MLA Munirathna: ಶಾಸಕ ಮುನಿರತ್ನ ಭೇಟಿ ಬಳಿಕ ಗಂಭೀರ ಆರೋಪ ಮಾಡಿದ ವಿಜಯೇಂದ್ರ
ಬೆಂಗಳೂರು, ಡಿಸೆಂಬರ್ 25: ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆಯಲಾಗಿದೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣ ರಾಜಕೀಯ ಆರೋಪ, ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಈ ಘಟನೆ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂದು ಶಾಸಕ ಮುನಿರತ್ನ ಆರೋಪಿಸಿದ್ದಾರೆ. ಕಾಂಗ್ರೆಸ್ ನಾಯಕರು ಈ ಆರೋಪಗಳಿಗೆ ತಿರುಗೇಟು ನೀಡುತ್ತಿದ್ದಾರೆ.
ಮಲ್ಲೇಶ್ವರದ ಕೆ. ಸಿ. ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ಮುನಿರತ್ನ ಆರೋಗ್ಯ ವಿಚಾರಿಸಿದರು. ಮೊಟ್ಟೆ ಎಸೆದಿರುವ ಪ್ರಕರಣದ ಕುರಿತು ನಂದಿನಿ ಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು, ತನಿಖೆ ನಡೆಸುತ್ತಿದ್ದಾರೆ.

ಬುಧವಾರ ವಾರ್ಡ್ ನಂಬರ್ 42ರ ಲಕ್ಷ್ಮೀದೇವಿ ನಗರದಲ್ಲಿ ಅಪರಿಚಿತ ವ್ಯಕ್ತಿಯಿಂದ ಆಸಿಡ್ ಮೊಟ್ಟೆ ದಾಳಿ ನಡೆಸಲಾಗಿದೆ ಎಂದು ಮುನಿರತ್ನ ಆರೋಪಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರನ್ನು ಬಿ. ವೈ. ವಿಜಯೇಂದ್ರ ಹಾಗೂ ಮಾಜಿ ಶಾಸಕ ಪಿ. ರಾಜೀವ್ ಸೇರಿದಂತೆ ಇತರ ನಾಯಕರು ಭೇಟಿಯಾಗಿ ಮಾತುಕತೆ ನಡೆಸಿದರು.
ಗಂಭೀರ ಆರೋಪ ಮಾಡಿದ ವಿಜಯೇಂದ್ರ: ಮುನಿರತ್ನ ಭೇಟಿ ಬಳಿಕ ಮಾತನಾಡಿದ ಬಿ. ವೈ. ವಿಜಯೇಂದ್ರ ಗಂಭೀರ ಆರೋಪವನ್ನು ಮಾಡಿದರು. "ಮುನಿರತ್ನ ಅವರ ಮೇಲೆ ಮೊಟ್ಟೆ ದಾಳಿ ಆಗಿರುವುದು ಸಣ್ಣ ಘಟನೆ ಅಲ್ಲ" ಎಂದರು.
"ಹೇಗಾದರೂ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಡ ಹಾಕಲಾಗುತ್ತಿದ್ದು, ಬಳಿಕ ಅವರಿಗೆ ಬೇಕಾದವರನ್ನು ಗೆಲ್ಲಿಸಲು ಪ್ರಯತ್ನ ನಡೆದಿದೆ" ಎಂದು ಬಿ. ವೈ. ವಿಜಯೇಂದ್ರ ಕಾಂಗ್ರೆಸ್ ನಾಯಕರ ವಿರುದ್ಧ ಪರೋಕ್ಷವಾಗಿ ಆರೋಪಿಸಿದರು.
"ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ವಿರೋಧ ಪಕ್ಷದ ಮೇಲೆ ಪೊಲೀಸರನ್ನು ಬಳಸಿ ಒಂದಲ್ಲ ಒಂದು ಕೃತ್ಯ ಎಸಗುತ್ತಿದೆ. ಹರೀಶ್ ಪೂಂಜಾ ಮೇಲೆ ಪ್ರಕರಣ ದಾಖಲು ಮಾಡಿದರು. ಸದನದ ಹೊರಗೆ ಸಿ. ಟಿ. ರವಿ ನಡೆಸಿಕೊಂಡ ರೀತಿ ನೀವು ನೋಡಿದ್ದೀರಿ. ಸರ್ಕಾರದ ಕುಮ್ಮಕ್ಕಿನಿಂದ ಆಗಿರುವ ಘಟನೆ ಇದು" ಎಂದು ವಿಜಯೇಂದ್ರ ದೂರಿದರು.
