Namma Metro: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದ ರ್‍ಯಾಪಿಡೋ
ಬೆಂಗಳೂರು, ಡಿಸೆಂಬರ್ 21: ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. 2025ರಲ್ಲಿ ಹೊಸ ಮಾರ್ಗ ಉದ್ಘಾಟನೆಯಾಗಲಿದ್ದು, ಮೆಟ್ರೋ ಪ್ರಯಾಣಿಕರ ಸಂಖ್ಯೆ ಸುಮಾರು 3 ಲಕ್ಷ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ ಮೆಟ್ರೋ ಪ್ರಯಾಣಿಕರ ಮೇಲೆ ಆಟೋ, ಕ್ಯಾಬ್, ಬಿಎಂಟಿಸಿ ಬಸ್‌ಗಳು ಹೆಚ್ಚಿನ ಗಮನವನ್ನು ಹರಿಸಿವೆ. ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಈಗಾಗಲೇ ಆಟೋ ಸೇವೆ ಇದೆ. ಆದರೆ ಈಗ ಬಿಎಂಆರ್‌ಸಿಎಲ್ ಈ ಮಾದರಿ ಸೇವೆ ನೀಡಲು ಒಪ್ಪಂದ ಮಾಡಿಕೊಳ್ಳಲಿದೆ.
ನಗರದ 20 ಮೆಟ್ರೋ ನಿಲ್ದಾಣದಲ್ಲಿ ಆಟೋ ಸೇವೆ ನೀಡಲು ಬಿಎಂಆರ್‌ಸಿಎಲ್ 'ರ್‍ಯಾಪಿಡೋ' ಜೊತೆ ಒಪ್ಪಂದ ಮಾಡಿಕೊಳ್ಳಲಿದೆ. ಮೆಟ್ರೋ ನಿಲ್ದಾಣದ ಬಳಿ ಆಟೋ ಚಾಲಕರು ಮಾಡುತ್ತಿರುವ ಸುಲಿಗೆ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ಬಿಎಂಆರ್‌ಸಿಎಲ್ ಈ ಕ್ರಮಕ್ಕೆ ಮುಂದಾಗಿದೆ.

ವಿವಿಧ ಬಡಾವಣೆಗಳಿಂದ ನಮ್ಮ ಮೆಟ್ರೋ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು, ಮೆಟ್ರೋ ನಿಲ್ದಾಣದಿಂದ ವಿವಿಧ ಕಡೆ ಸಂಚಾರ ನಡೆಸುವ ಪ್ರಯಾಣಿಕರಿಗೆ ಸುಲಭವಾಗಿ ಆಟೋಗಳು ಸಿಗುವಂತೆ ಮಾಡಲು ಬಿಎಂಆರ್‌ಸಿಎಲ್ ಮತ್ತು ರ್‍ಯಾಪಿಡೋ ಒಪ್ಪಂದಕ್ಕೆ ಸಹಿ ಹಾಕಲಿವೆ.
ಆಟೋಗಳಿಗೆ ಪ್ರತ್ಯೇಕ ಪಥ: ಬಿಎಂಆರ್‌ಸಿಎಲ್ ಮತ್ತು ರ್‍ಯಾಪಿಡೋ ಒಪ್ಪಂದದಂತೆ 20 ನಮ್ಮ ಮೆಟ್ರೋ ನಿಲ್ದಾಣದಲ್ಲಿ ರ್‍ಯಾಪಿಡೋ ಆಟೋಗಳಿಗೆ ಪ್ರತ್ಯೇಕ ಪಥವನ್ನು ನಿರ್ಮಾಣ ಮಾಡಲಾಗುತ್ತದೆ. ಮೆಟ್ರೋ ನಿಲ್ದಾಣದಿಂದ ಹೊರ ಬರುವ ಪ್ರಯಾಣಿಕರ ರ್‍ಯಾಪಿಡೋ ಅಪ್ಲಿಕೇಶನ್ ಮೂಲಕ ತಮ್ಮ ಮುಂದಿನ ಪ್ರಯಾಣಕ್ಕೆ ಬುಕ್ ಮಾಡಿಕೊಂಡು ಸಂಚಾರ ನಡೆಸಬಹುದು.
