Bengaluru Metro New Plan: ಮೆಟ್ರೋ ಹೊರ ಭಾಗ ಜಾಹೀರಾತು ಪ್ರದರ್ಶನ, ಟೆಂಡರ್
ಬೆಂಗಳೂರು, ಅಕ್ಟೋಬರ್ 07: ಬೆಂಗಳೂರು ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಚಿಂತನೆ ಬೆನ್ನಲ್ಲೇ ಇದೀಗ ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಬೇರೆ ರೀತಿಯಲ್ಲಿ ಆದಾಯ ಹೆಚ್ಚಿಸಿಕೊಳ್ಳಲು ನಿರ್ಧರಿಸಿದೆ. ಈಗಾಗಲೇ ವಾಹನಗಳ ಪಾರ್ಕಿಂಗ್, ನಿಲ್ದಾಣಗಳಲ್ಲಿನ ಮಳಿಗೆ ಬಾಡಿಗೆ ಇನ್ನಿತರ ಮೂಲಗಳಿಂದ ವಾರ್ಷಿಕ ಕೋಟ್ಯಂತರ ಆದಾಯ ಗಳಿಸುತ್ತಿರುವ ನಮ್ಮ ಮೆಟ್ರೋ ಮತ್ತೊಂದು ಆದಾಯ ಗಳಿಕೆಯ ಮಾರ್ಗವನ್ನು ಕಂಡು ಕೊಂಡಿದೆ.
ಬೆಂಗಳೂರು ನಮ್ಮ ಮೆಟ್ರೋ 73ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಹಸಿರು ಮಾರ್ಗ (Namma Metro Green Line) ಮತ್ತು ನೇರಳೆ ಮಾರ್ಗದಲ್ಲಿ (Namma Metro Purple Line) ನಿತ್ಯ ರೈಲು ಸೇವೆ ಒದಗಿಸುತ್ತಿದೆ. ರೈಲಿನ ಒಳಗಿನ ನಾಮಫಲಕದಲ್ಲಿ ಸಣ್ಣ ಪುಟ್ಟ ಜಾಹೀರಾತು ನೀಡುತ್ತಿರುವ ಬಿಎಂಆರ್‌ಸಿಎಲ್ ಇದೀಗ ಮೆಟ್ರೋ ರೈಲಿನ ಹೊರಗೆ ಜಾಹೀರಾತು ನೀಡುವ ಮೂಲಕ ಆದಾಯ ಗಳಿಕೆ ಪ್ಲಾನ್ ಮಾಡಿಕೊಂಡಿದೆ ಎಂದು 'ಕನ್ನಡಪ್ರಭ' ವರದಿ ಮಾಡಿದೆ.

ಹೌದು, ಮುಂಬೈನಂತಹ ಮಹಾನಗರಗಳಲ್ಲಿ ರೈಲುಗಳ ಹೊರಗಡೆ ವಿವಿಧ ಜಾಹೀರಾತು ಪ್ರದರ್ಶನ ಮಾಡಲಾಗುತ್ತಿದೆ. ಅದೇ ರೀತಿ ನಮ್ಮ ಮೆಟ್ರೋ ರೈಲುಗಳ ಹೊರ ಬಾಗದಲ್ಲಿ ಜಾಹೀರಾತು ಪ್ರಸಾರ ಮಾಡಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಈಗಾಗಲೇ ಈ ಕುರಿತು ಪ್ರತ್ಯೇಕ ಟೆಂಡರ್‌ಗಳನ್ನು ಆಹ್ವಾನಿಸಿದೆ. ವಿವಿಧ ಖಾಸಗಿ, ಇನ್ನಿತರ ಕಂಪನಿಗಳು ಟೆಂಡರ್ ಪಾಲ್ಗೊಂಡು ಹಣಕಾಸು ವಿಚಾರದಲ್ಲಿ ಒಪ್ಪಂದ ಎಲ್ಲವು ಮುಗಿದಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಮೆಟ್ರೋ ರೈಲುಗಳ ಹೊರ ಭಾಗದಲ್ಲಿ ಜಾಹೀರಾತುಗಳು ರಾರಾಜಿಸಲಿವೆ.
ನಾವು ಈ ಹಿಂದೆ 75ನೇ ವರ್ಷ ಸ್ವಾತಂತ್ರೋತ್ಸವದ (2022) ಸಂಧರ್ಭದಲ್ಲಿ ಮೆಟ್ರೋ ಹೊರ ಭಾಗ ಜಾಹೀರಾತು ನೋಡಿದ್ದೇವು. ಈ ಹಿಂದೆ ಮೆಟ್ರೋ ವಯಾಡಕ್ಟ್, ಪಿಲ್ಲರ್‌ಗಳ ಮೇಲೆ ಜಾಹೀರಾತು ಹಾಕಲು ಅನುಮತಿ ಇತ್ತು. ಅದರಿಂದಲೇ ವಾರ್ಷಿಕವಾಗಿ ನಮ್ಮ ಮೆಟ್ರೋಗೆ ಸುಮಾರು 10ಕೋಟಿ ರೂ.ನಷ್ಟು ಆದಾಯ ಬರುತ್ತಿತ್ತು. ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಜಾಹೀರಾತು ನಿಷೇಧ ಕಾಯ್ದೆಯಡಿ ಇದೆಲ್ಲವನ್ನು ಬ್ಯಾನ್ ಮಾಡಲಾಯಿತು. ಇದೀಗ ಆದಾಯ ಹೆಚ್ಚಿಸಿಕೊಳ್ಳಲು ಹೊಸ ಪ್ಲಾನ್ ಮಾಡಿಕೊಂಡ ಬಿಎಂಆರ್‌ಸಿಎಲ್ ಟೆಂಡರ್ ಆಹ್ವಾನಿಸಿದೆ.

