ಗುಡ್‌ನ್ಯೂಸ್: ಬೆಂಗಳೂರಿನ ಹತ್ತಿರದ ಜಿಲ್ಲೆಗಳಿಗೂ BMTC ಬಸ್ ಸಂಚಾರಕ್ಕೆ ಸರ್ಕಾರ ಅನುಮೋದನೆ
ಬೆಂಗಳೂರು, ಸೆಪ್ಟಂಬರ್ 24: ರಾಜಧಾನಿ ಬೆಂಗಳೂರಿನ ಲಕ್ಷಾಂತರ ಜನರ ಜೀವನಾಡಿಯಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್‌ಗಳು ಇನ್ನು ಮುಂದೆ ಕೇವಲ ನಗರದಲ್ಲಿ ಮಾತ್ರವಲ್ಲದೇ ಹೊರ ಜಿಲ್ಲೆಗಳಿಗೂ ಸಂಚರಿಸಲಿವೆ. ಇಂಥದ್ದೊಂದು ಮಹತ್ವ ನಿರ್ಧಾರಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಜೊತೆಗೆ ಈ ಬಗ್ಗೆ ಆಕ್ಷೇಪಣೆಗಳು ಏನಾದರು ಇಲ್ಲಿಗೆ ನಿಗಮಕ್ಕೆ ತಿಳಿಸುವಂತೆ ಆಹ್ವಾನಿಸಲಾಗಿದೆ.
ಬೆಂಗಳೂರಲ್ಲಿ ಬಿಎಂಟಿಸಿ ಬಸ್‌ಗಳು ಈವರೆಗೆ 25ಕಿಲೋ ಮೀಟರ್‌ವರೆಗೆ ಮಾತ್ರ ಸಂಚಾರ ಮಾಡುತ್ತಿದ್ದವು. ಇನ್ನು ಮುಂದೆ ಅವುಗಳ 40 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸಂಚಾರ ಮಾಡಲು ಮುಂದಾಗಿವೆ. ನಗರದ ಹೊರಗಿರುವ ಪ್ರದೇಶಗಳವರೆಗೂ ಸೇವೆ ನೀಡಲಿವೆ. ಈ ಮೂಲಕ ಹೊರವಲಯದ ಜನರಿಗೆ ಸಾರಿಗೆ ಇಲಾಖೆ ಗುಡ್ ನ್ಯೂಸ್ ನೀಡಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಹೇಳಿರುವಂತೆ ರಾಮನಗರ, ಕನಕಪುರ, ಮಾಲೂರು, ಮಾಗಡಿ, ದಾಬಸ್ ಪೇಟೆ, ಸೋಲೂರು ಸೇರಿದಂತೆ ವಿವಿಧ ಪ್ರದೇಶಗಳಿಗೂ ಬಿಎಂಟಿಸಿ ಬಸ್ ಸೇವೆಯನ್ನು ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಬಿಎಂಟಿಸಿ ಯೋಜನೆಗೆ ಅನುಮೋದನೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮೋಟಾರು ವಾಹನ ಕಾಯಿದೆ, 1939 (ಕೇಂದ್ರ ಕಾಯಿದೆ ಸಂಖ್ಯೆ 4/1939)ರ ಕಲಂ 68(ಸಿ) ಅಡಿಯಲ್ಲಿ 'ಬಿಎಂಟಿಸಿ ಯೋಜನೆ' ಪ್ರಕಟಿಸಲಾಗಿದೆ. ಕರ್ನಾಟಕ ಸರ್ಕಾರವು 68-25 , 202 ಟಿಎಂಪಿ 60, ದಿನಾಂಕ 16-01-1961 ರ ಮೂಲಕ, ಬೆಂಗಳೂರು ನಗರ ಮಹಾನಗರ ಪಾಲಿಕೆ ವ್ಯಾಪ್ತಿಯಿಂದ 12 ಮೈಲಿ ಅಥವಾ 20 ಕಿ.ಮೀ. ಸುತ್ತಮುತ್ತಲಿನವರೆಗೆ ಸಾರಿಗೆ ವಾಹನಗಳನ್ನು ಸಂಚಾರ ಮಾಡಲು ಯೋಜನೆಗೆ (ಇನ್ನುಮುಂದೆ "ಬಿಟಿಎಸ್ ಯೋಜನೆ' ಎಂದು ಕರೆಯಲಾಗುವುದು) ಅನುಮೋದನೆ ನೀಡಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ರಚನೆಯ ನಂತರ ಬೆಂಗಳೂರು ನಗರವು ವ್ಯಾಪಕವಾಗಿ ವಿಸ್ತಾರಗೊಂಡ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಅಧಿಸೂಚನೆ ಹೊರಡಿಸಿದೆ. ಬಿಟಿಎಸ್ ಯೋಜನೆಯನ್ನು ಮಾರ್ಪಡಿಸಿ, ಕಾರ್ಯಾಚರಣೆ ವ್ಯಾಪ್ತಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಮಿತಿಯಿಂದ 25 ಕಿ.ಮೀ.ವರೆಗೆ ವಿಸ್ತರಿಸಿತ್ತು.

40 ಕಿಮೀ.ವರೆಗೆ ಬಿಎಂಟಿಸಿ ಸಂಚಾರ ವಿಸ್ತರಿಸಿದ್ದೇಕೆ?
