ಲಸಿಕೆ ಪಡೆದರೆ ಮಾತ್ರ ಮಾಲ್, ಥಿಯೇಟರ್ ಎಂಟ್ರಿಗೆ ಅವಕಾಶ: ಬಿಬಿಎಂಪಿ
ಬೆಂಗಳೂರು, ಡಿಸೆಂಬರ್ 06: ಓಮಿಕ್ರಾನ್ ಸೋಂಕು ರಾಜ್ಯದಲ್ಲಿ ಕಾಣಿಸಿಕೊಂಡ ಹಿನ್ನೆಲೆಯಿಂದಾಗಿ ಇತ್ತೀಚೆಗೆ ರಾಜ್ಯ ಸರ್ಕಾರವು ಮಾರ್ಗಸೂಚಿಯನ್ನು ಪರಿಷ್ಕರಣೆ ಮಾಡಿದೆ. ಈಗ ಬಿಬಿಎಂಪಿ ಕೂಡಾ ಮಾರ್ಗಸೂಚಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ಮಾರ್ಗಸೂಚಿ ಪ್ರಕಾರವಾಗಿ, "ಎರಡು ಡೋಸ್ ಲಸಿಕೆ ಪಡೆದಿದ್ದವರಿಗೆ ಮಾತ್ರ ಮಾಲ್, ಶಾಪಿಂಗ್ ಕಾಂಪ್ಲೆಕ್ಸ್, ಥಿಯೇಟರ್ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ."
ಇನ್ನು ಮುಂದೆ ಮಾಲ್, ಶಾಪಿಂಗ್ ಕಾಂಪ್ಲೆಕ್ಸ್, ಥಿಯೇಟರ್ ಪ್ರವೇಶಕ್ಕೂ ಮುನ್ನ ಎರಡೂ ಡೋಸ್ ಲಸಿಕೆಯನ್ನು ಪಡೆಯಲಾಗಿದೆಯೇ ಎಂಬ ಪ್ರಮಾಣ ಪತ್ರವನ್ನು ತೋರಿಸಿ ಪ್ರವೇಶ ಮಾಡಬೇಕು. ವಾಣಿಜ್ಯ ಮಳಿಗೆಗಳಲ್ಲಿ ಪ್ರಮಾಣಪತ್ರವನ್ನು ಪರಿಶೀಲನೆ ಮಾಡಿ ಒಳಗೆ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕೃತ ಆದೇಶ ಹೊರಡಿಸಿದೆ.
ಎಲ್ಲಾ ವಾಣಿಜ್ಯ ಮಳಿಗೆ ಹಾಗೂ ಥಿಯೇಟರ್‌ಗಳಲ್ಲಿ ಎರಡೂ ಡೋಸ್ ಕೋವಿಡ್ ಲಸಿಕೆಯನ್ನು ಪಡೆದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆಯೇ ಎಂಬುವುದನ್ನು ಬಿಬಿಎಂಪಿ ಅಧಿಕಾರಿಗಳು, ಮಾರ್ಷಲ್ಗಳು ಪರಿಶೀಲಿಸುತ್ತಾರೆ. ಎರಡೂ ಡೋಸ್ ಕೋವಿಡ್ ಲಸಿಕೆಯನ್ನು ಪಡೆಯದವರಿಗೆ ಮಳಿಗೆ ಪ್ರವೇಶಕ್ಕೆ ಅವಕಾಶ ನೀಡಿದರೆ ಅಂತಹ ಮಳಿಗೆಗಳ ಮಾಲೀಕರ ವಿರುದ್ಧವಾಗಿ ನಿರ್ದಾಕ್ಷಿಣ್ಯ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.

ಇನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆಯೇ ಹಾಗೂ ಎಲ್ಲರೂ ಮಾಸ್ಕ್ ಅನ್ನು ಧರಿಸುತ್ತಿದ್ದಾರೆಯೇ ಎಂದು ಕೂಡಾ ವಾಣಿಜ್ಯ ಮಳಿಗೆಯ ಸಿಬ್ಬಂದಿಗಳು ಪರಿಶೀಲನೆ ಮಾಡಬೇಕು. ಎಲ್ಲಾ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಸ್ಕ್ರೀನಿಂಗ್ ನಡೆಸಲು ಹಾಗೂ ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ಪರಿಶೀಲನೆ ಮಾಡಲು ಅಗತ್ಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕು ಎಂದು ಕೂಡಾ ಬಿಬಿಎಂಪಿ ಸೂಚಿಸಿದೆ.
ಬಿಬಿಎಂಪಿ ಅಧಿಕೃತ ಮಾರ್ಗಸೂಚಿ
* ಮಾಲ್, ಶಾಂಪಿಂಗ್ ಕಾಂಪ್ಲೆಕ್ಸ್, ಥಿಯೇಟರ್, ಸಿನಿಮಾ ಹಾಲ್‌ಗೆ ಹೋಗುವವರು ಎರಡೂ ಡೋಸ್ ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡಿರಬೇಕು.
