Karnataka Cabinet: ರಾಜೀನಾಮೆ ವಾಟ್ಸಪ್ ಯೂನಿವರ್ಸಿಟಿ ಸೃಷ್ಟಿ: ಬಿಕೆ ಹರಿಪ್ರಸಾದ್ ಕೆಂಡಾಮಂಡಲ
ಮೇಲ್ಮನೆ ವಿಪಕ್ಷ ನಾಯಕರನ್ನು, ಸಭಾನಾಯಕರನ್ನ ಸಚಿವರನ್ನಾಗಿ ಮಾಡೊದು ಸಂಪ್ರದಾಯ, ಪದ್ದತಿ ಹಿಂದಿನಿಂದಿಲೂ ಇತ್ತು ಆದರೆ ಸಿಎಂ ಸಿದ್ದರಾಮಯ್ಯ ಆ ಸಂಪ್ರದಾಯ ಮುರಿದಿದ್ದಾರೆ ಎಂದು ಹಿರಿಯ ಶಾಸಕ ಬಿಕೆ ಹರಿಪ್ರಸಾದ್ ಅಸಮಾಧಾನ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನೆಂದೂ ಸಚಿವ ಸ್ಥಾನ ಬೇಕೆಂದು ಕೇಳಿಲ್ಲ, ಪರಿಷತ್ ನಲ್ಲಿ ಸಭಾನಾಯಕರನ್ನಾಗಿ ಯಾರನ್ನ ಮಾಡಬೇಕೆಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರನ್ನೇ ಕೇಳಿ ಎಂದು ಹೇಳಿದರು.

ರಾಜೀನಾಮೆ ಕೊಡ್ತೀನಿ ಎಂದು ನಾನು ಎಲ್ಲೂ ಹೇಳಿಲ್ಲ. ಅದೆಲ್ಲ ವಾಟ್ಸಾಪ್ ಯುನಿವರ್ಸಿಟಿಯಲ್ಲಿ ಬಂದಂತಹ ವಿಷಯ. ನಾಯಕಿ ಸೋನಿಯಾ ಗಾಂಧಿಯವರು ನನ್ನ ಮೇಲೆ ನಂಬಿಕೆ ಇಟ್ಟು ಪರಿಷತ್ ಸದಸ್ಯತ್ವ ಸ್ಥಾನದ ಜವಾಬ್ದಾರಿ ಕೊಟ್ಟಿದ್ದಾರೆ ಅದನ್ನು ನಿಭಾಯಿಸುತ್ತಿದ್ದೇನೆ. ರಾಜೀನಾಮೆ ನೀಡುವುದಾದರೆ ಸೋನಿಯಾಗಾಂಧಿ ಹಾಗೂ ಸಭಾಪತಿಯವರಿಗೆ ನೀಡುತ್ತೇನೆ. ಸಚಿವ ಸ್ಥಾನ ಇಲ್ಲದಿದ್ದರೂ ಪರಿಷತ್‌ನಲ್ಲಿ ಸಾಮಾನ್ಯ ಸದಸ್ಯನಾಗಿರುತ್ತೇನೆ ಎಂದರು.
ಡಿಕೆ ಶಿವಕುಮಾರ್ ಸಿಎಂ ಆಗುವ ಬಗ್ಗೆ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲು ಕೇವಲ ಒಂದು ಹೆಜ್ಜೆ ಮಾತ್ರ ಇದೆ. ಅಧಿಕಾರ ಹಂಚಿಕೆ ವಿಚಾರದ ಬಗ್ಗೆ ಕೇವಲ ಏಳು ಜನರಿಗೆ ಮಾತ್ರ ಗೊತ್ತಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್ ಹಾಗೂ ಸುರ್ಜೇವಾಲಾ ಅವರಿಗೆ ಮಾತ್ರ ಈ ವಿಚಾರ ಗೊತ್ತಿದೆ. ಉಳಿದವರು ಯಾರೇ ಮಾತಾಡಿದರೂ ಕೇವಲ ಒಬ್ಬರನ್ನ ಓಲೈಸಿಕೊಳ್ಳಲು ಮಾತ್ರ. ಅಧಿಕಾರ ಹಂಚಿಕೆ ಬಗ್ಗೆ ಯಾರು ಏನೇ ಮಾತಾಡಿದರೂ ಅದು ಸುಳ್ಳು ಎಂದು ಹೇಳಿದರು.
