Namma Metro: ಚಲ್ಲಘಟ್ಟ ಮೆಟ್ರೋ ನಿಲ್ದಾಣ ಬಳಿ ಪಾದಾಚಾರಿ 'ಸೇತುವೆ' ನಿರ್ಮಾಣ ಶೀಘ್ರ
ಬೆಂಗಳೂರು, ಏಪ್ರಿಲ್ 04: ಬೆಂಗಳೂರು ಪ್ರಮುಖ ಮೆಟ್ರೋ ನಿಲ್ದಾಣಕ್ಕೆ ಜನರು, ವಿದ್ಯಾರ್ಥಿಗಳು ಬರಲು, ರಸ್ತೆ ದಾಟಲು ಅನುಕೂಲವಾಗುವಂತೆ ಎರಡು ಬದಿಯ ರಸ್ತೆ ಸಂಪರ್ಕಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮೇಲ್ಸೇತುವೆ (Over Bridge) ನಿರ್ಮಿಸಲು ಮುಂದಾಗಿದೆ.
ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿರುವ ಚಲ್ಲಘಟ್ಟ ಮೆಟ್ರೋ ನಿಲ್ದಾಣಕ್ಕೆ ಬರಲು ಇಲ್ಲವೇ ನಿಲ್ದಾಣದಿಂದ ಬಸ್ ಹಿಡಿಯಲು ತೆರಳುವವರು ಮುಖ್ಯರಸ್ತೆಯನ್ನು ಜೀವ ಕೈಲಿ ಹಿಡಿದು ದಾಟಬೇಕಾದ ಸ್ಥಿತಿ ಈ ಭಾಗದಲ್ಲಿದೆ. ಸಾರ್ವಜನಿಕರು, ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳಿಗೆ ಇಲ್ಲಿ ಅನಾನುಕೂಲವಾಗುತ್ತಿದೆ.

ಇವರೆಲ್ಲರಿಗೂ ಪರಿಹಾರ ನೀಡುವ ಭಾಗವಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಬೆಂಗಳೂರಿನ ರಸ್ತೆ ಎರಡೂ ಬದಿ ಸಂಪರ್ಕಿಸುವಂತೆ, ಸರಾಗವಾಗಿ ಹತ್ತಿ ಇಳಿಯಲು, ರಸ್ತೆ ದಾಟಲು ಅನುಕೂಲವಾಗುವಂತೆ ಪಾದಾಚಾರಿ ಮೇಲ್ಸೇತುವೆ ನಿರ್ಮಿಸಲಿದೆ. ಇದರ ಕಾಮಗಾರಿಯನ್ನು ಚಲ್ಲಘಟ್ಟ ಡಿಪೋ ನಿರ್ಮಿಸಿದ ಗುತ್ತಿಗೆದಾರರಿಗೆ ನೀಡಲಾಗುತ್ತಿದೆ ಎಂದು ಮೆಟ್ರೋ ಅಧಿಕಾರಿಗಳು ತಿಸಿದ್ದರ ಬಗ್ಗೆ TNIE ವರದಿ ಮಾಡಿದೆ.
ಚಲ್ಲಘಟ್ಟ ನಿಲ್ದಾಣ ಅಕ್ಕಪಕ್ಕ ಜನರ ಓಡಾಟ ಏರಿಕೆ
ಚಲ್ಲಘಟ್ಟವರೆಗಿನ ನೇರಳೆ ಮಾರ್ಗವನ್ನು 2023ರಲ್ಲಿ ಅಕ್ಟೋಬರ್ ತಿಂಗಳಲ್ಲಿ ತೆರೆಯಲಾಯಿತು. ಇದಾದ ಬಳಿಕ ಈ ಮೆಟ್ರೋ ನಿಲ್ದಾಣ ಸುತ್ತಮುತ್ತ ನಿತ್ಯ ಸುಮಾರು 10,000 ದಷ್ಟು ಜನರು ಓಡಾಡುತ್ತಿದೆ. ಮೆಟ್ರೋ ನಿಲ್ದಾಣಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ.
ರೂ.2.22 ಕೋಟಿ ವೆಚ್ಚದ ಸೇತುವೆ
ಇವರೆಲ್ಲರಿಗೂ ಮೇಲ್ಸೇತುವೆ ಅವಶ್ಯಕವಾಗಿದೆ. ಒಟ್ಟು 2.22 ಕೋಟಿ ರೂ.ವೆಚ್ಚದಲ್ಲಿ ಸೇತುವೆ ನಿರ್ಮಾಣವಾಲಿದೆ. ಮುಂದಿನ ಸೆಪ್ಟೆಂಬರ್ ಅಂತ್ಯದ ವೇಳೆಗೆ ಕಾರ್ಯಾರಂಭ ಆಗಲಿದೆ. ಇದು ಮೆಟ್ಟಿಲುಗಳು ಮತ್ತು ಲಿಫ್ಟ್‌ಗಳನ್ನು ಹೊಂದಿರುತ್ತದೆ. ನಿರ್ಮಾಣ ಗುತ್ತಿಗೆ ಪಡೆದಿರುವ RITES PMPL ಸಂಸ್ಥೆಯಿಂದ ಆರಂಭಿಕ ಕೆಲಸಗಳು ಆರಂಭವಾಗಿದೆ ಎಂದು ಮೆಟ್ರೋ ಮೂಲಗಳು ಮಾಹಿತಿ ನೀಡಿವೆ.