ಇದಕ್ಕಾಗಿಯೇ ರ್‍ಯಾಪಿಡೋದ ಒಬ್ಬ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತದೆ. ಮೆಟ್ರೋ ಪ್ರಯಾಣಿಕರು ಸರ್ಕಾರ ನಿಗದಿ ಮಾಡಿದ ದರದ ಅನ್ವಯ ಮೊದಲ 2 ಕಿ. ಮೀ.ಗೆ 30 ರೂ. ಮತ್ತು ನಂತರದ ಪ್ರತಿ 1 ಕಿ. ಮೀ.ಗೆ 15 ರೂ. ಹೆಚ್ಚಿನ ದರವನ್ನು ಪಾವತಿಸಬೇಕಾಗುತ್ತದೆ.
ಈ ಕುರಿತು ಮಾತುಕತೆ ನಡೆಯುತ್ತಿದೆ, ರ್‍ಯಾಪಿಡೋದ ಆಟೋಗಳು ಮೆಟ್ರೋ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಿವೆ. ನಮ್ಮ ಮೆಟ್ರೋ ನಿಲ್ದಾಣಕ್ಕೆ ಆಗಮಿಸಲು, ನಿಲ್ದಾಣದಿಂದ ಸಾಗಲು ಅನುಕೂಲಕರ ದರದಲ್ಲಿ, ಯಾವುದೇ ಸುಲಿಗೆ ಇಲ್ಲದೇ ಆಟೋ ಸೇವೆ ಸಿಗುವಂತೆ ಆಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.
ಸದ್ಯ ಯಾವ-ಯಾವ ಮೆಟ್ರೋ ನಿಲ್ದಾಣದಲ್ಲಿ ಪ್ರತ್ಯೇಕ ಆಟೋ ಪಥ ನಿರ್ಮಾಣ ಮಾಡಲು ಅವಕಾಶವಿದೆ? ಎಂದು ಬಿಎಂಆರ್‌ಸಿಎಲ್ ಸಮೀಕ್ಷೆಯನ್ನು ನಡೆಸುತ್ತಿದೆ. ಈ ಸಮೀಕ್ಷೆಯ ಬಳಿಕ ಈ ಒಪ್ಪಂದವನ್ನು ಅಂತಿಮಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಬಿಎಂಆರ್‌ಸಿಎಲ್ ಇಂದಿರಾ ನಗರ ಮೆಟ್ರೋ ನಿಲ್ದಾಣದಲ್ಲಿ ಇದೇ ಮಾದರಿ ಸೇವೆಯನ್ನು ನೀಡಲು ನಮ್ಮ ಯಾತ್ರಿ ಅಪ್ಲಿಕೇಶನ್ ಜೊತೆ ಒಪ್ಪಂದವನ್ನು ಮಾಡಿಕೊಂಡಿದೆ. ಈ ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ, ಆಟೋ ಚಾಲಕರು ಸಹ ನಮ್ಮ ಯಾತ್ರಿಗೆ ನೋಂದಣಿ ಮಾಡಿಸಿದ್ದು, ಅವರು ಸಹ ಇದಕ್ಕೆ ಬೆಂಬಲ ಸೂಚಿಸಿದ್ದಾರೆ.
ಈಗ 20 ನಿಲ್ದಾಣದಲ್ಲಿ ಈ ಮಾದರಿ ಸೇವೆ ನೀಡಲು ರ್‍ಯಾಪಿಡೋದ ಜೊತೆ ಒಪ್ಪಂದ ಆಗಲಿದ್ದು, ಶೀಘ್ರವೇ ನಿಲ್ದಾಣಗಳ ಹೆಸರು ಘೋಷಣೆಯಾಗಲಿದೆ. ನಗರದಲ್ಲಿ ಸಾವಿರಾರು ಆಟೋಗಳು ರ್‍ಯಾಪಿಡೋದ ಅಡಿ ನೋಂದಣಿಯಾಗಿವೆ. ಆದ್ದರಿಂದ ಈ ಸೇವೆಗೆ ಆಟೋ ಚಾಲಕರು ಸಹ ವಿರೋಧ ವ್ಯಕ್ತಪಡಿಸುವುದಿಲ್ಲ ಎಂದು ಬಿಎಂಆರ್‌ಸಿಎಲ್ ಅಂದಾಜಿಸಿದೆ.












Click it and Unblock the Notifications