Assembly Election 2023: ಕೈ, ಕಮಲ ನಾಯಕರು ತೆನೆ ಹೊತ್ತ ಮಹಿಳಾ ಗುರುತಿನ ಪಕ್ಷದ ಪಾಲು
ವಿಧಾನಸಭೆ ಚುನಾವಣೆ ಸಮೀಪವಿರುವ ಹೊತ್ತಲ್ಲೆ ಪಕ್ಷಾಂತರ/ಪಕ್ಷ ಸೇರ್ಪಡೆ ಪ್ರಕ್ರಿಯೆ ಮುಂದುವರಿದಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಸ್ವ ಪಕ್ಷ ತೊರೆದು ಜೆಡಿಎಸ್ ಸೇರುವ ಮೂಲಕ ಜೆಡಿಎಸ್‌ನ ಬಲ ಹೆಚ್ಚಿಸಿದ್ದಾರೆ. ಅವರು ಯಾರೆಂದು ತಿಳಿಯಿರಿ
ಬೆಂಗಳೂರು, ಫೆಬ್ರವರಿ 19: ವಿಧಾನಸಭೆ ಚುನಾವಣೆ ಸಮೀಪವಿರುವ ಹೊತ್ತಲ್ಲೆ ಪಕ್ಷಾಂತರ/ಪಕ್ಷ ಸೇರ್ಪಡೆ ಪ್ರಕ್ರಿಯೆ ಮುಂದುವರಿದಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಸ್ವ ಪಕ್ಷ ತೊರೆದು ಜೆಡಿಎಸ್ ಸೇರುವ ಮೂಲಕ ಜೆಡಿಎಸ್‌ನ ಬಲ ಹೆಚ್ಚಿಸಿದ್ದಾರೆ.
ಬಿಜೆಪಿಯ ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ, ಕಾಂಗ್ರೆಸ್‌ನ ಮಾಜಿ ವಿಧಾನ ಪರಿಷತ್ ಸದಸ್ಯರ ಎಸ್.ಎಲ್.ಘೋಟ್ನೇಕರ್ ಹಾಗೂ ಕೋಚಿಮುಲ್ ನಿರ್ದೇಶಕ ವಡಗೂರು ಹರೀಶ್‌ಗೌಡ ಅವರು ಬೆಂಬಲಿಗರ ಸಮೇತ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.
ಬೆಂಗಳೂರಿನಲ್ಲಿ ಭಾನುವಾರ ಜೆಡಿಎಸ್ ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಕಾಂಗ್ರೆಸ್, ಬಿಜೆಪಿ ನಾಯಕರಿಗೆ ಪಕ್ಷದ ತೆನೆ ಹೊತ್ತ ಮಹಿಳೆ ಚಿಹ್ನೆಯ (ಜೆಡಿಎಸ್) ಭಾವುಟ ನೀಡಿ, ಸ್ವಾಗತಿಸಿ ಬರಮಾಡಿಕೊಂಡರು.
ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ ಅವರು ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾದರೆ. ಎಸ್.ಎಲ್. ಘೋಟ್ನೇಕರ್ ಮತ್ತು ವಡಗೂರು ಹರೀಶ್ ಗೌಡ ಅವರು ಕಾಂಗ್ರೆಸ್ ಪಕ್ಷ ತೊರೆದು ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ಪಕ್ಷವನ್ನು ಸೇರಿದರು.

70 ಕ್ಷೇತ್ರಗಳಲ್ಲಿ ಪಂಚರತ್ನ ಯಾತ್ರೆ: ಉತ್ತಮ ಸ್ಪಂದನೆ
ಕಾರ್ಯಕ್ರಮದಲ್ಲಿ ಬರಮಾಡಿಕೊಂಡು ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಈಗಾಗಲೇ 70 ಕ್ಷೇತ್ರಗಳಲ್ಲಿ ಪಂಚರತ್ನ ಯಾತ್ರೆ ನಡೆಸಿದ್ದೇವೆ. ಉತ್ತರ ಕರ್ನಾಟಕದಲ್ಲೂ ಜನ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು. ನವಲಗುಂದ ಕ್ಷೇತ್ರದಲ್ಲಿ ಒಬ್ಬರು ನಮ್ಮ ಪಕ್ಷ ಬಿಟ್ಟು ಹೋಗಿದ್ದರು. ಅಲ್ಲೂ ಕೂಡ ಭಾರೀ ಪ್ರಮಾಣದಲ್ಲಿ ಜನ ಸೇರಿದ್ದರು. ಎಲ್ಲೆಡೆ ನಿರೀಕ್ಷೆಗೂ ಮೀರಿ ಜನಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

