BJP: ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ, ಆರ್.ಅಶೋಕ್ ವಿಪಕ್ಷ ಸ್ಥಾನ ತಾತ್ಕಾಲಿಕವೇ?
ಬೆಂಗಳೂರು, ಡಿಸೆಂಬರ್ 05: ತಡವಾಗಿಯಾದರೂ ಕರ್ನಾಟಕ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಮತ್ತು ವಿಪಕ್ಷ ಸ್ಥಾನದ ಆಯ್ಕೆ ನಡೆಯಿತು ಎನ್ನುಷ್ಟರಲ್ಲಿಯೇ ಒಳ ಬೇಗುದಿ ಹೆಚ್ಚಾಗುವಂತೆ ಕಾಣುತ್ತಿದೆ. ಬಿವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಮತ್ತು ಆರ್ ಅಶೋಕ್ ಅವರಿಗೆ ದೊರೆತ ವಿಪಕ್ಷ ಸ್ಥಾನ ತಾತ್ಕಾಲಿಕವೇ?. ಈ ಕುರಿತು ಕೆಲವು ಅಂಶಗಳು ಮತ್ತು ಕಾರಣಗಳನ್ನು ಕಾಂಗ್ರೆಸ್ ತಿಳಿಸಿದೆ.
ಲೋಕಸಭೆ ಚುನಾವಣೆಯ ಬಳಿಕ ಸಂತೋಷ ಕೂಟದ ಆಟ ಮತ್ತೊಮ್ಮೆ ಶುರುವಾಗಲಿದೆ, ಅದಕ್ಕೆ ಬೇಕಾದ ತಯಾರಿಗಳನ್ನು ಈಗಿನಿಂದಲೇ ಮಾಡಿಕೊಳ್ಳುತ್ತಿದೆ ಎಂದು ಟ್ವೀಟ್ ಮೂಲಕ ಮಂಗಳವಾರ ಕರ್ನಾಟಕ ಕಾಂಗ್ರೆಸ್ ಬಿಜೆಪಿ ವಿರುದ್ಧ ಲೇವಡಿ ಮಾಡಿದೆ. ಸ್ವಪಕ್ಷದವರ ಹೇಳಿಕೆಯನ್ನು ಅಸ್ತ್ರವಾಗಿ ಕಾಂಗ್ರೆಸ್ ಬಳಸಿಕೊಂಡಿದೆ.

ಕರ್ನಾಟಕ ಬಿಜೆಪಿಯ ಬಿವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಮತ್ತು ಆರ್ ಅಶೋಕ್ ಅವರಿಗೆ ದೊರೆತ ವಿಪಕ್ಷ ಸ್ಥಾನ 'ತಾತ್ಕಾಲಿಕ ಸಂತೋಷ' ಎಂದು ಹೇಳಿಕೆ. ಇಬ್ಬರನ್ನೂ ಹಂಗಾಮಿ ಅಧ್ಯಕ್ಷ ಹಾಗೂ ಹಂಗಾಮಿ ವಿಪಕ್ಷ ನಾಯಕ ಎಂದು ಘೋಷಿಸಿಬಿಡಿ! ಅಥವಾ ಕೊಳಕು ಬಾಯಿಯ ಬಸನಗೌಡ ಪಾಟೀಲ್ ಯತ್ನಾಳರಿಗೆ ಬಿಜೆಪಿಯ ಹೊಸ ಜೋಕರ್ ಪಟ್ಟ ಕಟ್ಟಿಬಿಡಿ! ಇದು ಬಿಜೆಪಿ vs ಬಿಜೆಪಿ ಎಂದು ಕಾಂಗ್ರೆಸ್ ಟೀಕಿಸಿದೆ.
ಭ್ರಷ್ಟನನ್ನು ಬಿಜೆಪಿ ಅಧ್ಯಕ್ಷ ಮಾಡಿದೆ: ಟೀಕೆ
ಸ್ವತಃ ಬಿಜೆಪಿಯ ಶಾಸಕರೇ (ಯತ್ನಾಳ್) ಬಿಜೆಪಿ ಅಧ್ಯಕ್ಷರಿಗೆ ನೇರವಾಗಿ 'ಭ್ರಷ್ಟ' ಎಂದು ಪಟ್ಟ ಕಟ್ಟಿದ್ದಾರೆ . ಸ್ವಪಕ್ಷೀಯರಿಂದಲೇ ಭ್ರಷ್ಟ ಎಸಿಕೊಂಡವರನ್ನು ಯಾವ ನೈತಿಕತೆಯಲ್ಲಿ ಅಧ್ಯಕ್ಷ ಹುದ್ದೆಯ ಮೇಲೆ ಕೂರಿಸಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಕರ್ನಾಟಕದ ಬಿಜೆಪಿ ವಿರೋಧ ಪಕ್ಷದ ನಾಯಕನಿಗೆ ಸದನದಲ್ಲಿ ಅಭಿನಂದಿಸುವುದಕ್ಕೂ ಬಿಜೆಪಿಗರು ಒಪ್ಪಲಿಲ್ಲ.
ವಿರೋಧ ಪಕ್ಷಕ್ಕೇ ಮತ್ತೊಂದು ವಿರೋಧ ಪಕ್ಷವಿರುವಾಗ ಬಿಜೆಪಿಗೆ ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ಕನಿಷ್ಠ ಅರ್ಹತೆಯನ್ನೂ ಕಳೆದುಕೊಂಡಿದೆ ಎಂದು ಲೇವಡಿ ಮಾಡಿದೆ. ಬಿಜೆಪಿ ನಾಯಕ ಯತ್ನಾಳ್ ಅವರ ಹೇಳಿಕೆಯನ್ನು ಅಸ್ತವಾಗಿ ಪರಿಗಣಿಸಿ ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದರು.