ಓವರ್ ಬ್ರಿಡ್ಜ್ ಯಾರಿಗೆಲ್ಲ ಅನುಕೂಲ
ಬೆಂಗಳೂರು-ಮೈಸೂರು ರಸ್ತೆಯಲ್ಲಿ ಚಲ್ಲಘಟ್ಟ ಮೆಟ್ರೋ ನಿಲ್ದಾಣ ಸಮೀಪವಿರುವ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು, ವ ಎಸಿಎಸ್ ಇಂಜಿನಿಯರಿಂಗ್ ಕಾಲೇಜು, ಆಸ್ಪತ್ರೆಗಳು, ಎಸ್‌ಡಿಎಂ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ ಆಸ್ಪತ್ರೆ, ಐಸಿಎಫ್‌ಎಐ ಬಿಸಿನೆಸ್ ಸ್ಕೂಲ್ ಗಳಿಗೆ ಬರುವವರು, ಬಂದು ಹೋಗುವವರ ಪ್ರಮಾಣ ಬೆಳಗ್ಗೆ ಮತ್ತು ಸಂಜೆ ಹೆಚ್ಚಿರುತ್ತದೆ. ಇಲ್ಲಿನ ರಸ್ತೆಗಳು ಗಿಜುಗುಡುತ್ತಿರುತ್ತವೆ.
ಮೆಟ್ರೋ ನಿಲ್ದಾಣದ 100 ಮೀಟರ್ ದೂರ ನಿರ್ಮಾಣ
ಇದೆಲ್ಲ ಗಮನಿಸಿ ನಾವು ಮೇಲ್ಸೇತುವೆ ನಿರ್ಮಾಣದ ಯೋಜನೆಯ ಪ್ರಸ್ತಾವನೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಸಿದ್ದು, ಅವರಿಂದ ತಾತ್ವಿಕ ಒಪ್ಪಿಗೆ ಪಡೆದಿದ್ದಾರೆ. ಕೆಲವು ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ. ಮೆಟ್ರೊ ನಿಲ್ದಾಣದ ಪ್ರವೇಶ ದ್ವಾರದಿಂದ 100 ಮೀಟರ್ ದೂರದಲ್ಲಿ ಸೇತುವೆ ನಿರ್ಮಿಸುತ್ತೇವೆ ಎಂದು BMRCL ಯೋಜನೆಗಳು ಮತ್ತು ಯೋಜನಾ ನಿರ್ದೇಶಕ ಡಿ.ರಾಧಾಕೃಷ್ಣ ರೆಡ್ಡಿ ಹೇಳಿದರು.
100 ಮೀಟರ್ ಫುಟ್‌ಪಾತ್
ಮೆಟ್ರೋ ಮಾರ್ಗದ ಸೇತುವೆ ಮತ್ತು ಈ ಹೊಸ ಪಾದಾಚಾರಿ ಮೇಲ್ಸೇತುವೆ ಯೋಜನೆ ಮಧ್ಯೆ ಕನಿಷ್ಠ 5.5 ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಹೀಗಾಗಿ ಮಾರ್ಗದ ಕೆಳಗೆ ರಸ್ತೆ ಮೇಲೆ ನಿರ್ಮಿಸಲಿದ್ದೇವೆ. 2.1 ಮೀಟರ್ ಎತ್ತರಕ್ಕೆ ನಿರ್ಮಿಸಲಾಗುವುದು ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು.
ಈ ಮೇಲ್ಸೇತುವೆಯನ್ನು ಜನರು ಬಳಸಲು ಸುಲಭವಾಗುವಂತೆ ಸೇತುವೆಯನ್ನು ಸಂಪರ್ಕಿಸಲು 100 ಮೀಟರ್‌ಗೆ ಫುಟ್‌ಪಾತ್ ನಿರ್ಮಿಸಲಾಗುವುದು. ಇದಕ್ಕಾಗಿ ರಾಜರಾಜೇಶ್ವರ್ಇ ವೈದ್ಯಕೀಯ ಕಾಲೇಜು ಭೂಮಿ ನೀಡಲು ಒಪ್ಪಿಗೆ ನೀಡಿದೆ. ಪ್ರಾಥಮಿಕ ಕೆಲಸಗಳು ಶುರುವಾಗಿದ್ದು, ಇನ್ನೂ ಮುಖ್ಯ ಕಾಮಗಾರಿ ಮುಂದಿನ ಕೆಲವೇ ತಿಂಗಳುಗಳಲ್ಲಿ ಆರಂಭವಾಗುವ ಸಾಧ್ಯತೆ ಇದೆ.












Click it and Unblock the Notifications