ಕರ್ನಾಟಕ ಬಜೆಟ್: ಪ್ರತಿಯೊಬ್ಬ ಕನ್ನಡಿಗರ ಮೇಲೆ ₹1 ಲಕ್ಷ ಸಾಲ?: ವಿಪಕ್ಷ ನಾಯಕರು ಹೇಳಿದ್ದೇನು?
ಬೆಂಗಳೂರು, ಮಾರ್ಚ್ 07: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಸಕ್ತ 2025-26 ರ ಬಜೆಟ್ ನಲ್ಲಿ ಆರ್ಥಿಕ ಸುಧಾರಣೆ, ಆರ್ಥಿಕ ಸಬಲೀಕರದತ್ತ ರಾಜ್ಯವನ್ನು ತೆಗೆದುಕೊಂಡು ಹೋಗುವ ಯಾವುದೇ ಕ್ರಮ ಇಲ್ಲ. ಇದೊಂದು ಮತ್ತೊಂದು ಜನರ ಮೇಲೆ ಆರ್ಥಿಕ ಹೊರೆಯನ್ನು ಹೇರಿರುವ ಜನ ವಿರೋಧಿ ನಿರಾಶಾದಾಯಕ ಬಜೆಟ್ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಇತ್ತ ಸಚಿವರು ಸಾಮಾಜಿಕ ಕಳಕಳಿ, ಉದ್ಯಮಸ್ನೇಹಿ ಬಜೆಟ್ ಇದು ಎಂದು ಹೊಗಳಿದ್ದಾರೆ.
ಬಸವರಾಜ ಬೊಮ್ಮಾಯಿ ಅವರು, ಕಳೆದ ವರ್ಷ ಬಜೆಟ್ ನಲ್ಲಿ ಹೇಳಿರುವುದಕ್ಕೂ ಮಾಡಿರುವುದಕ್ಕೂ ಬಹಳ ವ್ಯತ್ಯಾಸ ಇದೆ. ಕಳೆದ ವರ್ಷ ಒಟ್ಟು ಆದಾಯ 3,68,674 ಕೋಟಿ ಬಜೆಟ್ ನಲ್ಲಿ ಹೇಳಿದ್ದು ಈಗ ಅದು 3,58,657 ಕೋಟಿ ಹತ್ತು ಸಾವಿರ ಕೋಟಿ ಕಡಿಮೆ ಆದಾಯ ರಾಜ್ಯ ಸಾಧಿಸಿದೆ.

ಎರಡನೇಯದಾಗಿ ಕಳೆದ ವರ್ಷ ಬಜೆಟ್ ನಲ್ಲಿ ಒಟ್ಟು ವೆಚ್ಚ 3,71,383 ಕೋಟಿ ಎಂದು ಬಜೆಟ್ ನಲ್ಲಿ ಹೇಳಿದ್ದು ಅದು ಬಜೆಟ್ 3,65,865 ಕೋಟಿಗೆ ಇಳಿಸಲಾಗಿದೆ. ಅದರಲ್ಲಿಯೂ ಬಂಡವಾಳ ವೆಚ್ಚ ಕುಸಿದಿದೆ. ಅಂದರೆ 2024-25 ಅಭಿವೃದ್ಧಿಯ ದರದಲ್ಲಿ ಕುಂಠಿತವಾಗಿದೆ ಎಂದರು.
ಈ ವರ್ಷದ ಬಜೆಟ್ ನಲ್ಲಿ ವಿತ್ತೀಯ ಕೊರತೆ 2.95 ಅಂತ ಬಜೆಟ್ ನಲ್ಲಿ ತೋರಿಸಿದ್ದು ವಾಸ್ತವಿಕವಾಗಿ ನಮ್ಮ ಜಿಎಸ್ ಡಿಪಿಯ ಶೇ 3% ಕ್ಕಿಂತ ಹೆಚ್ಚಿಗೆ ಆಗುವುದು ನಿಶ್ಚಿತ. ಇದು ಕೇವಲ ಅಂಕಿ ಅಂಶಗಳ ಹೊಂದಾಣಿಕೆ. ಮತ್ತು ಒಟ್ಟು ಸಾಲ 7,64,655 ಕೋಟಿ ಆಗಿರುವುದು ನಮ್ಮ ಜಿಎಸ್ ಡಿಪಿಯ ಸುಮಾರು 25% ರಷ್ಟು ಇರುವುದು ಆರ್ಥಿಕ ದಿವಾಳಿಗೆ ಸಾಕ್ಷಿಯಾಗಿದೆ ಎಂದು ದೂರಿದ್ದಾರೆ.
