Breaking; ಬೆಂಗಳೂರಿನ ಶಾಲೆಗೆ ಬಾಂಬ್ ಬೆದರಿಕೆ ಇ-ಮೇಲ್
ಬೆಂಗಳೂರು, ಜನವರಿ 06; ಬೆಂಗಳೂರಿನ ರಾಜಾಜಿನಗರದ ಶಾಲೆಯೊಂದಕ್ಕೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಲಾಗಿದೆ. ಪೊಲೀಸರು, ಬಾಂಬ್ ನಿಷ್ಕ್ರಿಯದಳ ಸ್ಥಳಕ್ಕೆ ಧಾವಿಸಿದೆ.
ಬೆಂಗಳೂರು ನಗರದ ರಾಜಾಜಿನಗರದ ಎನ್‌ಪಿಎಸ್ ಶಾಲೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇ-ಮೇಲ್ ಕಳಿಸಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.

ಶುಕ್ರವಾರ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇ-ಮೇಲ್ ಬಂದಿದೆ. ಇದು ಹುಸಿ ಇ-ಮೇಲ್ ಆಗಿರಲೂಬಹುದು. ಆದರೆ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಬಾಂಬ್ ನಿಷ್ಕ್ರಿಯದಳವನ್ನು ಸ್ಥಳಕ್ಕೆ ಕರೆಸಿದ್ದಾರೆ.
ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆಯಲ್ಲಿ ತೊಡಗಿದೆ. ಪೋಷಕರು, ಮಕ್ಕಳು ಆತಂಕಪಡಬೇಕಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಇ-ಮೇಲ್ ಬಂದಿರುವ ಕುರಿತು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ಬಿ. ನಿಂಬರಗಿ ಮಾತನಾಡಿದ್ದಾರೆ, "ಬಸವೇಶ್ವರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಎನ್‌ಪಿಎಸ್ ಶಾಲೆಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸಲಾಗಿದೆ" ಎಂದು ಹೇಳಿದ್ದಾರೆ.
Karnataka | Bomb threat received by NPS School, Rajajinagar under Basaveshwar Nagar PS. We've ensured students are taken to a safe place, bomb disposal & dog squad have reached the spot. Case to be registered and investigation is being done: Laxman B Nimbaragi, DCP West Bengaluru pic.twitter.com/r9fBnhdWjI
— ANI (@ANI) January 6, 2023
"ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಸ್ಥಳಕ್ಕೆ ಧಾವಿಸಿದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತೇವೆ" ಎಂದು ಡಿಸಿಪಿ ಹೇಳಿದ್ದಾರೆ.
ಶಾಲೆಗೆ ಸುರೇಶ್ ಕುಮಾರ್ ಭೇಟಿ; ರಾಜಾಜಿನಗರ ಕ್ಷೇತ್ರದ ಬಸವೇಶ್ವರನಗರ ವಾರ್ಡ್ ವ್ಯಾಪ್ತಿಗೆ ಒಳಪಡುವ ಶಾಲೆಗೆ ಬೆದರಿಕೆ ಇ-ಮೇಲ್ ಬಂದ ಹಿನ್ನಲೆಯಲ್ಲಿ ಶಾಸಕ, ಮಾಜಿ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪೊಲೀಸ್ ಇಲಾಖೆಯ ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯದಳ ಸಂಪೂರ್ಣ ತಪಾಸಣೆ ಮಾಡಿದೆ. ಈ ಬೆದರಿಕೆ ಹುಸಿ ಬೆದರಿಕೆ ಎಂದು ತಪಾಸಣೆಯ ನಂತರ ತಿಳಿದಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಫೇಸ್‌ಬುಕ್ ಪೋಸ್ಟ್ ಹಾಕಿರುವ ಅವರು, ಶಾಲೆಯಲ್ಲಿ ಪರೀಕ್ಷೆಗಳು ನಡೆಯುತ್ತಿದೆ. ನಾನು ಸಹ ಶಾಲೆಗೆ ಭೇಟಿ ನೀಡಿ ಪ್ರಾಂಶುಪಾಲರು ಮತ್ತು ಇತರ ಸಿಬ್ಬಂದಿಯೊಂದಿಗೆ ಮಾತನಾಡಿದ್ದೇನೆ. ದುರುದ್ದೇಶದಿಂದ ಕೂಡಿರುವ ಇ-ಮೇಲ್ ಹಿಂದಿನ ಸೂತ್ರದಾರರು ಯಾರು? ಎಂಬುದನ್ನು ಕೂಡಲೇ ಕಂಡು ಹಿಡಿಯಬೇಕಿದೆ ಎಂದು ತಿಳಿಸಿದ್ದಾರೆ.
ಇಂತಹ ಪ್ರಸಂಗಗಳಿಂದ ಮಕ್ಕಳ ಮನಸುಗಳ ಮೇಲೆ ಆಗುವ ಪರಿಣಾಮ ಊಹೆಗೂ ನಿಲುಕದು. ಕೂಡಲೇ ದುಷ್ಕರ್ಮಿಗಳನ್ನು ಕಂಡುಹಿಡಿದು ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವರನ್ನು ಆಗ್ರಹಿಸುತ್ತೇನೆ ಎಂದು ಪೋಸ್ಟ್ ಹಾಕಿದ್ದಾರೆ.












Click it and Unblock the Notifications