ಕೈಕೊಟ್ಟ ಮುಂಗಾರು,ಕೆಟ್ಟ ಬೋರ್‌ವೆಲ್: ಬೆಂಗಳೂರಲ್ಲಿ ನೀರಿಗೆ ಹಾಹಾಕಾರ
ಬೆಂಗಳೂರು, ಜುಲೈ 12: ರಾಜ್ಯಾದ್ಯಂತ ಮುಂಗಾರು ಚುರುಕುಗೊಂಡಿದ್ದರೂ ಬೆಂಗಳೂರಲ್ಲಿ ಮಾತ್ರ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ.
ಒಂದೆಡೆ ಕೆರೆಗಳ ಹೂಳೆತ್ತದೆ ಬರಡಾಗಿದೆ, ಇನ್ನೊಂದೆಡೆ ಇರುವ ಬೋರ್‌ವೆಲ್‌ಗಳೂ ಹಾಳಾಗಿದ್ದು, ನೀರಿಗೆ ತತ್ವಾರ ಎದುರಾಗಿದೆ.ಮುಂಗಾರು ಕೈಕೊಟ್ಟಿದ್ದು ಬೆಂಗಳೂರು ಆಸುಪಾಸಿನಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಆರಂಭವಾಗಿದೆ.
ಕೊಳವೆಬಾವಿಗಳು ಕೆಟ್ಟು ನಿಂತು ಒಂದು ತಿಂಗಳಾದರೂ ದುರಸ್ತಿಗೊಳಿಸಿದ ಕಾರಣ ಸಾರ್ವಜನಿಕರ ದೈನಂದಿನ ಜೀವನಕ್ಕೆ ತೊಂದರೆಯಾಗಿದೆ.

ಬೆಂಗಳೂರು ಉತ್ತರ ತಾಲೂಕಿಗೆ ಸೇರಿರುವ ಚಿಕ್ಕಬಾಣಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುವೆಂಪು ನಗರದಲ್ಲಿ ಸಾರ್ವಜನಿಕರ ಬಳಕೆಗಾಗಿ ಎರಡು ಕೊಳವೆಬಾವಿಗಳನ್ನು ಕೊರೆಯಿಸಲಾಗಿದ್ದು, ಈ ಎರಡು ಕೊಳವೆಬಾವಿಗಳಿಗೆ ಅಳವಡಿಸಿರುವ ಪಂಪ್ ಸೆಟ್ ಗಳು ಹಾಳಾಗಿರುವ ಕಾರಣ ಕಳೆದ 27 ದಿನಗಳಿಂದ ಕುವೆಂಪು ನಗರದ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಖಾಸಗಿ ಕುಡಿಯುವ ನೀರು ಪೂರೈಕೆದಾರರಿಂದ ನೀರನ್ನು ಹಣಕೊಟ್ಟು ಸಾರ್ವಜನಿಕರು ಖರೀದಿಸುತ್ತಿದ್ದು, ನೀರಿಗಾಗಿ ಹಾಹಾಕಾರವುಂಟಾಗಿದೆ, ಸಾರ್ವಜನಿಕರು ಅಡಳಿತ ವ್ಯವಸ್ಥೆಯ ಮೌನನಿರ್ಲಕ್ಷ್ಯದ ಕುರಿತು ಆಕ್ರೋಶಗೊಂಡಿದ್ದಾರೆ. ಈ ಸಮಸ್ಯೆಗಳ ಕುರಿತು ಸ್ಥಳೀಯ ಪಂಚಾಯತ್ ಆಡಳಿತವನ್ನು ಸಂಪರ್ಕಿಸಿದರೂ ಪ್ರಸ್ತುತದವರೆಗೂ ಕೊಳವೆಬಾವಿಗಳನ್ನು ದುರಸ್ತಿಪಡಿಸಿಲ್ಲ.
ಒಳಚರಂಡಿ ವ್ಯವಸ್ಥೆಯು ಪೂರ್ಣ ಅನುಷ್ಠಾನ ಆಗಿಲ್ಲ, ಇದರಿಂದ ನಗರದ ಒಳಚರಂಡಿಯ ನೀರು ಹೆಸರಘಟ್ಟ ಮುಖ್ಯರಸ್ತೆಗೆ ಹರಿದು ವಾಹನ ಸವಾರರ ಜೀವಕ್ಕೂ ಆಪಾಯ ತಂದೊಡ್ಡುತ್ತಿದೆ.
ಆದಷ್ಟು ಬೇಗ ಕೊಳವೆಬಾವಿಯನ್ನು ದುರಸ್ತಿಪಡಿಸಿ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಒದಗಿಸುವಂತೆ ಹಾಗೂ ಅಲ್ಲಿಯವರೆಗೂ ತುರ್ತು ನೀರಿನ ಸೌಲಭ್ಯವನ್ನು ವಾಹನಗಳ ಮೂಲಕ ಒದಗಿಸಬೇಕೆಂದು ಸಾರ್ವಜನಿಕರು ಇಂದು ಚಿಕ್ಕಬಾಣಾವರ ಪಂಚಾಯತ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.












Click it and Unblock the Notifications