ಬಿಎಂಟಿಸಿಯಲ್ಲಿ ಮಹಿಳೆಯರ ಸುರಕ್ಷತೆ ಬಂತು ಸಮಿತಿ

ಬಿಎಂಟಿಸಿ ರಚಿಸಲಿರುವ ಸಮಿತಿಯಲ್ಲಿ ಮಹಿಳಾ ಪ್ರಯಾಣಿಕರು, ಬಿಎಂಟಿಸಿ ಸಿಬ್ಬಂದಿ ಸದಸ್ಯರಾಗಿರುತ್ತಾರೆ. ಮಹಿಳೆಯರಿಗೆ ಕಿರುಕುಳ ನೀಡಿದ ಪ್ರಕರಣಗಳ ವಿಚಾರಣೆ ನಡೆಸುವ ಸಮಿತಿ, ಬಸ್ಸುಗಳಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಸಂಸ್ಥೆಗೆ ವರದಿ ನೀಡಲಿದೆ.
ಬಸ್ಸುಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆ ಒದಗಿಸಲು ಬಿಎಂಟಿಸಿ ಸದ್ಯ ಹಲವಾರು ಯೋಜನೆಗಳನ್ನು ರೂಪಿಸಿದೆ. ಮೊದಲ ಹಂತವಾಗಿ 500 ಬಸ್ಸುಗಳಲ್ಲಿ ಸಿಸಿಟಿವಿ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಎರಡನೇ ಹಂತವಾಗಿ ಮಹಿಳಾ ದೂರುಗಳ ಬಗ್ಗೆ ತನಿಖೆ ನಡೆಸಲು ಸಮಿತಿ ರಚನೆ ಮಾಡಲು ಬಿಎಂಟಿಸಿ ಮುಂದಾಗಿದೆ.
ಮಹಿಳಾ ಪ್ರಯಾಣಿಕರಿಗೆ ಕಿರುಕುಳ ನೀಡಿರುವ ಗಂಭೀರ ಪ್ರಕರಣಗಳನ್ನು ಪೊಲೀಸ್ ಇಲಾಖೆಗೆ ವರ್ಗಾವಣೆ ಮಾಡುವ ಕುರಿತು ಬಿಎಂಟಿಸಿ ಚಿಂತನೆ ನಡೆಸಿದೆ. ಕೆಲವು ಪ್ರಕರಣಗಳು ಸಂಭವಿಸಿದಾಗ ಬಸ್ ಅನ್ನು ಸಂಚಾರಿ ಠಾಣೆಗೆ ತೆಗೆದುಕೊಂಡು ಹೋಗುವುದು ಕಷ್ಟವಾಗುತ್ತದೆ. ಆದ್ದರಿಂದ ಈ ಕುರಿತು ಸಂಚಾರಿ ಪೊಲೀಸರು ಸಹಕಾರ ನೀಡುವಂತೆಯೂ ಸಂಸ್ಥೆ ಮನವಿ ಮಾಡಲಿದೆ.
ಈಗಾಗಲೇ ಬಿಎಂಟಿಸಿ ಮಹಿಳಾ ಪ್ರಯಾಣಿಕರಿಗೆ ತೊಂದರೆ ಉಂಟಾದರೆ ಸಂಸ್ಥೆಗೆ ಮಾಹಿತಿ ನೀಡಲು 1800 425 1663 ನಂಬರಿನ ಕಾಲ್ ಸೆಂಟರ್ ಆರಂಭಿಸಿದೆ. ಮಹಿಳೆಯರಿಗಾಗಿ ಮೀಸಲಾಗಿಟ್ಟ ಸೀಟು ಬಿಟ್ಟುಕೊಡದಿರುವುದು, ನಿರ್ವಹಕರು ಚಿಲ್ಲರೆ ಕೊಡದಿರುವುದು ಮುಂತಾದವುಗಳ ಕುರಿತು ಈಗಾಗಲೇ ಕಾಲ್ ಸೆಂಟರ್ ಮೂಲಕ ಸಂಸ್ಥೆಗೆ ದೂರುಗಳು ಬರುತ್ತಿವೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಹೇಳಿದ್ದಾರೆ.
ಮಹಿಳೆಯರಿಗೆ ಬಸ್ಸುಗಳಲ್ಲಿ ಆಗುವ ಕಿರುಕುಳದ ಬಗ್ಗೆ ತನಿಖೆ ನಡೆಸಲು ಬಿಎಂಟಿಸಿಯ ಅಧಿಕಾರಿಗಳು ಬಸ್ಸುಗಳಿಗೆ ದಿಢೀರ್ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಸಂಸ್ಥೆಯ ಬಸ್ಸುಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ ಸಂಸ್ಥೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅಂಜುಂ ಪರ್ವೇಜ್ ತಿಳಿಸಿದ್ದಾರೆ.












Click it and Unblock the Notifications