Namma Metro; ಬೈಯಪ್ಪನಹಳ್ಳಿ-ಕೆಆರ್ ಪುರ ಮೆಟ್ರೋ ಸಂಚಾರಕ್ಕೆ ಒಪ್ಪಿಗೆ
ಬೆಂಗಳೂರು, ಸೆಪ್ಟೆಂಬರ್ 25; ಉದ್ಯಾನ ನಗರಿ ಬೆಂಗಳೂರಿನ ಜನರಿಗೆ ಸಿಹಿಸುದ್ದಿ. ಬೈಯಪ್ಪನಹಳ್ಳಿ-ಕೆಆರ್ ಪುರ ನಮ್ಮ ಮೆಟ್ರೋ ರೈಲು ಸಂಚಾರಕ್ಕೆ ಒಪ್ಪಿಗೆ ನೀಡಲಾಗಿದೆ. ರಾಜ್ಯ ಸರ್ಕಾರದ ಅನುಮತಿ ಬಳಿಕ ಮೆಟ್ರೋ ರೈಲು ಸಂಚಾರ ಪ್ರಾರಂಭಕ್ಕೆ ದಿನಾಂಕ ನಿಗದಿ ಮಾಡಲಾಗುತ್ತದೆ. ಇನ್ನು ಬೈಯಪ್ಪನಹಳ್ಳಿಯಿಂದ ಕೆಂಗೇರಿ ತನಕ ನಮ್ಮ ಮೆಟ್ರೋದಲ್ಲಿ ಜನರು ಸಂಚಾರ ನಡೆಸಬಹುದಾಗಿದೆ.
ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (ದಕ್ಷಿಣ ವೃತ್ತ) ಬೈಯಪ್ಪನಹಳ್ಳಿ-ಕೆಆರ್ ಪುರ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳ ಸಂಚಾರಕ್ಕೆ ಬಿಎಂಆರ್‌ಸಿಎಲ್‌ಗೆ ಒಪ್ಪಿಗೆ ನೀಡಿದ್ದಾರೆ. ಇದರಿಂದಾಗಿ ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ಸಂಪೂರ್ಣ ರೈಲುಗಳ ಸಂಚಾರಕ್ಕೆ ಒಪ್ಪಿಗೆ ಸಿಕ್ಕಿದಂತೆ ಆಗಿದೆ.

ಕಳೆದ ಗುರುವಾರ ಸಂಜೆ ಮೆಟ್ರೋ ರೈಲ್ವೆ ಸುರಕ್ಷತಾ ಆಯಕ್ತರು, ಅಧಿಕಾರಿಗಳ ತಂಡ ಬೈಯಪ್ಪನಹಳ್ಳಿ-ಕೆಆರ್ ಪುರ ಮಾರ್ಗದಲ್ಲಿ ರೈಲುಗಳ ಸಂಚಾರಕ್ಕೆ ಅಗತ್ಯವಿರುವ ತಾಂತ್ರಿಕ ಪರಿಶೀಲನೆ ನಡೆಸಿತ್ತು. ಪರಿಶೀಲನೆ ಯಶಸ್ವಿಯಾಗಿದೆ ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ. ಎಲ್. ಯಶವಂತ ಚೌವ್ಹಾಣ್ ಹೇಳಿದ್ದರು.
ಈಗ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ಈ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳ ಸಂಚಾರಕ್ಕೆ ಒಪ್ಪಿಗೆ ನೀಡಿದ್ದಾರೆ. ಬಿಎಂಆರ್‌ಸಿಎಲ್‌ಗೆ ಸುರಕ್ಷತಾ ಪ್ರಮಾಣ ಪತ್ರವನ್ನು ನೀಡಿದ ಬಳಿಕ ರೈಲುಗಳ ವಾಣಿಜ್ಯ ಸೇವೆಗೆ ರಾಜ್ಯ ಸರ್ಕಾರದ ಒಪ್ಪಿಗೆ ಪಡೆದು ದಿನಾಂಕ ನಿಗದಿ ಮಾಡಲಾಗುತ್ತದೆ.
ಪ್ರಾಯೋಗಿಕ ಸಂಚಾರ ಯಶಸ್ವಿ; ಬಿಎಂಆರ್‌ಸಿಎಲ್ ಆಗಸ್ಟ್ ತಿಂಗಳಿನಲ್ಲಿ ಬೈಯಪ್ಪನಹಳ್ಳಿ-ಕೆಆರ್ ಪುರ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರವನ್ನು ನಡೆಸಿತ್ತು. ಪ್ರಾಯೋಗಿಕ ಸಂಚಾರ ಯಶಸ್ವಿಯಾದ ಬಳಿಕ, ರೈಲು ನಿಲ್ದಾಣಗಳ ಕಾಮಗಾರಿಗಳು ಪೂರ್ಣಗೊಂಡ ನಂತರ ಪರಿಶೀಲನೆಗಾಗಿ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರನ್ನು ಆಹ್ವಾನಿಸಲಾಗಿತ್ತು. ಅಧಿಕಾರಿಗಳ ತಂಡ ಕಳೆದ ವಾರ ಪರಿಶೀಲನೆ ಪೂರ್ಣಗೊಳಿಸಿ ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ನೀಡಿದೆ.