* ಮಳಿಗೆಯ ಮಾಲೀಕರು ಕೋವಿಡ್ ಮಾರ್ಗಸೂಚಿಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಪಾಲಿಸಲಾಗುತ್ತಿದೆಯೇ ಎಂದು ಪರಿಶೀಲಿಸಬೇಕು.
* ಸ್ಕ್ರೀನಿಂಗ್ ಹಾಗೂ ಕೋವಿಡ್ ಲಸಿಕೆ ಪ್ರಮಾಣ ಪತ್ರ ಪರಿಶೀಲನೆಗಾಗಿ ಅಗತ್ಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕು.
ಕರ್ನಾಟಕ ರಾಜ್ಯ ಕೋವಿಡ್ ಮಾರ್ಗಸೂಚಿ ಹೀಗಿದೆ..
ರಾಜ್ಯ ರಾಜಧಾನಿಯಲ್ಲಿ ಓಮಿಕ್ರಾನ್ ದೃಢಪಟ್ಟ ಬೆನ್ನಲ್ಲೇ ರಾಜ್ಯ ಸರ್ಕಾರವು ಉನ್ನತ ಮಟ್ಟದ ಸಭೆಯನ್ನು ನಡೆಸಿದೆ, ಬಳಿಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಶಾಲಾ-ಕಾಲೇಜುಗಳಲ್ಲಿ ಹೆಚ್ಚು ಪ್ರಕರಣಗಳು ಕಂಡು ಬರುತ್ತಿರುವುದರಿಂದ ಫೋಷಕರಿಗೆ ಎರಡು ಡೋಸ್ ಆಗಿದ್ದರೆ ಮಾತ್ರ ಅವರ ಮಕ್ಕಳಿಗೆ ಶಾಲಾ-ಕಾಲೇಜುಗಳಿಗೆ ಬರಲು ಅವಕಾಶ ನೀಡಲಾಗುತ್ತದೆ. ಯಾವುದೇ ಶಾಲೆಯಲ್ಲಿ ಸಮಾರಂಭ ಮಾಡುವಂತಿಲ್ಲ. ಜೊತೆಗೆ ಮಾಲ್, ಸಿನಿಮಾ ಮಂದಿರಗಳಿಗೆ ಎರಡು ಡೋಸ್ ಹಾಕಿಸಿಕೊಂಡವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲು ಸೂಚಿಸಲಾಗಿದೆ. ಐಸಿಯು, ಹೆಚ್ಚು ಬೆಡ್‌ಗಳನ್ನು ಮತ್ತೆ ಸ್ಥಾಪಿಸಬೇಕು. ಹೆಚ್ಚಿನ ಆಕ್ಸಿಜನ್ ಕೂಡ ವ್ಯವಸ್ಥೆ ಮಾಡಲಾಗುತ್ತಿದೆ. ರಾಜ್ಯಾದ್ಯಂತ ಕಂಟ್ರೋಲ್ ರೂಂ ಮತ್ತೆ ಪ್ರಾರಂಭ ಮಾಡಲಾಗಿದೆ. ಅದಕ್ಕೆ ಬೇಕಾದ ಸಿಬ್ಬಂದಿ ವರ್ಗವನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ. ಅಗತ್ಯವಿರುವ ಔಷಧಿ ಖರೀದಿಗೂ ಸೂಚನೆ ಮಾಡಲಾಗಿದೆ. ಮದುವೆ ಸಮಾರಂಭಗಳಲ್ಲಿ ಐದು ನೂರು ಜನ ಮಾತ್ರ ಸೇರಬೇಕು. ವಿಮಾನ ನಿಲ್ದಾಣದಲ್ಲಿ ಟೆಸ್ಟಿಂಗ್ ಕಡ್ಡಾಯ ಮಾಡಲಾಗಿದೆ. ನೆಗೆಟಿವ್ ರಿಪೋರ್ಟ್ ಬಂದರೆ ಮಾತ್ರ ವಿಮಾನ ನಿಲ್ದಾಣದಲ್ಲಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಜೊತೆಗೆ ನೆಗೆಟಿವ್ ಬಂದರೆ ಮಾತ್ರ ಹೊರಗೆ ಕಳುಹಿಸಲಾಗುತ್ತದೆ. ಸದ್ಯಕ್ಕೆ ಯಾವುದೇ ನೈಟ್ ಕರ್ಫ್ಯೂ ಇಲ್ಲ. ಇದರ ಬಗ್ಗೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿ ನಿರ್ಧಾರ ಕೂಗೊಳ್ಳಲಾಗುತ್ತದೆ. ಸೋಂಕಿನ ಕುರಿತು ಅಧ್ಯಯನ ಬಂದಿಲ್ಲ. ಈ ಸೋಂಕು ತೀವ್ರತೆ ಇಲ್ಲ ಎಂದು ಸರ್ಕಾರ ತಿಳಿಸಿದೆ.












Click it and Unblock the Notifications