BMTC Accident: ಟಿನ್ ಫ್ಯಾಕ್ಟರಿ ಬಳಿ ಬಿಎಂಟಿಸಿ ಬಸ್ ಹರಿದು ಮಣಿಪುರ ಯುವತಿ ದುರ್ಮರಣ
ಬೆಂಗಳೂರು: ನಗರದ ಅತಿ ಹೆಚ್ಚು ಸಂಚಾರ ದಟ್ಟಣೆಯುಳ್ಳ ಟಿನ್ ಫ್ಯಾಕ್ಟರಿ ಜಂಕ್ಷನ್ ಬಳಿ ಇತ್ತೀಚೆಗೆ ಸಂಭವಿಸಿದ ಭೀಕರ ರಸ್ತೆ ಅಪಘಾತವು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬರು ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಕ್ಷಣಗಳಲ್ಲಿ, ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಯುವತಿ ಮೇಲೆ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ಯುವತಿಯನ್ನು ಹನ್ನಾ ಇನಾಕಾ ಎಂದು ಗುರುತಿಸಲಾಗಿದ್ದು, ಅವರು ಮೂಲತಃ ಮಣಿಪುರ ನಿವಾಸಿಯಾಗಿದ್ದಾರೆ. ವಿದ್ಯಾಭ್ಯಾಸದ ನಿಮಿತ್ತ ಬೆಂಗಳೂರಿನಲ್ಲಿ ವಾಸವಾಗಿದ್ದರು ಎಂದು ಮೂಲಗಳು ತಿಳಿಸಿವೆ. ಬೆಳಗಿನ ಪೀಕ್ ಅವರ್‌ನಲ್ಲಿ ಈ ದುರಂತ ಸಂಭವಿಸಿದೆ. ಟಿನ್ ಫ್ಯಾಕ್ಟರಿ ಜಂಕ್ಷನ್ ಬಳಿ ಈ ದುರ್ಘಟನೆ ನಡೆದಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಹನ್ನಾ ಇನಾಕಾ ಅವರು ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ವೇಳೆ, ಏಕಾಏಕಿ ಸಮತೋಲನ ಕಳೆದುಕೊಂಡು ರಸ್ತೆಗೆ ಬಿದ್ದಿದ್ದಾರೆ.

ಅದೇ ವೇಳೆ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಅವರನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗದೆ, ನೇರವಾಗಿ ಚಕ್ರಗಳ ಕೆಳಗೆ ಸಿಲುಕಿಸಿಕೊಂಡಿದೆ. ಬಸ್ ಚಕ್ರಗಳ ಕೆಳಗೆ ಸಿಲುಕಿದ ಪರಿಣಾಮ ಹನ್ನಾ ಗಂಭೀರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
ಘಟನಾ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು, ಅಪಘಾತದ ದೃಶ್ಯ ಅತ್ಯಂತ ಭೀಕರವಾಗಿದ್ದು, ಯುವತಿಯನ್ನು ರಕ್ಷಿಸಲು ಯಾರಿಗೂ ಅವಕಾಶವೇ ಸಿಗಲಿಲ್ಲ ಎಂದು ತಿಳಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಜನರು ಜಮಾಯಿಸಿದರೂ, ಆಕೆ ಈಗಾಗಲೇ ಮೃತಪಟ್ಟಿದ್ದಳು ಎಂದು ತಿಳಿಸಿದ್ದಾರೆ. ಅಪಘಾತ ನಡೆದ ಬಳಿಕ ಮೃತ ಯುವತಿಯ ಗುರುತು ಮತ್ತು ಹಿನ್ನೆಲೆ ಮಾಹಿತಿ ತಡವಾಗಿ ಲಭ್ಯವಾಗಿದೆ. ಈ ವಿಚಾರ ಸಾರ್ವಜನಿಕರಲ್ಲಿ ಇನ್ನಷ್ಟು ನೋವು ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹದೇವಪುರ ಟ್ರಾಫಿಕ್ ಪೊಲೀಸರು ಬಿಎಂಟಿಸಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಪಘಾತಕ್ಕೆ ಕಾರಣವಾದ ಎಲೆಕ್ಟ್ರಿಕ್ ಬಸ್‌ನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಅಪಘಾತವು ಚಾಲಕನ ಅಜಾಗರೂಕ ಹಾಗೂ ಅತಿವೇಗದ ಚಾಲನೆಯಿಂದ ಆಗಿದೆಯೇ? ಅಥವಾ ಎಲೆಕ್ಟ್ರಿಕ್ ಬಸ್‌ನಲ್ಲಿ ಯಾವುದೇ ತಾಂತ್ರಿಕ ದೋಷವಿದೆಯೇ? ಎಂಬ ಎಲ್ಲ ಅಂಶಗಳನ್ನು ಪರಿಶೀಲಿಸಿ ತನಿಖೆ ಮುಂದುವರಿಸಿದ್ದಾರೆ.
ಈ ದುರ್ಘಟನೆಯು ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳು, ವಿಶೇಷವಾಗಿ ಜಂಕ್ಷನ್‌ಗಳಲ್ಲಿ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರ ಸುರಕ್ಷತೆ ಕುರಿತು ಮತ್ತೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಟಿನ್ ಫ್ಯಾಕ್ಟರಿ ಜಂಕ್ಷನ್‌ನಂತಹ ಪ್ರಮುಖ ಪ್ರದೇಶಗಳಲ್ಲಿ ಸಂಚಾರ ನಿಯಂತ್ರಣ, ವೇಗ ನಿಯಂತ್ರಣ ಮತ್ತು ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂಬ ಒತ್ತಾಯಗಳು ಕೇಳಿಬರುತ್ತಿವೆ. ಪೊಲೀಸರು ಮುಂದಿನ ತನಿಖೆಯ ಬಳಿಕ ಅಪಘಾತದ ನಿಖರ ಕಾರಣವನ್ನು ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ.












Click it and Unblock the Notifications