ನನ್ನ ಸಾಮಾಜಿಕ ನ್ಯಾಯದ ಸಿದ್ದಾಂತಕ್ಕೂ, ಅಹಿಂದ ರಾಜಕೀಯಕ್ಕೂ ವ್ಯತ್ಯಾಸ ಇದೆ. ನಾನು ಸರ್ವಧರ್ಮ ಸಮ ಬಾಳ್ವೆಯಲ್ಲಿ ನಂಬಿಕೆ ಇಟ್ಟವನು. ಕಾಂಗ್ರೆಸ್ ಸಿದ್ದಾಂತದಲ್ಲಿ ನಂಬಿಕೆ ಇಟ್ಟಿದ್ದೇನೆ. ಎಲ್ಲಿಯವರೆಗೂ ಇರು ಅಂತಾರೊ, ಅಲ್ಲಿಯವರೆಗೂ ನಾನು ಇರ್ತಿನಿ.
ಕಾಲ ಬಂದಾಗ ಎಲ್ಲ ಮಾಹಿತಿ ನೀಡುತ್ತೇನೆ. ಎಲ್ಲರೂ ಅವರವರ ಶಕ್ತಿಯ ಅನುಸಾರ ಪಕ್ಷಕ್ಕಾಗಿ ದುಡಿದಿರುತ್ತಾರೆ. ನಾನು ಪಕ್ಷ ಕಟ್ಟಿದವನು ರಾಜೀನಾಮೆ ವಿಚಾರ ಎಲ್ಲಿಂದ ಬಂತೋ ಗೊತ್ತಿಲ್ಲ, ರಾಜೀನಾಮೆ ಕೊಡಲು ನಾನು ಬಾಡಿಗೆ ಮನೆಯಿಂದ ಬಂದವನಲ್ಲ ಸ್ವಂತ ಮನೆಯಲ್ಲಿದ್ದೇನೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ ಎನ್ನುವ ಕಾರಣಕ್ಕೆ ಒಕ್ಕಲಿಗ ಸಮುದಾಯ ಕಾಂಗ್ರೆಸ್‌ಗೆ ಬೆಂಬಲ ನೀಡಿದೆ. ಜೆಡಿಎಸ್ ಮತಗಳು ಈ ಬಾರಿ ಕಾಂಗ್ರೆಸ್‌ಗೆ ಬಂದಿದೆ. ಡಿಕೆಶಿ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದ ನಂತರ ಒಕ್ಕಲಿಗರ ಮತ ಬಂದಿವೆ. ಈಗ ಅವರನ್ನು ಡಿಸಿಎಂ ಮಾಡಲಾಗಿದೆ ಎಂದು ಹೇಳಿದರು.
ಚುನಾವಣೆಗೆ ಮುನ್ನ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸುವುದ ಗ್ಯಾರಂಟಿ. ಅದರಲ್ಲಿ ಯಾವ ಅನುಮಾನವೂ ಬೇಡ. ಈಗಾಗಲೇ ಸಂಬಂಧಪಟ್ಟ ಇಲಾಖೆಯಿಂದ ಮಾಹಿತಿ ಕಲೆಹಾಕಲಾಗುತ್ತಿದೆ, ಆದಷ್ಟು ಬೇಗ ಅದನ್ನು ಜಾರಿ ಮಾಡಲಾಗುವುದು ಎಂದು ಹೇಳಿದರು.












Click it and Unblock the Notifications