BMTC: ಹೊಸ ದಾಖಲೆ ಬರೆದ ಏರ್‌ಪೋರ್ಟ್‌ನ ವಾಯು ವಜ್ರ ಬಸ್‌ಗಳು
ಬೆಂಗಳೂರು, ಡಿಸೆಂಬರ್ 04: ಬೆಂಗಳೂರು ನಗರದಿಂದ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುವುದು ಸವಾಲಿನ ಕೆಲಸ. ಬಸ್, ಕ್ಯಾಬ್, ಖಾಸಗಿ ವಾಹನ ಹೀಗೆ ವಿವಿಧ ಮಾದರಿ ಸಾರಿಗೆ ಮೂಲಕ ಪ್ರತಿನಿತ್ಯ ಲಕ್ಷಾಂತರ ಜನರು ಏರ್‌ಪೋರ್ಟ್‌ಗೆ ಆಗಮಿಸಿ/ ನಿರ್ಗಮಿಸುತ್ತಾರೆ. ಬೆಂಗಳೂರು ಜನರ ಜೀವನಾಡಿಯಾದ ಬಿಎಂಟಿಸಿ ಏರ್‌ಪೋರ್ಟ್‌ಗೆ ವಾಯು ವಜ್ರ ಬಸ್‌ಗಳನ್ನು ಓಡಿಸುತ್ತದೆ.
ಬಿಎಂಟಿಸಿಯ ವಾಯು ವಜ್ರ ಬಸ್‌ಗಳು ನವೆಂಬರ್ ತಿಂಗಳಿನಲ್ಲಿ ಹೊಸ ದಾಖಲೆ ಬರೆದಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಎಂಟಿಸಿ ಬಸ್ ಮೂಲಕ ಸಂಚಾರ ನಡೆಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದು, ಬಿಎಂಟಿಸಿ ಆದಾಯ ಹೆಚ್ಚಲು ಸಹ ಅನುಕೂಲವಾಗಿದೆ.

ನವೆಂಬರ್ ತಿಂಗಳಿನಲ್ಲಿ ಬಿಎಂಟಿಸಿಯ ಐಷಾರಾಮಿ ವಾಯು ವಜ್ರ ಎಸಿ ಬಸ್‌ಗಳಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 4,07,531 ಪ್ರಯಾಣಿಕರು ಸಂಚಾರವನ್ನು ನಡೆಸಿದ್ದಾರೆ. ಈ ಮೂಲಕ ಮೊದಲ ಬಾರಿಗೆ ವಾಯು ವಜ್ರ ಬಸ್‌ಗಳ ಟಿಕೆಟ್‌ನಿಂದಲೇ ನವೆಂಬರ್ ತಿಂಗಳಿನಲ್ಲಿ ಸಂಸ್ಥೆಗೆ 11 ಕೋಟಿ ಆದಾಯ ಬಂದಿದೆ.
ಪ್ರಯಾಣಿಕರ ಸಂಖ್ಯೆ ಹೆಚ್ಚಳ: ಬಿಎಂಟಿಸಿ ನಗರದ 17 ಮಾರ್ಗದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ದೇವನಹಳ್ಳಿಗೆ 144 ಬಸ್‌ಗಳ ಸಂಚಾರವನ್ನು ನಡೆಸುತ್ತವೆ. ವಾಯು ವಜ್ರ ಬಸ್‌ಗಳು ಪ್ರತಿನಿತ್ಯ 990 ಟ್ರಿಪ್ ಸಂಚಾರ ನಡೆಸುತ್ತವೆ. ಕೇವಲ ಏರ್‌ಪೋರ್ಟ್‌ನಿಂದಲೇ ಬಿಎಂಟಿಸಿ ಬಸ್‌ಗಳಲ್ಲಿ ನವೆಂಬರ್ ತಿಂಗಳಿನಲ್ಲಿ 4,07,531 ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಅಂದರೆ ಪ್ರತಿದಿನ ಸುಮಾರು 13,584 ಪ್ರಯಾಣಿಕರು ಬಸ್ ಬಳಕೆ ಮಾಡಿದ್ದಾರೆ.
