದ್ದಿದೆ ಎಂದು ತಿಳಿದುಬಂದಿದೆ.
ಗೋಡೆಯ ಪಕ್ಕದ ಫುಟ್‌ಪಾತ್‌ನಲ್ಲಿ ತಳ್ಳುಗಾಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳು ಹಾಗೂ ಅಲ್ಲಿ ಆಶ್ರಯ ಪಡೆದಿದ್ದ ಸಾರ್ವಜನಿಕರು ಅವಶೇಷಗಳ ಅಡಿ ಸಿಲುಕಿದ್ದಾರೆ ಎನ್ನಲಾಗಿದೆ. ಗೋಡೆ ಕುಸಿದ ತಕ್ಷಣ ಸ್ಥಳೀಯರು ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದ್ದು, ಕೆಲವರನ್ನು ಸುರಕ್ಷಿತವಾಗಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸರು ಆಗಮಿಸಿದ್ದು, ಅವಶೇಷಗಳ ತೆರವು ಕಾರ್ಯಾಚರಣೆ ಮುಂದುವರಿದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ.
ನಗರದ ಹಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದ್ದು, ವಿಧಾನಸೌಧದ ಆವರಣಕ್ಕೂ ನೀರು ನುಗ್ಗಿದೆ. ಬಲವಾದ ಗಾಳಿ ಮತ್ತು ಮಳೆಯಿಂದಾಗಿ ನಗರದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಈ ಬಗ್ಗೆ ಹೆಚ್ಚಿನ ವಿವರ ಸದ್ಯದಲ್ಲೇ ಅಪ್‌ಡೇಟ್ ಆಗಲಿದೆ.
ಬೆಂಗಳೂರಿನಲ್ಲಿ ಇಂದು ಸಂಜೆ ಆರ್ಭಟಿಸಿದ ಧಾರಾಕಾರ ಮಳೆ ಹಾಗೂ ಬಿರುಗಾಳಿಗೆ ಮಳೆಯಿಂದ ರಕ್ಷಣೆ ಪಡೆಯಲು ಗೋಡೆಯ ಪಕ್ಕದಲ್ಲಿ ಆಶ್ರಯ ಪಡೆದಿದ್ದ ಸಾರ್ವಜನಿಕರು ಮತ್ತು ಅಲ್ಲಿಯೇ ವ್ಯಾಪಾರ ಮಾಡುತ್ತಿದ್ದ ತಳ್ಳುಗಾಡಿ ವ್ಯಾಪಾರಿಗಳು ಈ ಅವಘಡಕ್ಕೆ ಬಲಿಯಾಗಿದ್ದಾರೆ. ಮೃತರ ಪೈಕಿ ಹೆಚ್ಚಿನವರು ರಸ್ತೆಯಲ್ಲಿ ತಳ್ಳುಗಾಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳಾಗಿದ್ದು, ಮಳೆಯಿಂದ ರಕ್ಷಣೆ ಪಡೆಯಲು ಗೋಡೆಯ ಪಕ್ಕದ ಟಾರ್ಪಾಲಿನ್ ಶೀಟ್ ಅಡಿಯಲ್ಲಿ ಆಶ್ರಯ ಪಡೆದಿದ್ದರು. ಈ ದುರಂತದಲ್ಲಿ ಇತರ ಏಳು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಶಾಸಕ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಸಿದ್ದರಾಮಯ್ಯ ಭೇಟಿ
ಗೋಡೆ ಕುಸಿದ ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಸುಮಾರು 17 ಮಂದಿ ಅವಶೇಷಗಳ ಅಡಿ ಸಿಲುಕಿರುವ ಸಾಧ್ಯತೆ ಇದ್ದು, ಜೆಸಿಬಿ ಯಂತ್ರಗಳ ಸಹಾಯದಿಂದ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಗಾಯಗೊಂಡವರನ್ನು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿ ಎದುರಾಗಿದೆ. ಬೆಂಗಳೂರಿನಲ್ಲಿ ಇಂದು ಸುರಿದ ಭಾರೀ ಮಳೆಯಿಂದಾಗಿ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಬಳಿ ಸಂಭವಿಸಿದ ಗೋಡೆ ಕುಸಿತದ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿದ್ದಾರೆ.














Click it and Unblock the Notifications