ಇದು ಮಾತ್ರವಲ್ಲದೇ ನಮ್ಮ ಮೆಟ್ರೋ ಅಧಿಕಾರಿಗಳು ಇನ್ಫೋಸಿಸ್ ಮತ್ತು ಬಯೋಕಾನ್ ಸಂಸ್ಥೆ ಸೇರಿದಂತೆ ಕೆಲವು ಸಂಸ್ಥೆಗಳ ಹೆಸರು ಮೆಟ್ರೋ ನಿಲ್ದಾಣಗಳಿಗೆ ಇಂತಿಷ್ಟು ಕಾಲಮೀತಿಗೆ ನಾಮಕರಣ ಮಾಡಲು ರೂ.100 ಕೋಟಿ ಒಪ್ಪಂದ ಮಾಡಿಕೊಂಡಿದೆ.
ಸದ್ಯ ಬೆಂಗಳೂರು ಮೆಟ್ರೋಗೆ ವಾರ್ಷಿಕವಾಗಿ ಪ್ರಯಾಣಿಕರ ಸಂಚಾರದದಿಂದ ವಾರ್ಷಿಕವಾಗಿ ರೂ. 422 ಕೋಟಿ ಹಾಗೂ ಜಾಹೀರಾರು, ಕಟ್ಟಡ ಬಾಡಿಗೆ ಸೇರಿ ವಾರ್ಷಿಕ ರೂ.170 ಕೋಟಿಗೂ ಅಧಿಕ ಹಣ ಸಂಗ್ರಹವಾಗುತ್ತಿದೆ. ಇದರೊಂದಿಗೆ ಹೆಚ್ಚುತ್ತಿರುವ ಖರ್ಚುಗಳನ್ನು ಸರಿದೂಗಿಸಲು ಬಿಎಂಆರ್‌ಸಿಎಲ್ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಮೊನ್ನೆಯಷ್ಟೇ ಚಿತ್ರೀಕರಣಕ್ಕೆ ಷರತ್ತು ಸಹಿತ ಅನುಮತಿ ನೀಡಿದೆ.
ಹೊಸ ಆದಾಯ ಮೂಲ ಸೃಷ್ಟಿಗೆ ನಿರ್ಧಾರ
ಸದ್ಯ ಟಿಕೆಟ್ ದರ ಏರಿಕೆ ಅನಿವಾರ್ಯ ಎಂಬ ಕಾರಣಕ್ಕೆ ದರ ಹೆಚ್ಚಳಕ್ಕೆ ನಿರ್ಧರಿಸಿರುವ ಬಿಎಂಆರ್‌ಸಿಎಲ್‌ಗೆ ಇನ್ನು ಅನುಮತಿ ದೊರೆತಿಲ್ಲ. ಇದರ ಬೆನ್ನಲ್ಲೆ ಹೊಸ ಆದಾಯ ಮೂಲ ಸೃಷ್ಟಿಗೆ ಬಿಎಂಆರ್‌ಸಿಎಲ್ ಸಿದ್ಧವಾಗಿದೆ.
ಸದ್ಯ 73 ಕಿಲೋ ಮೀಟರ್ ಇರುವ ಮೆಟ್ರೋ ಹಾಲಿ ಮಾರ್ಗವು 2025ರ ಹೊತ್ತಿಗೆ 200 ಕಿ.ಮೀ.ಗೂ ಅಧಿಕ ವಿಸ್ತರಣೆ ಮಾಡುವ ಗುರಿ ಹೊಂದಲಾಗಿದೆ. ಟಿಕೆಟ್ ದರ ಏರಿಕೆ ಹಾಗೂ ಮೆಟ್ರೋ ರೈಲಿನ ಹೊರಗಡೆ ಜಾಹೀರಾತು ಪ್ರಸಾರ ಕುರಿತಂತೆ ಶೀಘ್ರವೇ ಮಾಹಿತಿ ದೊರೆಯಲಿದೆ.












Click it and Unblock the Notifications