10 ಲಕ್ಷ ಜನ ಪಂಚರತ್ನ ಯಾತ್ರೆ ಸಮಾರೋಪದಲ್ಲಿ ಭಾಗಿ?
ಮೈಸೂರು- ಮಂಡ್ಯ ಇಲ್ಲವೇ ಹಾಸನದ ಭಾಗದಲ್ಲಿ ಪಂಚರತ್ನ ಯಾತ್ರೆಯ ಸಮಾರೋಪ ಕಾರ್ಯಕ್ರಮ ಹಮ್ಮಿಕೊಳ್ಳುವ ಚಿಂತನೆ ನಡೆದಿದೆ. ಕನಿಷ್ಠ ಹತ್ತು ಲಕ್ಷ ಜನ ಈ ಕಾರ್ಯಕ್ರಮದಲ್ಲಿ ಸೇರುವ ನಿರೀಕ್ಷೆ ಇದೆ. ರಾಜ್ಯದ ವಿವಿಧ ಭಾಗಗಳಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಕಾರವಾರ ಜಿಲ್ಲೆಯಲ್ಲಿ ಕನಿಷ್ಠ ನಾಲ್ಕು ಸ್ಥಾನ ಗೆಲ್ಲಲಿದ್ದೇವೆ. 2023ಕ್ಕೆ ಘೊಟ್ನೇಕರ್ ಮತ್ತು ಹಾಲರವಿ ಆಯ್ಕೆ ಆಗಿ ವಿಧಾನಸಭೆಗೆ ಬರುತ್ತಾರೆ.
ಬೆಳಗಾವಿ ಜಿಲ್ಲೆಯಲ್ಲೂ ಇರುವ 18 ವಿಧಾನಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್ ಆರೇಳು ಸ್ಥಾನ ಗೆಲ್ಲುವ ವಾತಾವರಣ ಈಗ ಇದೆ. ನಾವು ಅಚ್ಚರಿಯ ರೀತಿಯಲ್ಲಿ ಗೆದ್ದು ಬರಲಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷ ವಿಸರ್ಜನೆ ಮಾಡುತ್ತೇನೆ ಎಚ್‌ಡಿಕೆ ಸವಾಲ್
ಜೆಡಿಎಸ್‌ನ ಎಚ್‌ಡಿ ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬರದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹೇಳಿಕೊಂಡು ತಿರುಗುತ್ತಿದ್ದಾರೆ. ಅವರಿಗೆ ಏನು ಹೇಳುವುದು? ಸಂಪೂರ್ಣ ಅಧಿಕಾರಕ್ಕೆ ಬಂದು ಪಂಚರತ್ನ ಯೋಜನೆಗಳನ್ನು ಜಾರಿ ಮಾಡದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದು ಸವಾಲು ಹಾಕಿದ್ದೇನೆ. ಅದು ಕಾಂಗ್ರೆಸ್ ಅಧ್ಯಕ್ಷರಿಗೆ ಸರಿಯಾಗಿ ಅರ್ಥ ಆಗಿಲ್ಲ ಎಂದು ಡಿಕೆ ಶಿವಕುಮಾರ್ ಅವರಿಗೆ ಕುಮಾರಸ್ವಾಮಿ ಟಾಂಗ್ ನೀಡಿದರು.

ತೋರಿಕೆಗೆ ಪಂಚರತ್ನ ಯಾತ್ರೆ ಮಾಡಿಲ್ಲ
ರಾಜ್ಯದಲ್ಲಿ ಕೆಲವರು ಜೆಡಿಎಸ್‌ಅನ್ನು ಲಘುವಾಗಿ ಪರಿಗಣಿಸಿದ್ದು, ಅವರಿಗೆಲ್ಲ ಚುನಾವಣೆಯಲ್ಲಿ ಉತ್ತರ ಸಿಗಲಿದೆ. ಈ ಸಲ ರಾಷ್ಟ್ರೀಯ ಪಕ್ಷಗಳನ್ನು ಜನ ದೂರ ಇಡಲಿದ್ದಾರೆ. ಪಂಚರತ್ನ ಕಾರ್ಯಕ್ರಮ ಸುಮ್ಮನೆ ತೋರಿಕೆಗೆ ಮಾಡುತ್ತಿಲ್ಲ. ರಾಜ್ಯದ ಮಹಿಳೆಯರ, ಬಡಜನರ ಅವಶ್ಯಕತೆಗೆ ಬೇಕಾದ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ಹೇಳಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಕೆ.ಎನ್ ತಿಪ್ಪೇಸ್ವಾಮಿ, ಇಂಚರ ನಾರಾಯಣಸ್ವಾಮಿ, ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಕೋಲಾರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಪ್ರಕಾಶ್, ಹುಬ್ಬಳ್ಳಿ ಧಾರವಾಡ, ಉತ್ತರ ಕನ್ನಡ ಜಿಲ್ಲೆಯ ವಿವಿಧ ಮುಖಂಡರು ಪಾಲ್ಗೊಂಡಿದ್ದರು.












Click it and Unblock the Notifications