ಬೆಂಗಳೂರು ನಗರಕ್ಕೆ ಹೊಸ ಆಯುಕ್ತರು: ಇವರೇ ಮುಂದಿನ ಪೊಲೀಸ್ ಕಮಿಷನರ್?
ಬೆಂಗಳೂರು, ಜ 1: ರಾಜಧಾನಿ ಬೆಂಗಳೂರು ನಗರಕ್ಕೆ ಹೊಸ ಪೊಲೀಸ್ ಕಮಿಷನರ್ ಆಯ್ಕೆ ಪ್ರಕ್ರಿಯೆ ಬಹುತೇಕ ಮುಕ್ತಾಯಗೊಂಡಿದ್ದು, ಅಧಿಕೃತ ಪ್ರಕಟಣೆ ಮಾತ್ರ ಬಾಕಿಯಿದೆ ಎಂದು ಹೇಳಲಾಗುತ್ತಿದೆ. ಈ ಹುದ್ದೆಗೆ ಹಲವು ಹಿರಿಯ ಅಧಿಕಾರಿಗಳ ಹೆಸರು ಚಾಲ್ತಿಯಲ್ಲಿ ಕೇಳಿಬರುತ್ತಿತ್ತು.
ವರ್ಷಾಂತ್ಯದ ಕೊನೆಯ ದಿನದಂದು ಪೊಲೀಸ್ ಇಲಾಖೆಗೆ ದೊಡ್ಡ ಸರ್ಜರಿಯನ್ನು ಬೊಮ್ಮಾಯಿ ಸರಕಾರ ಮಾಡಿತ್ತು. ಈಗ, ಬೆಂಗಳೂರು ಪೊಲೀಸ್ ಆಯುಕ್ತರ ಹೆಸರನ್ನೂ ಅಂತಿಮ ಗೊಳಿಸಲಾಗಿದ್ದು, ಮುಖ್ಯಮಂತ್ರಿಗಳ ತವರು ಜಿಲ್ಲೆಯ ಐಪಿಎಸ್ ಶ್ರೇಣಿಯ ಅಧಿಕಾರಿಗೆ ಈ ಹುದ್ದೆ ಲಭಿಸುವುದು ಬಹುತೇಕ ಕನ್ಫರ್ಮ್ ಎನ್ನುವ ಮಾಹಿತಿಯಿದೆ.
ಎರಡು ವರ್ಷಕ್ಕೊಮ್ಮೆ ಆಯುಕ್ತರನ್ನು ಬದಲಾವಣೆ ಮಾಡಬೇಕೆಂದಿದ್ದರೂ, ಈ ಅವಧಿ ಮುಗಿಸಿದ ಅಥವಾ ಅವಧಿಗಿಂತ ಮುನ್ನವೇ ವರ್ಗಾವಣೆಯಾದ ಐಪಿಎಸ್ ಅಧಿಕಾರಿಗಳ ಪಟ್ಟಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ದೊಡ್ಡದೇ ಇದೆ.
ಈಗ, ನಗರದ ಆಯುಕ್ತರಾದ ಕಮಲ್ ಪಂತ್ ಅವರ ಹುದ್ದೆಯ ಅವಧಿ ಮುಗಿಯುತ್ತಾ ಬರುತ್ತಿದ್ದು, ಈ ಬಾರಿ ಹಾವೇರಿ ಮೂಲದ ಐಪಿಎಸ್ ಅಧಿಕಾರಿ ಮತ್ತು ಹಾಲೀ ಗುಪ್ತಚರ ಇಲಾಖೆಯ ಮುಖ್ಯಸ್ಥರು ಬೆಂಗಳೂರು ಪೊಲೀಸ್ ಕಮಿಷನರ್ ಹುದ್ದೆ ಅಲಂಕರಿಸುವುದು ಪಕ್ಕಾ ಆಗಿದೆ.

ಬೆಂಗಳೂರು ಪೊಲೀಸ್ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಕಮಲ್ ಪಂತ್
ಆಗಸ್ಟ್ 1, 2020ರಿಂದ ಬೆಂಗಳೂರು ಪೊಲೀಸ್ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಕಮಲ್ ಪಂತ್ ಅವರ ಕಾರ್ಯವೈಖರಿಯ ಬಗ್ಗೆ ಸರಕಾರೀ ಮಟ್ಟದಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಉತ್ತಮ ಹೆಸರಿದೆ. ಸರಕಾರದ ಆದೇಶವನ್ನು ಪಾಲಿಸುವುದು, ಡ್ರಗ್ಸ್ ಕಾರ್ಯಾಚರಣೆ, ಬಿಟ್ ಕಾಯಿನ್ ಮುಂತಾದ ವಿಚಾರದಲ್ಲಿ ಕಮಲ್ ಪಂತ್ ಅವರು ಸಮರ್ಥವಾಗಿ ಈ ಕಾರ್ಯವನ್ನು ನಿಭಾಯಿಸಿದ್ದರು. ಈಗ, ಈ ಆಯಕಟ್ಟಿನ ಹುದ್ದೆಯು ಹಾವೇರಿ, ರಾಣೆಬೆನ್ನೂರಿನ ತಾಲೂಕು ಮೂಲದ ಐಪಿಎಸ್ ಅಧಿಕಾರಿಗೆ ಸಿಗುವುದು ನಿಕ್ಕಿ ಎಂದು ಹೇಳಲಾಗುತ್ತಿದೆ.

