ಬರೋಬ್ಬರಿ 66 ಸಾರಿ ನಿಯಮ ಮುರಿದಿದ್ದ ಬಿಎಂಟಿಸಿ ಬಸ್!
ಬೆಂಗಳೂರು, ಜು. 15: ಬಿಎಂಟಿಸಿಗೆ ಮತ್ತೆರಡು ಬಲಿ, ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್, ಪಾದಚಾರಿ ಮೇಲೆ ಹರಿದ ಬಿಎಂಟಿಸಿ ಬಸ್, ಅಂಗಡಿಗೆ ನುಗ್ಗಿದ ಬಸ್... ಈ ಬಗೆಯ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಕಾಣುತ್ತಲೇ ಇರುತ್ತೇವೆ.
ಬೆಂಗಳೂರು ಸಂಚಾರಿ ಪೊಲೀಸರು ಅಂತೂ ಇಂತೂ ಬಿಎಂಟಿಸಿಯ ಯಮದೂತನನ್ನು ತಡೆದು ನಿಲ್ಲಿಸಿದ್ದಾರೆ. ಈತನ ಮೇಲಿದ್ದ ಉಲ್ಲಂಘನೆ ಲೆಕ್ಕ ತೆಗೆದು ನೋಡಿದ್ದಾಗ ಹೌಹಾರುವ ಸಂಗತಿ ಪೊಲೀಸರದ್ದಾಗಿತ್ತು. [ಬೆಂಗಳೂರು ಪೊಲೀಸರ ಸಾಮಾಜಿಕ ಜಾಲತಾಣದ ಸಕಲ ಮಾಹಿತಿ ಒಂದೆ ಕಡೆ]
ಈತನ ಹೆಸರು ಕೆಎ 01 ಎಫ್ 9393, ಬಸ್ ರೂಟ್ ನಂಬರ್ 365, ಇಲ್ಲಿವರೆಗೆ 66 ಸಾರಿ ಟ್ರಾಫಿಕ್ ನಿಯಮ ಬೀರಿದ್ದ! ಎಲೆಕ್ಟ್ರಾನಿಕ್ ಸಿಟಿ ಬಳಿ ಕೆಂಪು ಬಣ್ಣದ ವೋಲ್ವೋ ಬಸ್ ತಡೆದು ನಿಲ್ಲಿಸಿದ ಪೊಲೀಸರು ಚಾಲಕನ್ನು ಬಂಧನ ಮಾಡಿದ್ದಾರೆ. ಚಾಲಕ ಚಂದ್ರಪ್ಪ ಅವರನ್ನು ಬಂಧನ ಮಾಡಲಾಗಿದ್ದು 1 ವರ್ಷದ ಅವಧಿಯಲ್ಲಿ ಒಟ್ಟು 66 ಸಾರಿ ಉಲ್ಲಂಘನೆ ಮಾಡಿದ್ದಾನಂತೆ!

ವರ್ಷದಲ್ಲಿ 66 ಕೇಸ್
ಕಳೆದ ಮೇ 2014 ರಿಂದ ಇಲ್ಲಿಯವರೆಗೆ ಬಿಎಂಟಿಸಿ ಬಸ್ ಒಟ್ಟು 66 ಸಾರಿ ಸಾರಿಗೆ ನಿಯಮ ಉಲ್ಲಂಘನೆ ಮಾಡಿತ್ತು. ಇಷ್ಟು ದಿನ ಅದು ಹೇಗೋ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದ ಯಮದೂತ ಪೊಲೀಸರ ತೆಕ್ಕೆಗೆ ಸಿಕ್ಕಿದ್ದಾನೆ

ವಾಗ್ವಾದಕ್ಕೆ ಇಳಿದ ಚಂದ್ರಪ್ಪ
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬುಧವಾರ ಮತ್ತೆ ನಿಯಮ ಉಲ್ಲಂಘನೆ ಮಾಡಿದಾಗ ಪೊಲೀಸ್ ಇನ್ಸ್ ಪೆಕ್ಟರ್ ಮಹಮದ್ ಚಾಲಕನನ್ನು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಜಗ್ಗದ ಚಂದ್ರಪ್ಪ ಪೊಲೀಸರೊಂದಿಗೆ ವಾದಮಾಡಲು ಇಳಿದಿದ್ದಾರೆ.

ಜನರಿಗೆ ಬೇರೆ ಬಸ್
ಮಧ್ಯ ದಾರಿಯಲ್ಲಿ ಬಸ್ ನಿಲ್ಲಿಸಿದ್ದ ಚಂದ್ರಪ್ಪ ಜಪ್ಪಯ್ಯ ಎಂದರೂ ಬಸ್ ಮುಂದಕ್ಕೆ ತೆಗೆದುಕೊಳ್ಳಲಿಲ್ಲ. ನಂತರ ಬಸ್ ಅನ್ನು ಬದಿಗೆ ನಿಲ್ಲಿಸುವಂತೆ ಹೇಳಿದ ಪೊಲೀಸರು ಲೆಕ್ಕ ತೆಗೆದು ನೋಡಿದಾಗ ದಿಗಿಲು ಬಿದ್ದಿದ್ದಾರೆ. ಪ್ರಯಾಣಿಕರಿಗೆ ಬೇರೆ ಬಸ್ ವ್ಯವಸ್ಥೆಮಾಡಿದ್ದಾರೆ.

ಚಾಲಕರಿಗೆ ದಂಡ
ಬಸ್ ಅನ್ನು ಚಂದ್ರಪ್ಪ ಅವರೊಬ್ಬರೇ ಓಡಿಸುತ್ತಿದ್ದದ್ದು ತನಿಖೆ ವೇಳೆ ಗಮನಕ್ಕೆ ಬಂದಿದೆ. ಚಂದ್ರಪ್ಪ ಅವರ ಲೈಸನ್ಸ್ ವಶಕ್ಕೆ ಪಡೆದುಕೊಳ್ಳಲಾಗಿದೆ. ದಂಡ ಹಾಕಿದರೆ ಸುಮಾರು ಏಳು ಸಾವಿರ ರು. ಆಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
|
ದೂರು ದಾಖಲಿಸಿ
ಬೆಂಗಳೂರು ಪೊಲೀಸರು ಸಾಮಾಜಿಕ ತಾಣದ ಬಗ್ಗೆ ಮಾಹಿತಿ ನೀಡಿದ್ದು ಯಾವುದೇ ಬಗೆಯ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ 100 ಕ್ಕೆ ಕರೆ ಮಾಡಿ ಮಾಹಿತಿ ನೀಡಿ ಎಂದು ತಿಳಿಸಿದ್ದಾರೆ.
|
ಆಟೋ ಚಾಲಕರಿಗೂ ಎಚ್ಚರಿಕೆ
ಕರೆದ ಜಾಗಕ್ಕೆ ಬರಲು ಆಟೋ ಚಾಲಕರು ತಕರಾರು ಮಾಡಿದರೆ ಅಥವಾ ನಿಯಂತ್ರಣ ತಪ್ಪಿದ ಚಾಲನೆ ಮಾಡಿದರೆ 080 22868444 ಮತ್ತು 080 22868550 ಸಹಾಯವಾಣಿಗೆ ಕರೆಮಾಡಿ ದೂರು ದಾಖಲಿಸಬಹುದು ಎಂದು ತಿಳಿಸಿದ್ದಾರೆ.












Click it and Unblock the Notifications