Heart Attack: ಬಸ್ ಚಲಾಯಿಸುವಾಗಲೇ BMTC ಚಾಲಕ ಸಾವು: ಸಿನಿಮೀಯ ರೀತಿಯಲ್ಲಿ ಪ್ರಯಾಣಿಕರು ಬಚಾವ್
ಬೆಂಗಳೂರು, ನವೆಂಬರ್ 06: ಬಸ್ ಚಲಾಯಿಸುವಾಗಲೇ ಬಿಎಂಟಿಸಿ ಬಸ್ ಚಾಲಕ ಹೃದಯಘಾತದಿಂದ ಮೃತಪಟ್ಟಿರುವ ಘಟನೆ ಬೆಂಗಳೂರಿನ ನೆಲಮಂಗಲ ಟೌನ್ ಬಿನ್ನಮಂಗಲ ಬಸ್ ನಿಲ್ದಾಣ ಬಳಿ ನಡೆದಿದೆ. ಕಿರಣ್ (39 ವರ್ಷ) ಸಾವನ್ನಪ್ಪಿದ ಚಾಲಕ ಎಂದು ಗುರುತಿಸಲಾಗಿದೆ.
ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಡಿಪೋಗೆ ಸೇರಿದ ಬಸ್ ಡ್ರೈವ್ ಮಾಡಿಕೊಂಡು ಹೋಗುತ್ತಿರುವಾಗಲೇ ಹಾಸನ ಮೂಲದ ಚಾಲಕ ಕಿರಣ್ ಕುಮಾರ್‌ಗೆ ಏಕಾಏಕಿ ಹೃದಯಾಘಾತವಾಗಿದೆ. ಕೂಡಲೇ ಕಂಡಕ್ಟರ್ ಒಬಳೇಶ್ ಸಹಾಯದಿಂದ ಚಾಲಕನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ದುರಾದೃಷ್ಟವಶಾತ್ ಕಿರಣ್‌ಕುಮಾರ್ ಅದಾಗಲೇ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ಸಂಪೂರ್ಣ ವಿವರ
ಹಾಸನ ಮೂಲದ ಚಾಲಕ ಕಿರಣ್ ಕುಮಾರ್, ಬಿಎಂಟಿಸಿ ಡಿಪೋ 40ರಲ್ಲಿ ಕಳೆದ 6 ವರ್ಷದಿಂದ ಡೈವರ್ ಆಗಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಇಂದು ಕೂಡ ಕೆಲಸಕ್ಕೆ ಹಾಜರಾಗಿದ್ದಾರೆ. ಇಂದಿನ ಎಲ್ಲಾ ಟ್ರಿಪ್‌ಗಳನ್ನು ಮುಗಿಸಿ ಕೊನೆಯ ಟ್ರೀಪ್ ಓಡಿಸುತ್ತಿದ್ದರು. ನೆಲಮಂಗಲದಿಂದ ದಾಸನಪುರ ಘಟದತ್ತ ಬಸ್ ಚಲಾಯಿಸಿಕೊಂಡು ಬರಲಾಗುತ್ತಿತ್ತು. ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ದಿನವಿಡಿ ಬಸ್ ಚಲಾಯಿಸಿದ್ದ ಕಿರಣ್ ಕುಮಾರ್ ಅದಾಗಲೇ ಆಯಾಸಗೊಂಡಿದ್ದಾರೆ.
ಇನ್ನೇನು ಕೊನೆಯ ಟ್ರಿಪ್ ಮುಗಿಸಿ ವಿಶ್ರಾಂತಿ ಪಡೆಯಬಹುದು ಎಂದುಕೊಂಡು ದಾಸನಪುರದತ್ತ ತೆರಳುತ್ತಿದ್ದರು. ಈ ವೇಳೆ ಹೃದಯಘಾತವಾಗಿದ್ದು, ಬಸ್ ಚಲಿಸುತ್ತಿರುವಾಗಲೇ ಚಾಲಕನ ಸೀಟಿನಿಂದ ಬಿದ್ದಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿ ಚಲಿಸಿದ್ದು, ಮುಂದೆ ಹೋಗುತ್ತಿದ್ದ ಮತ್ತೊಂದು ಬಸ್‌ಗೆ ಡಿಕ್ಕಿ ಹೊಡೆದಿದೆ. ಕೂಡಲೇ ಎಚ್ಚೆತ್ತುಕೊಂಡ ಬಸ್ ಕಂಡೆಕ್ಟರ್ ನೇರವಾಗಿ ಚಾಲಕನ ಸೀಟ್‌ಗೆ ಹೋಗಿ ಬಸ್ ನಿಲ್ಲಿಸಿದ್ದಾರೆ. ಇನ್ನೇನು ಡಿವೈಡರ್‌ಗೆ ಬಸ್ ಡಿಕ್ಕಿ ಹೊಡೆಯುತ್ತದೆ ಎನ್ನುವಷ್ಟರಲ್ಲಿ ಬಸ್‌ನಿಂತಿದೆ.
ಕೂಡಲೇ ಬಸ್ ನಿಂತ ಕಾರಣ 50ಕ್ಕೂ ಹೆಚ್ಚು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಕಂಡಕ್ಟರ್ ಒಬಳೇಶ್ ಬಸ್ ನಿಲ್ಲಿಸಿ ಕೂಡಲೇ ಕಿರಣ್ ಕುಮಾರ್‌ನನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಕಿರಣ್ ಕುಮಾರ್ ಬಸ್‌ನಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ದೃಶ್ಯಗಳು ಬಸ್‌ನಲ್ಲಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗುತ್ತಿದೆ.












Click it and Unblock the Notifications