ಡಿಕೆ ಬ್ರದರ್ಸ್ ವಿರುದ್ಧ ಆರೋಪ: ಮೊಟ್ಟೆ ಎಸೆತ ಘಟನೆ ಬಳಿಕ ಮಾತನಾಡಿರುವ ಶಾಸಕ ಮುನಿರತ್ನ, "ನನಗೆ ಕೊಲೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಗನ್ಮ್ಯಾನ್ ಕೇಳಿದ್ದೆ, ಆದರೂ ಕೊಟ್ಟಿಲ್ಲ. ಈ ಘಟನೆಗೆ ಡಿಸಿಎಂ ಡಿ. ಕೆ. ಶಿವಕುಮಾರ್, ಡಿ. ಕೆ. ಸುರೇಶ್, ಹನುಮಂತರಾಯಪ್ಪ, ಕುಸುಮಾ ಹನುಮಂತರಾಯಪ್ಪ ಅವರು ಕಾರಣ" ಎಂದು ಆರೋಪಿಸಿದ್ದಾರೆ.
"ನನ್ನ ಶರ್ಟ್ ಹರಿದು ಹಾಕಿದರೆ 20 ಲಕ್ಷ ರೂ., ಮಸಿ ಬಳಿದರೆ 10 ಲಕ್ಷ ರೂ. ಹೀಗೆ ಒಂದೊಂದು ರೀತಿ ರೇಟ್ ಫಿಕ್ಸ್ ಮಾಡಿದ್ದಾರೆ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಇದನೆಲ್ಲಾ ಮಾಡುತ್ತಿದ್ದಾರೆ" ಎಂದು ಮುನಿರತ್ನ ಆರೋಪಿಸಿದ್ದಾರೆ.
ಮುನಿರತ್ನ ಆರೋಪಕ್ಕೆ ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ಸಾಮಾಜಿಕ ಜಾಲತಾಣದ ಮೂಲಕ ತಿರುಗೇಟು ನೀಡಿದ್ದಾರೆ. 'ಶಾಸಕ ಮುನಿರತ್ನ ಅವರ ಮೇಲಿನ 'ಮೊಟ್ಟೆ ಅಟ್ಯಾಕ್' ಚಿತ್ರದ ರಚನೆ ಹಾಗೂ ನಿರ್ಮಾಣ ಸ್ವತಃ ಅವರದ್ದೇ, ದಲಿತರನ್ನು ತುಚ್ಚವಾಗಿ ನಿಂದಿಸಿ, ಒಕ್ಕಲಿಗ ಗುತ್ತಿಗೆದಾರನ ಕುಟುಂಬದ ಹೆಣ್ಣು ಮಕ್ಕಳ ಬಗ್ಗೆ ಅವಹೇಳನ ಮಾಡಿದ್ದ ಧ್ವನಿ FSL ರಿಪೋರ್ಟ್‌ನಲ್ಲಿ ಅವರದ್ದೇ ಎಂದು ಸಾಬೀತಾದ ಬೆನ್ನಲ್ಲೇ ತರಹೇವಾರಿ ನಾಟಕಗಳು ಶುರುವಾಗಿದೆ" ಎಂದು ಹೇಳಿದ್ದಾರೆ.
"ಜನರೆದುರು ತನ್ನ ನಿಜರೂಪ ಬೆತ್ತಲಾದ ನಂತರ ಸಿಂಪತಿ ಗಿಟ್ಟಿಸಿಕೊಳ್ಳಲು ಇಮೇಜ್ ಬಿಲ್ಡಿಂಗ್ ಆಕ್ಟಿವಿಟಿಯ ಒಂದು ಭಾಗವೇ ಇಂದಿನ ಪ್ರಹಸನಗಳು. ಈತನ ಸ್ಕ್ರಿಪ್ಟೆಡ್ ಸ್ಟೋರಿಗಳು ಅಲ್ಪ ವಿರಾಮದ ಬಳಿಕ ಮತ್ತೆ ಚಾಲ್ತಿಗೆ ಬಂದಿವೆ. ಮಹಿಳೆಯರಿಗೆ ರಾಜಕೀಯದಲ್ಲಿ ಆದ್ಯತೆಯೇ ಕಡಿಮೆ ಇಂತಹ ಸನ್ನಿವೇಶದಲ್ಲಿ ಸ್ವಚ್ಚ ರಾಜಕಾರಣದ ಮೂಲಕ ಸ್ವಾಸ್ಥ್ಯ ಸಮಾಜದ ನಿರ್ಮಾಣದ ಕನಸುಗಳಿಗೆ ಬೆಲೆಯಿಲ್ಲವೆನಿಸುತ್ತದೆ. ಈ ನಾಟಕಗಳನ್ನು ಗಮನಿಸಿದರೆ ಕೊಚ್ಚೆಯಲ್ಲಿ ಹೊರಳಾಡುವ ಹಂದಿಯ ಜೊತೆ ಹಂದಿಗಳಾಗಿಯೇ ಇರಬೇಕಾ ಎಂಬ ಪ್ರಶ್ನೆಯ ಜೊತೆ ಅಸಹ್ಯ ಮೂಡುತ್ತಿದೆ" ಎಂದು ಕುಸುಮಾ ಪೋಸ್ಟ್ ಹಾಕಿದ್ದಾರೆ.












Click it and Unblock the Notifications