ಬೆಂಗಳೂರು ನಗರದಲ್ಲಿ ಸದ್ಯ ನಮ್ಮ ಮೆಟ್ರೋ ನೇರಳೆ ವಿಸ್ತರಿತ ಮಾರ್ಗದಲ್ಲಿ ಬೈಯಪ್ಪನಹಳ್ಳಿ-ಕೆಆರ್ ಪುರ ಮತ್ತು ಕೆಂಗೇರಿ-ಚಲ್ಲಘಟ್ಟ ನಡುವೆ ನಮ್ಮ ಮೆಟ್ರೋ ರೈಲು ಸಂಚಾರ ನಡೆಸುತ್ತಿಲ್ಲ. ಸೆಪ್ಟೆಂಬರ್ ಅಂತ್ಯದಲ್ಲಿ ಈ ಮಾರ್ಗದಲ್ಲಿ ಮೆಟ್ರೋ ರೈಲಿನ ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ.
ಪ್ರಧಾನಿ ನರೇಂದ್ರ ಮೋದಿ ಈ ವರ್ಷದ ಮಾರ್ಚ್ 25ರಂದು ವೈಟ್‌ಫೀಲ್ಡ್-ಕೆಆರ್ ಪುರ (13.7) ಕಿ. ಮೀ. ಮಾರ್ಗವನ್ನು ಉದ್ಘಾಟನೆ ಮಾಡಿದ್ದರು. ಆದರೆ ಬೈಯಪ್ಪನಹಳ್ಳಿ-ಕೆಆರ್ ಪುರ ನಡುವೆ ಮೆಟ್ರೋ ಸಂಚಾರ ಇಲ್ಲದ ಕಾರಣ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗಿತ್ತು. ಈಗ ಆ ಮಾರ್ಗವೂ ಸಂಚಾರಕ್ಕೆ ಮುಕ್ತವಾಗುತ್ತಿದೆ.
ಬಿಎಂಆರ್‌ಸಿಎಲ್ ಬೈಯಪ್ಪನಹಳ್ಳಿ-ಕೆಆರ್ ಪುರ (2.1 ಕಿ. ಮೀ.) ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಿದರೆ ಪ್ರಯಾಣಿಕರು ಕೆಆರ್ ಪುರದಲ್ಲಿ ಮೆಟ್ರೋದಿಂದ ಇಳಿದು, ಪುನಃ ಮೆಟ್ರೋ ಹತ್ತಿ ಸಾಗುವುದು ತಪ್ಪಲಿದೆ. ವೈಟ್‌ಫೀಲ್ಡ್‌ನಿಂದ ನೇರವಾಗಿ ಬೈಯಪ್ಪನಹಳ್ಳಿ ತನಕ ಮೆಟ್ರೋದಲ್ಲಿ ಸಂಚಾರ ನಡೆಸಬಹುದಾಗಿದೆ.
ಪ್ರಯಾಣಿಕರು ಇನ್ನು ಮುಂದೆ ಪಶ್ಚಿಮ ಬೆಂಗಳೂರಿನ ಚಲ್ಲಘಟ್ಟ ಮತ್ತು ಪೂರ್ವ ಬೆಂಗಳೂರಿನ ವೈಟ್‌ಫೀಲ್ಡ್ ನಡುವೆ ನಮ್ಮ ಮೆಟ್ರೋದಲ್ಲಿ ಸಂಚಾರ ನಡೆಸಬಹುದು. ಈ ಪ್ರಯಾಣದ ಅವಧಿ ಸುಮಾರು 76 ನಿಮಿಷ ಎಂದು ಅಂದಾಜಿಸಲಾಗಿದೆ. ಪೂರ್ಣ ಪ್ರಯಾಣ ದರ 60 ರೂ. ಆಗಬಹುದು. ಸಂಪೂರ್ಣ ನೇರಳೆ ಮಾರ್ಗ ಉದ್ಘಾಟನೆಗೊಂಡರೆ ನಮ್ಮ ಮೆಟ್ರೋ ಪ್ರತಿದಿನದ ಪ್ರಯಾಣಿಕರ ಸಂಖ್ಯೆ 6.2 ಲಕ್ಷದಿಂದ 7 ಲಕ್ಷಕ್ಕೆ ಏರಿಕೆಯಾಗಲಿದೆ ಎಂಬ ನಿರೀಕ್ಷೆ ಇದೆ.












Click it and Unblock the Notifications