ಕರ್ನಾಟಕ ಸರ್ಕಾರವು ಅಧಿಸೂಚನೆ ಮೂಲಕ 2019 ರಲ್ಲಿ ಇಡೀ ರಾಜ್ಯಕ್ಕೆ ಸಮಗ್ರ ಪ್ರದೇಶ ಯೋಜನೆಯನ್ನು (New Comprehensive Area Scheme for the Entire State of Karnataka) ಜಾರಿಗೆ ತಂದಿರುತ್ತದೆ. ನಿಯಮಗಳ ಸದರಿ ಯೋಜನೆಗೆ ತಿದ್ದುಪಡಿ/ ಮಾರ್ಪಾಡು ಮಾಡಲಾಗಿರುತ್ತದೆ. ಮುಖ್ಯವಾಗಿ ಬೆಂಗಳೂರು ನಗರವು ಬೃಹದಾಕಾರವಾಗಿ ಬೆಳೆದು, ಜನಸಂಖ್ಯೆಯು ಗಣನೀಯವಾಗಿ ಹೆಚ್ಚಾಗಿದೆ. ನಗರದ ಮಿತಿಯು ವಿಸ್ತಾರಗೊಂಡಿರುತ್ತದೆ.
ಉಪನಗರ ಪ್ರದೇಶಗಳಲ್ಲಿ ಅನೇಕ ಪಟ್ಟಣಗಳು ಸಹ ಬೆಳೆಯುತ್ತಿವೆ. ಅಲ್ಲಿ ವಾಸಿಸುತ್ತಿರುವ ಜನರು ತಮ್ಮ ಉದ್ಯೋಗ ಹಾಗೂ ಇತರೆ ಅಗತ್ಯ ಕಾರ್ಯಗಳ ನಿಮಿತ್ತ ನಗರದಲ್ಲಿನ ವಿವಿಧ ಭಾಗಗಳಿಗೆ ಸಂಚರಿಸಬೇಕಾಗಿರುತ್ತದೆ. ಆದ್ದರಿಂದ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕಾರ್ಯಾಚರಣೆ ವ್ಯಾಪ್ತಿಯನ್ನು ವಿಸ್ತರಿಸುವುದು ಅಗತ್ಯವೆಂದು ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ. ಮೋಟಾರು ವಾಹನ ಕಾಯಿದೆ, 1988 (ಕೇಂದ್ರ ಕಾಯಿದೆ ಸಂಖ್ಯೆ 59/1988) ರನ್ವಯ ಈ ಕೆಳಕಂಡಂತೆ ತಿದ್ದುಪಡಿ ಮಾಡಲಾಗಿದೆ.
ರಾಜ್ಯದ ಸರ್ಕಾರ ಪರಿಷ್ಕರಣೆ
"ಬಿಟಿಎಸ್ ಯೋಜನೆಗೆ ಸಂಬಂಧಿಸಿದ ಪ್ರದೇಶವೆಂದರೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಈ ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ವ್ಯಾಪ್ತಿಯಲ್ಲಿರುವ ಪ್ರದೇಶಗಳು ಹಾಗೂ ಅದರ ಗಡಿಯಿಂದ 40 ಕಿ.ಮೀ.ವರೆಗೆ ವ್ಯಾಪಿಯ ಸುತ್ತಮುತ್ತಲಿನ ಪ್ರದೇಶಗಳವರೆಗೆ ಸೇವೆ ನೀಡಲಿದೆ' ಎಂದು ಪರಿಷ್ಕರಿಸಲಾಗಿದೆ.
ತಿಂಗಳಲ್ಲಿ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
ಮೋಟಾರು ವಾಹನಗಳ ಕಾಯ್ದೆ, 1988 (ಕೇಂದ್ರ ಕಾಯ್ದೆ ಸಂಖ್ಯೆ 59, 1988) ರಲ್ಲಿ ರಾಜ್ಯ ಸರ್ಕಾರ ಬಿಎಂಟಿಸಿ ಸಂಚಾರ ಜಾಲದಲ್ಲಿ ಬದಲಾವಣೆ ಮಾಡಿದೆ. ಒಂದು ವೇಳೆ ಈ ನಿರ್ಧಾರ/ ತಿದ್ದುಪಡಿಯಿಂದ ಬಾಧಿತರಾಗುವ ಯಾವುದೇ ವ್ಯಕ್ತಿಗಳಿಂದ ಆಕ್ಷೇಪಣೆಗಳು/ಸಲಹೆಗಳನ್ನು ಸ್ವೀಕರಿಸಲು ಬದ್ಧವಾಗಿದೆ. ನಿಮ್ಮ ಆಕ್ಷೇಪಣೆಗಳು ಇದ್ದರೆ ಈ ಅಧಿಸೂಚನೆಯು ಹೊರಡಿಸಿ 30 ದಿನಗಳೊಳಗೆ ಸಲ್ಲಿಸಬಹುದು. ನೀವು ಆಕ್ಷೇಪಣೆಗಳನ್ನು "ಸರ್ಕಾರದ ಕಾರ್ಯದರ್ಶಿಗಳು, ಸಾರಿಗೆ ಇಲಾಖೆ, 3ನೇ ಹಂತ, ಬಹುಮಹಡಿಗಳ ಕಟ್ಟಡ, ಬೆಂಗಳೂರು-560001' ಇವರಿಗೆ ಸಲ್ಲಿಸಬಹುದೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.












Click it and Unblock the Notifications