ಗುಪ್ತಚರ ಇಲಾಖೆಯ ಎಡಿಜಿಪಿ, ಬಿ.ದಯಾನಂದ್ ಮುಂದಿನ ಬೆಂಗಳೂರು ಪೊಲೀಸ್ ಆಯುಕ್ತ
1994ರ ಬ್ಯಾಚಿನ, ಹಾಲೀ ಗುಪ್ತಚರ ಇಲಾಖೆಯ ಎಡಿಜಿಪಿಯಾಗಿರುವ ಬಿ.ದಯಾನಂದ್ ಅವರು ಮುಂದಿನ ಬೆಂಗಳೂರು ಪೊಲೀಸ್ ಆಯುಕ್ತರಾಗಿ ನಿಯೋಜನೆಗೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಕಮಿಷನರ್ ಹುದ್ದೆಗೆ ಹಲವು ಅಧಿಕಾರಿಗಳು ಒತ್ತಡ ಹಾಕುತ್ತಿದ್ದರೂ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ದಯಾನಂದ್ ಅವರ ಹೆಸರನ್ನು ಅಂತಿಮಗೊಳಿಸಿದ್ದಾರೆ ಎನ್ನುವ ಖಚಿತ ಮಾಹಿತಿಯ ಸುದ್ದಿಗಳು ಹರಿದಾಡುತ್ತಿವೆ.

ಬೆಂಗಳೂರು ನಗರಕ್ಕೆ ಹೊಸ ಪೊಲೀಸ್ ಕಮಿಷನರ್: ಹೆಸರು ಬಹುತೇಕ ಫೈನಲ್
ಬೆಂಗಳೂರು ಕಮಿಷನರ್ ಹುದ್ದೆಗೆ ಅಲೋಕ್ ಕುಮಾರ್, ಉಮೇಶ್ ಕುಮಾರ್ ಮತ್ತು ಬಿ.ದಯಾನಂದ್ ಅವರ ಹೆಸರು ಮಂಚೂಣಿಯಲ್ಲಿ ಕೇಳಿ ಬರುತ್ತಿತ್ತು. ಇದರ ಜೊತೆಗೆ, ಅಮೃತ್ ಪಾಲ್, ಪ್ರತಾಪ್ ರೆಡ್ಡಿ, ಹರಿಶೇಖರನ್ ಅವರ ಹೆಸರೂ ಕೇಳಿ ಬರುತ್ತಿತ್ತು. ಹಾಲೀ ಆಯುಕ್ತರಾದ ಕಮಲ್ ಪಂತ್ ಅವರ ವರ್ಗಾವಣೆ ಬಹುತೇಕ ನಿಶ್ಚಿತವಾಗಿದ್ದು, ದಯಾನಂದ್ ಅವರ ಹೆಸರು ಅಧಿಕೃತವಾಗಿ ಘೋಷಣೆಯಾಗುವುದು ಮಾತ್ರ ಬಾಕಿ ಎನ್ನುವ ಸುದ್ದಿ ಚಾಲ್ತಿಯಲ್ಲಿದೆ.

ಪೊಲೀಸ್ ಇಲಾಖೆಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡಲಾಗಿತ್ತು
ಡಿಸೆಂಬರ್ 31ರಂದು ಪೊಲೀಸ್ ಇಲಾಖೆಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡಲಾಗಿತ್ತು. ಎಸ್.ಮುರುಗನ್, ಕೆ.ವಿ.ಶರತ್ ಚಂದ್ರ, ಸೌಮೇಂದು ಮುಖರ್ಜಿ, ಸುಬ್ರಮಣೇಶ್ವರ ರಾವ್, ಲಾಬುರಾಮ್, ರೋಹಿಣಿ ಕಟೋಚ್ ಸೇರಿದಂತೆ ಹಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿತ್ತು. ಬೆಂಗಳೂರು ನಗರ ಕಮೀಷನರೇಟ್ ವ್ಯಾಪ್ತಿಯಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದ ಐಪಿಎಸ್ ಅಧಿಕಾರಿಗಳು ಬಡ್ತಿ ಹೊಂದಿದ್ದು, ಬಡ್ತಿ ಜತೆಗೆ ವರ್ಗಾವಣೆಯನ್ನೂ ಮಾಡಲಾಗಿತ್ತು.
2009ನೇ ಸಾಲಿನ ಐಪಿಎಸ್ ಅಧಿಕಾರಿಗಳಾದ ಡಾ. ಎಸ್. ಡಿ. ಶರಣಪ್ಪ - ಡಿಸಿಪಿ ಪೂರ್ವ ವಿಭಾಗ, ಎಂ.ಎನ್. ಅನುಚೇತ್ - ಡಿಸಿಪಿ ಕೇಂದ್ರ ವಿಭಾಗ, ರವಿ ಡಿ. ಚನ್ನಣ್ಣನವರ್ ಇವರಿಗೆ ಕೇಂದ್ರ ಸೇವಾ ನಿಯಮದಡಿ ಪದೋನ್ನತಿ ನೀಡಿ ವೇತನ ಪರಿಷ್ಕರಣೆ ಮಾಡಿ, ಅದೇ ಹುದ್ದೆಗಳಲ್ಲಿ ಮುಂದುವರಿಸಲಾಗಿದೆ.












Click it and Unblock the Notifications