ಜಡ್ಜ್ ಗೆ ಬಾಂಬ್ ಸ್ಪೋಟ ಬೆದರಿಕೆ ಪ್ರಕರಣ: ನಿರ್ಲಕ್ಷ್ಯತೆ ವಹಿಸಿದ ಇನ್‌ಸ್ಪೆಕ್ಟರ್ ಸಸ್ಪೆಂಡ್ !
ಬೆಂಗಳೂರು, ಫೆಬ್ರವರಿ 09: ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಿಗೆ ಬಾಂಬ್ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಗೇಟ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ನನ್ನು ಅಮಾನತು ಮಾಡಲಾಗಿದೆ. ಪ್ರಕರಣದ ಗಂಭೀರತೆಯನ್ನು ಅರಿತು ಕಾಲಮಿತಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸುವಲ್ಲಿ ವಿಫಲರಾದ ಪೊಲೀಸ್ ಇನ್‌ಸ್ಪೆಕ್ಟರ್ ರಾಜಶೇಖರ್ ಅವರನ್ನು ಅಮಾನತು ಮಾಡಲಾಗಿದೆ. ಕೇಂದ್ರ ವಿಭಾಗದ ಡಿಸಿಪಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ನಟಿ ರಾಗಿಣಿ ಹಾಗೂ ಸಂಜನಾಗೆ ಜಾಮೀನು ನೀಡಬೇಕು. ಕೊಲೆ, ಸುಲಿಗೆ ಡಕಾಯಿತಿ ಪ್ರಕರಣಗಳಲ್ಲಿ ಜಾಮೀನು ಕೊಡಬೇಕು. ನಿಮಗೆ ಹಣ ಬೇಕಿದ್ದರೆ ಕೇಳಿ, ಇಲ್ಲದಿದ್ದರೆ ನಿಮ್ಮ ಕಾರಿನ ಇಂಜಿನ್ ಕೇಪು ಇಟ್ಟು ನಿಮ್ಮ ಕಾರು ಬ್ಲಾಸ್ಟ್ ಮಾಡಿಸುತ್ತೇವೆ ಎಂದು ಕನ್ನಡದಲ್ಲಿ ಬರೆದಿದ್ದ ಅನಾಮಧೇಯ ಬೆದರಿಕೆ ಪತ್ರ 33 ನೇ ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಸೀನಪ್ಪ ಅವರಿಗೆ ಬಂದಿತ್ತು. ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸೀನಪ್ಪ ಅವರಿಗೆ ಬೆದರಿಕೆ ಹಾಕಲಾಗಿತ್ತು .

2020, ಅಕ್ಟೋಬರ್ 19 ರಂದು ಪ್ರಕರಣ ದಾಖಲಿಸಿದ್ದ ಪೊಲೀಸರು, ನ್ಯಾಯಾಲಯದ ಆವರಣದ ಮುಂದೆ ಡಿಟೋನೇಟರ್ ವೈರ್ ವಶಪಡಿಸಿಕೊಂಡಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಹಲಸೂರು ಗೇಟ್ ಪೊಲೀಸರು ತುಮಕೂರು ಮೂಲದ ನಾಲ್ವರನ್ನು ಬಂಧಿಸಿದ್ದರು. ತಿಪಟೂರಿನ ರಾಜಶೇಖರ್, ವೇದಾಂತ್ ಶಿವ ಪ್ರಕಾಶ್, ಬಸವಲಿಂಗಯ್ಯ , ರಮೇಶ್ ಎಂಬುವರನ್ನು ಬಂಧಿಸಿದ್ದರು. ಆಸ್ತಿ ವಿಚಾರವಾಗಿ ಜಗಳ ಉಂಟಾಗಿ, ರಮೇಶ್ ಮೇಲೆ ಸಿಟ್ಟು ತೀರಿಸಿಕೊಳ್ಳಲು ರಾಜಶೇಖರ್ ಎಂಬಾತ ಜಡ್ಜ್ ಗೆ ಬಾಂಬ್ ಬೆದರಿಕೆ ಪತ್ರ ಬರೆಯುವ ಉಪಾಯ ಕಂಡುಕೊಂಡಿದ್ದ. ಅದೇ ರೀತಿ ಪತ್ರ ಬರೆದು ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ.

ಈ ಪ್ರಕರಣದ ಆರೋಪಿಗಳು ಈಗಲೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದರೆ, 90 ದಿನದಲ್ಲಿ ಹಲಸೂರು ಗೇಟ್ ಪೊಲೀಸ್ ಇನ್‌ಸ್ಪೆಕ್ಟರ್ ಪ್ರಕರಣದ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಬೇಕಿತ್ತು. ನಿರ್ಲಕ್ಷ ಮಾಡಿ ಒಂದು ತಿಂಗಳು ಹೆಚ್ಚುವರಿ ಕಾಲಾವಕಾಶ ನೀಡಿದರೂ ತನಿಖೆ ಮುಗಿಸಿರಲಿಲ್ಲ. ಹೀಗಾಗಿ ಕರ್ತವ್ಯ ಲೋಪ ಆರೋಪದ ಮೇಲೆ ಹಲಸೂರು ಗೇಟ್ ಪೊಲೀಸ್ ಇನ್‌ಸ್ಪೆಕ್ಟರ್ ರಾಜಶೇಖರ್ ಎಚ್.ಎನ್. ಅವರನ್ನು ಅಮಾನತು ಮಾಡಿ ಆದೇಶಿಸಲಾಗಿದೆ.
Recommended Video













Click it and Unblock the Notifications