ಬಜೆಟ್ ನಲ್ಲಿ ಶಿಕ್ಷಣಕ್ಕೆ ಶೆ 2% ರಷ್ಟು ಮಹಿಳಾ ಮಕ್ಕಳ ಇಲಾಖೆಗೆ ಶೇ 1% ರಷ್ಟು ಕಡಿಮೆ ಅನುದಾನ ನೀಡಲಾಗಿದೆ. ನೀರಾವರಿ, ಗ್ರಾಮೀಣ ಅಭಿವೃದ್ಧಿ, ಕೃಷಿಗೆ ವಿಶೇಷವಾಗಿರುವ ಯಾವುದೇ ಅನುದಾನ ನೀಡದಿರುವುದು ರೈತಾಪಿ ವರ್ಗಕ್ಕೆ ನಿರಾಶಾದಾಯಕವಾಗಿದೆ ಎಂದು ಹೇಳಿದರು.
ಸಾಮಾಜಿಕ ಕಳಕಳಿ, ಉದ್ಯಮಸ್ನೇಹಿ ಬಜೆಟ್: ಸಚಿವ
ಮುಖ್ಯಮಂತ್ರಿ ಸಿದ್ದರಾಮಯ್ಯನವರು 16ನೇ ಬಾರಿಗೆ ಮಂಡಿಸಿರುವ ಬಜೆಟ್ ಸಾಮಾಜಿಕ ಕಳಕಳಿ ಹೊಂದಿರುವ ಕಲ್ಯಾಣ ಕಾರ್ಯಕ್ರಮಗಳು ಮತ್ತು ಆರ್ಥಿಕ ಬೆಳವಣಿಗೆಗೆ ಇಂಬು ನೀಡುವ ಬಜೆಟ್ ಆಗಿದೆ. ಕೈಗಾರಿಕಾ ಬೆಳವಣಿಗೆಗೂ ಪ್ರಾತಿನಿಧ್ಯ ನೀಡಿರುವ ಸಮಗ್ರ ದೃಷ್ಟಿಕೋನದ ಬಜೆಟ್ ಆಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದರು.
ಸಿದ್ದರಾಮಯ್ಯನವರು 1995ರಲ್ಲಿ ಮೊದಲ ಬಾರಿ ಬಜೆಟ್ ಮಂಡಿಸಿದಾಗ ಅದರ ಗಾತ್ರ 12 ಸಾವಿರ ಕೋಟಿ ರೂ.ಗಳಿತ್ತು. ಈ ವರ್ಷ ಇದು 4.09 ಲಕ್ಷ ಕೋಟಿ ರೂ.ಗಳಿಗೆ ಏರಿದೆ. ಇದು ಅವರ ಆರ್ಥಿಕ ಚಿಂತನೆ ಪ್ರತಿಫಲಿಸುತ್ತದೆ. ಜತೆಗೆ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯದ ಬಗ್ಗೆ ಅವರು ಹೇಳಿದ್ದಾರೆ. ಇದು ಒಂದು ಹೊಸ ಚರ್ಚೆಗೆ ನಾಂದಿ ಹಾಡಲಿದೆ ಎಂದು ತಿಳಿಸಿದರು.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳಕ್ಕೆ ಮುಖ್ಯಮಂತ್ರಿಗಳು ಕೃಷಿ ಸಂಶೋಧನಾ ಕೇಂದ್ರ ಮತ್ತು ಮುಧೋಳಕ್ಕೆ ಹೆರಿಗೆ ಆಸ್ಪತ್ರೆ ಘೋಷಿಸಿದ್ದಾರೆ. ಇದು ಪ್ರಾದೇಶಿಕ ಸಮತೋಲನೆ ನಿವಾರಣೆ ಮಾಡುವ ಕ್ರಮವಾಗಿದೆ. ಹಾಗೆಯೇ, ತಿಡಗುಂದಿಯಲ್ಲಿ ಪ್ಲೇ & ಪ್ಲಗ್ ಮಾದರಿಯ ಕೈಗಾರಿಕಾ ಪಾರ್ಕ್ ಸ್ಥಾಪನೆ ಘೋಷಿಸಿರುವುದು ಹರ್ಷ ತಂದಿದೆ.
ಬೆಂಗಳೂರು ಮೆಟ್ರೋ ವಿಸ್ತರಣೆ, ರಸ್ತೆ ಯೋಜನೆಗಳು, ಸಂಚಾರ ನಿಯಂತ್ರಣ ಉಪಕ್ರಮಗಳಿಗೆ ಉತ್ತೇಜನ ನೀಡಿದ್ದಾರೆ. ಹೀಗಾಗಿ ಇದೊಂದು ಜನಸ್ನೇಹಿ ಬಜೆಟ್ ಎಂದು ಸಚಿವರು ವಿವರಿಸಿದರು.