ಒಂದು ತಿಂಗಳಿನಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ದೇವನಹಳ್ಳಿಗೆ ವಾಯು ವಜ್ರ ಬಸ್‌ಗಳಲ್ಲಿ ಸಂಚಾರ ನಡೆಸುವ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಲು ನಿಖರವಾದ ಕಾರಣವನ್ನು ಪಟ್ಟಿ ಮಾಡಲು ಸಾಧ್ಯವಿಲ್ಲ. ಕೆಐಎಗೆ ಭೇಟಿ ನೀಡುವ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದ್ದು, ಉತ್ತಮವಾದ ಸೇವೆ, ಕಡಿಮೆ ದರ ಇರುವ ಕಾರಣ ವಾಯು ವಜ್ರ ಬಸ್‌ಗಳಲ್ಲಿ ಹೆಚ್ಚಿನ ಜನರು ಸಂಚಾರ ನಡೆಸಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕ್ಯಾಬ್‌ಗಳಲ್ಲಿ ವಿಮಾನ ನಿಲ್ದಾಣಕ್ಕೆ ದುಬಾರಿ ದರವಿದೆ. ಅಲ್ಲದೇ ಕ್ಯಾಬ್ ಚಾಲಕರು ಪ್ರಯಾಣಿಕರ ಜೊತೆ ಆಗಾಗ ಕಿರಿಕ್ ಮಾಡಿಕೊಳ್ಳುತ್ತಾರೆ. ಬಿಎಂಟಿಸಿ ಹೊಸ ಮಾರ್ಗಗಳಿಂದಲೂ ಈಗ ಕೆಐಎಗೆ ಹೊಸ ಹೊಸ ಬಸ್‌ಗಳನ್ನು ಪರಿಚಯಿಸಿದೆ. ಆದ್ದರಿಂದ ಹೆಚ್ಚಿನ ಪ್ರಯಾಣಿಕರು ಸಂಚಾರ ನಡೆಸಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಯು ವಜ್ರ ಬಸ್‌ಗಳು ಪ್ರತಿದಿನ ಸುಮಾರು 51,863 ಕಿ. ಮೀ. ಸಂಚಾರವನ್ನು ನಡೆಸುತ್ತವೆ. ಕೆಐಎ-ಕೆಬಿಎಸ್ ನಡುವೆ ಗರಿಷ್ಠ ಎಂದರೆ 216 ಟ್ರಿಪ್ ಬಸ್‌ಗಳು ಸಂಚಾರವನ್ನು ನಡೆಸುತ್ತವೆ. ಕೆಐಎ-ಎಲೆಕ್ಟ್ರಾನಿಕ್ ಸಿಟಿ ನಡುವೆ 120 ಟ್ರಿಪ್ ಬಸ್‌ಗಳು ಸಂಚಾರವನ್ನು ನಡೆಸುತ್ತವೆ, ಈ ಮಾರ್ಗಕ್ಕೆ 23 ಬಸ್‌ಗಳನ್ನು ನಿಯೋಜನೆ ಮಾಡಲಾಗಿದೆ.
2008ರಲ್ಲಿ ಬಿಎಂಟಿಸಿ ವಾಯು ವಜ್ರ ಬಸ್‌ಗಳ ಸಂಚಾರವನ್ನು ಆರಂಭಿಸಿತು. ಬಳಿಕ ಇದೇ ಮೊದಲ ಬಾರಿಗೆ ಒಂದೇ ತಿಂಗಳಿನಲ್ಲಿ 4 ಲಕ್ಷ ಪ್ರಯಾಣಿಕರು ಕೆಐಎಗೆ ಹೋಗಲು ಬಸ್ ಬಳಕೆ ಮಾಡಿದ್ದಾರೆ. ಪ್ರತಿದಿನ ಸುಮಾರು 600ಕ್ಕೂ ಅಧಿಕ ವಿಮಾನಗಳು ಕೆಐಎನಿಂದ ಸಂಚಾರ ನಡೆಸುತ್ತಿದ್ದು, ದೇಶದ ಸಂಚಾರ ದಟ್ಟಣೆಯ ಏರ್‌ಪೋರ್ಟ್‌ನಲ್ಲಿ ಬೆಂಗಳೂರು 3ನೇ ಸ್ಥಾನದಲ್ಲಿದೆ.












Click it and Unblock the Notifications