ಚುನಾವಣೆ ಬಳಿಕ ವಿಪಕ್ಷ-ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ: ಯತ್ನಾಳ್
ರಾಜ್ಯ ಬಿಜೆಪಿಯಲ್ಲಿ ವಿರೋಧ ಪಕ್ಷವಾಗಲಿ, ರಾಜ್ಯಾಧ್ಯಕ್ಷ ಸ್ಥಾನವಾಗಲಿ ಉತ್ತರ ಕರ್ನಾಟಕ ಭಾಗದ ನಾಯಕರಿಗೆ ಸಿಕ್ಕಿಲ್ಲ. ಉತ್ತರ ಕರ್ನಾಟಕದವರು, ದಕ್ಷಿಣ ಕರ್ನಾಟಕದವರ ಗುಲಾಮರಲ್ಲ. ಉತ್ತರ ಕರ್ನಾಟಕದ ನಾಯಕರಿಗೆ ನಾಯಕತ್ವ ಕೊಡುವವರೆಗೆ ನಾನು ಬಿಜೆಪಿ ಎಲ್ ಪಿ ಸಭೆ ಬಹಿಷ್ಕಿರಿಸುತ್ತೇನೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ವಿಜಯೇಂದ್ರ ಮತ್ತು ಯಡಿಯೂರಪ್ಪ ವಿರುದ್ಧ ಮತ್ತೆ ಕಿಡಿ ಕಾರಿದ ಯತ್ನಾಳ್ ರಾಜವಂಶ ರಾಜಕಾರಣ ಕೊನೆಗಾಣಿಸುತ್ತೇವೆ. ಮುಂದಿನ ಲೋಕಸಭಾ ಚುನಾವಣೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಮತ್ತು ವಿಪಕ್ಷ ನಾಯಕರು ಬದಲಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಸ್ವಪಕ್ಷದವರ ಈ ಹೇಳಿಕೆಯನ್ನೇ ಮುನ್ನೆಲೆಗೆ ತರುತ್ತಿರುವ ಕಾಂಗ್ರೆಸ್ ವಿಜಯೇಂದ್ರ-ಆರ್ ಅಶೋಕ್ ಪಟ್ಟ ತಾತ್ಕಾಲಿಕ ಸಂತೋಷ್ ಎಂದು ಲೇವಡಿ ಮಾಡಿದೆ.












Click it and Unblock the Notifications