01 ಲಕ್ಷ ರೂಪಾಯಿ ಸಾಲ ಹೊರಿಸಿದ ಸಿಎಂ: ವಿಪಕ್ಷ ನಾಯಕ
ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ ಬಜೆಟ್ ಅತ್ಯಂತ ನಿರಾಶಾದಾಯಕ, ಅಭಿವೃದ್ಧಿ ಶೂನ್ಯ, ದೂರದೃಷ್ಟಿ ರಹಿತ ಅಡ್ಡಕಸುಬಿ ಬಜೆಟ್ ಆಗಿದೆ. ಅಧಿಕಾರಕ್ಕೆ ಬಂದ ಮೇಲೆ ಬಿಸಿ ತುಪ್ಪದಂತಾಗಿರುವ ಗ್ಯಾರೆಂಟಿಗಳನ್ನು ಮುಂದುವರೆಸಲು ಆಗದೆ ನಿಲ್ಲಿಸಲೂ ಆಗದೆ ಕಾಂಗ್ರೆಸ್ ಸರ್ಕಾರ ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಿದೆ. ಪ್ರತಿ ಕನ್ನಡಿಗರ ಮೇಲೆ ಒಂದು ಸಾಲ ಹೊರೆಸಿದ್ದಾರೆ ಎಂದು ವಿಪಕ್ಷ ನಾಯಕರ ಆರ್.ಅಶೋಕ್ ಪ್ರತಿಕ್ರಿಯಿಸಿದರು.
ಪಾಪರ್ ಸರ್ಕಾರದ ಪಾಪರ್ ಬಜೆಟ್
ಕೆಡಿಪಿ ಅಂಕಿ-ಅಂಶದ ಪ್ರಕಾರ, ಕಳೆದ ವರ್ಷದ ಅಂದರೆ 2024-25ನೇ ಬಜೆಟ್ ವರ್ಷದ 10 ತಿಂಗಳಲ್ಲಿ ಶೇಕಡಾ 62 ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ. ಕಳೆದ ವರ್ಷದ ಅನುದಾನವೇ ಖರ್ಚು ಆಗದೆ ಇರುವಾಗ ಈಗ ಇನ್ನೊಂದು ಬಜೆಟ್ ಮಂಡಿಸಿದರೆ ಪ್ರಯೋಜನವೇನು?. ಐದನೇ ಕ್ಲಾಸು ಪಾಸಾಗದ ವಿದ್ಯಾರ್ಥಿ ಆರನೇ ಕ್ಲಾಸಿನ ಪರೀಕ್ಷೆಗೆ ಕಟ್ಟಿದರೆ ಏನು ಪ್ರಯೋಜನ? ಹಾಗಾಗಿದೆ ಸಿದ್ದರಾಮಯ್ಯ ನವರ ಬಜೆಟ್ ನ ಕಥೆ-ವ್ಯಥೆ ಹೀಗಾಗಿದೆ ಎಂದು ಟೀಕಿಸಿದರು.
ಇದು ಕೇವಲ ನಾಮಕಾವಸ್ತೆ ಬಜೆಟ್. ಪಾಪರ್ ಸರ್ಕಾರದ ಪಾಪರ್ ಬಜೆಟ್. ನಿವೃತ್ತಿ ಆಗುತ್ತಿರುವ ಮುಖ್ಯಮಂತ್ರಿಗಳ ನಿರ್ಗಮನದ ಬಜೆಟ್. ಇದರಿಂದ ಕರ್ನಾಟಕಕ್ಕೆ, ಕನ್ನಡಿಗರಿಗೆ ನಯಾಪೈಸೆ ಉಪಯೋಗವಿಲ್ಲ. ಅಧಿಕಾರಕ್ಕೆ ಬಂದ ಮೇಲೆ ಬಿಸಿ ತುಪ್ಪದಂತಾಗಿರುವ ಗ್ಯಾರೆಂಟಿಗಳನ್ನು ಮುಂದುವರೆಸಲು ಆಗದೆ ನಿಲ್ಲಿಸಲೂ ಆಗದೆ ಕಾಂಗ್ರೆಸ್ ಸರ್ಕಾರ ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಿದೆ.
ಸಿಎಂ ಸಿದ್ದರಾಮಯ್ಯ ಕೊನೆ ಬಜೆಟ್?
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೊನೆಯ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್‌ನಲ್ಲಿ ಯಾವುದೇ ಹೊಸ ಘೋಷಣೆ ಇಲ್ಲ. ಆದರೆ ತಿಪ್ಪೆ ಸಾರಿಸುವಂತೆ ಹಿಂದಿನ ಕಾರ್ಯಕ್ರಮಗಳನ್ನು ಮುಂದುವರಿಸಲಾಗಿದೆ. ಹಳೆ ಮೈಸೂರು ಅಥವಾ ಉತ್ತರ ಕರ್ನಾಟಕಕ್ಕೆ ನೀರಾವರಿ ಯೋಜನೆಗಳನ್ನು ಕೇಂದ್ರ ಸರ್ಕಾರದ ಅನುಮತಿ ಬಳಿಕ ಮುಂದುವರಿಸುತ್ತೇವೆ ಎಂದು ತಿಳಿಸಲಾಗಿದೆ. ಇದನ್ನು ಓದಿ ಪುಟಗಳನ್ನು ವ್ಯರ್ಥ ಮಾಡಲಾಗಿದೆ ಎಂದು ಗುಡುಗಿದರು.












Click it and Unblock the Notifications