ಹೈಕೋರ್ಟ್ ತೀರ್ಪು 'ಪೊಲಿಟಿಕಲ್ ಜಡ್ಜಮೆಂಟ್'!: ಜಮೀರ್ ಅಹ್ಮದ್ ಹೇಳಿಕೆಯಿಂದ ನ್ಯಾಯಾಂಗ ನಿಂದನೆ: ಬಿಜೆಪಿ ಕಿಡಿ
ಬೆಂಗಳೂರು, ಸೆಪ್ಟಂಬರ್ 25: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿರುವ ಕರ್ನಾಟಕ ರಾಜ್ಯ ಹೈಕೋರ್ಟ್ ಮೇಲೆ ಕಾಂಗ್ರೆಸ್ ಸಚಿವ ಬಿ.ಝಡ್ ಜಮೀರ್ ಅಹ್ಮದ್ ಅವರು ಇದೆಂಥ ಆರೋಪ ಮಾಡಿದ್ದಾರೆ. ಪೊಲಿಟಿಕಲ್ ಜಡ್ಜಮೆಂಟ್ ಕೊಡುವುದಕ್ಕೆ ಇದೇನು ಷರಿಯಾ ಕಾನೂನಲ್ಲ. ಕರ್ನಾಟಕದ ಉಚ್ಚ ನ್ಯಾಯಾಲಯ ಬಗ್ಗೆ ಮಾತನಾಡುವಾಗ ಮಾತಿನ ಮೇಲೆ ನಿಗಾ ಇರಲಿ ಎಂದು ಕರ್ನಾಟಕ ಬಿಜೆಪಿ ಕೆಂಡಾಮಂಡಲವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದಂತೆ ಮುಡಾ ಹಗರಣ (Muda Scam case) ಪ್ರಕರಣದಲ್ಲಿ ಹೈಕೋರ್ಟ್ ರಾಜ್ಯಪಾಲರ ನಿರ್ಧಾರ ಎತ್ತಿಹಿಡಿದು ತನಿಖೆಗೆ ಆದೇಶಿಸಿದೆ. ಇದು ರಾಜಕೀಯ ತೀರ್ಪು ಎಂದಿರುವ ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್ ವಿರುದ್ಧ ಕರ್ನಾಟಕ ಬಿಜೆಪಿ ಮತ್ತು ಬಿಜೆಪಿ ವಿಪಕ್ಷ ನಾಯಕ ಆರ್.ಅಶೋಕ್ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂವಿಧಾನಕ್ಕೆ ಅಪಮಾನ ಮಾಡಿದರೆ ಸಹಿಸಲ್ಲ
ಕರ್ನಾಟಕ ಬಿಜೆಪಿಯು, ಸಚಿವ ಜಮೀರ್ ಅಹ್ಮದ್ ಖಾನ್ ಅವರೇ ಕರ್ನಾಟಕ ಹೈಕೋರ್ಟ್ ಮೇಲೆ ಇದೆಂಥಾ ಆರೋಪ ಮಾಡಿದ್ದೀರಿ. ನಿಮ್ಮ ಮಾತಿನ ಮೇಲೆ ನಿಗಾ ಇರಲಿ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಅಪಮಾನ ಮಾಡಿದರೆ ನಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.
ಇನ್ನೂ ವಿಪಕ್ಷ ನಾಯಕ ಆರ್. ಅಶೋಕ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಜಮೀರ್ ಅಹ್ಮದ್ ಅವರು ಸಚಿವರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಸ್ಪೀಕರ್, ರಾಜ್ಯಪಾಲರು ಸೇರಿದಂತೆ ಸಾಂವಿಧಾನಿಕ ಹುದ್ದೆಗಳ ಬಗ್ಗೆ ಅಗೌರವ ತೋರುತ್ತಲೇ ಬಂದಿದ್ದಾರೆ ಎಂದು ದೂರಿದರು.

ಇದೀಗ ಮಾನ್ಯ ಉಚ್ಛ ನ್ಯಾಯಾಲಯವು ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ತೀರ್ಪನ್ನು ಪೊಲಿಟಿಕಲ್ ಜಡ್ಜ್ಮೆಂಟ್ ಎನ್ನುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ್ದಾರೆ. ಇದು ಸಂವಿಧಾನ ವಿರೋಧಿ ಕಾಂಗ್ರೆಸ್ ಪಕ್ಷದಕರಾಳ ಮುಖ ಎಂದು ಅವರು ಜರಿದಿದ್ದಾರೆ.
ಸಚವರಿಂದ ನ್ಯಾಯಾಂಗ ನಿಂದನೆ?
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಗವರ್ನರ್ ವಿರುದ್ಧ ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್ ಸಿಎಂ ವಿರುದ್ಧ ಬುಧವಾರ ತನಿಖೆಗೆ ಆದೇಶಿಸಿತು. ಇಂದು ಗುರುವಾರ ವಿಶೇಷ ನ್ಯಾಯಾಲಯ ಈ ತನಿಖೆಯನ್ನು ಮೈಸೂರು ಲೋಕಾಯುಕ್ತ ಪೊಲೀಸರಿಗೆ ನೀಡಿ ಆದೇಶಿಸಿದೆ.
ಕೋರ್ಟ್ ತೀರ್ಪು ಕುರಿತು ಅನೇಕ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದಾರೆ. ಈ ಪೈಕಿ ಸಚಿವ ಜಮೀರ್ ಅಹ್ಮದ್ ಮಾತನಾಡುವ ಭರದಲ್ಲಿ ಹೈಕೋರ್ಟ್ ತೀರ್ಪು ಪೊಲಿಟಿಕಲ್ ಜಡ್ಜಮೆಂಟ್ ಎಂದು ಹೇಳುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ.
ಸಚಿವ ಜಮೀರ್ ವಿರುದ್ಧ ವ್ಯಾಪಕ ಆಕ್ರೋಶ
ಏಕೆಂದರೆ ಸಂವಿಧಾನದ ಪ್ರಕರಣ, ನ್ಯಾಯಾಂಗ ವ್ಯವಸ್ಥೆಯ ತೀರ್ಪು ಅಂತಿಮವಾದ್ದದ್ದು. ಅದರ ವಿರುದ್ಧ ಹೇಳಿಕೆ ನೀಡುವುದು, ತೀರ್ಪಿನ ಕುರಿತು ಬಹಿರಂಗವಾಗಿ ಮಾತನಾಡುವುದು ನ್ಯಾಯಾಂಗ ನಿಂದನೆ ಆಗುತ್ತದೆ. ಒಂದು ವೇಳೆ ತೀರ್ಪು ನಿಮಗೆ ಸಮಂಜಸವಾಗದಿದ್ದಲ್ಲಿ, ಸಮಾಧಾನ ತರದಿದ್ದಲ್ಲಿ ನೀವು ಮೇಲ್ಮನವಿ ಸಲ್ಲಿಸಲು ಅವಕಾಶ ಇರುತ್ತದೆ. ಅದರ ಹೊರತು ಹೀಗೆ ತೀರ್ಪಿನ ಮೇಲೆ ಅನುಮಾನ ರೀತಿಯ ಮಾತನಾಡಿದರೆ ಅದು ನ್ಯಾಯಾಂಗ ನಿಂದನೆ ಆಗುತ್ತದೆ. ಸದ್ಯ ಜಮೀರ್ ಅಹ್ಮದ್ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.












Click it and Unblock the Notifications