Vinay Gowda: ನಟ ದರ್ಶನ್ ಜೈಲುಪಾಲು: ಬಿಗ್‌ಬಾಸ್ ಸಲಗ ವಿನಯ್ ಗೌಡಗೆ ಹೊಸ ಟೆನ್ಷನ್
ಬೆಂಗಳೂರು, ಜೂನ್ 25: ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲುಪಾಲಾಗಿದ್ದು, ಆತ ನಟಿಸುತ್ತಿರುವ ಮುಂದಿನ ಸಿನಿಮಾಗಳ ಭವಿಷ್ಯವೇನು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಈ ಪೈಕಿ ಡೆವಿಲ್ ಸಿನಿಮಾ ಸಖತ್ ಹೈಪ್ ಕ್ರಿಯೆಟ್ ಮಾಡಿತ್ತು. ಚಿತ್ರೀಕರಣ ಕೂಡ ಭರ್ಜರಿಯಾಗಿ ನಡೆಯುತ್ತಿರುವ ಹೊತ್ತಲ್ಲೇ ದರ್ಶನ್ ಜೈಲು ಸೇರಿದ್ದಾರೆ. ಹೀಗಾಗಿ ಈ ಸಿನಿಮಾ ಮೂಲಕ ಹೊಸ ಕನಸು ಕಂಡವರಿಗೆ ತೀರಾ ನಿರಾಸೆಯಾಗಿದೆ.
ಬಿಗ್‌ಬಾಸ್ ಕನ್ನಡ ಸೀಜನ್ 10ರ ಸಲಗ ಎಂದೇ ಖ್ಯಾತಿ ಪಡೆದ ವಿನಯ್ ಗೌಡ ಡೆವಿಲ್ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀದ ದರ್ಶನ್ ಬಂಧನದಿಂದ ಸಿನಿಮಾ ಅರ್ಧಕ್ಕೆ ನಿಂತಿದ್ದು, ಈ ಬಗ್ಗೆ ನಟ ವಿನಯ್ ಗೌಡ ಮಾತನಾಡಿದ್ದಾರೆ.

ಸ್ಪೀಡ್ ಪ್ಲಸ್ ಕರ್ನಾಟಕ ಚಾನೆಲ್‌ನೊಂದಿಗೆ ಸಂದರ್ಶನದಲ್ಲಿ ಮಾತನಾಡಿದ ವಿನಯ್, ಬಿಗ್‌ಬಾಸ್‌ನಿಂದ ಹೊರ ಬಂದ ಮೇಲೆ ಡೆವಿಲ್ ನನ್ನ ಎರಡನೇ ಸಿನಿಮಾ. ಮೊದಲನೇ ಸಿನಿಮಾದ ಬಗ್ಗೆ ಸದ್ಯದಲ್ಲೇ ಹೇಳುತ್ತೇನೆ. ಯಾಕೆಂದರೆ ನಮಗೆ ಪ್ರೀತಿ ವಿಶ್ವಾಸ ಕೊಟ್ಟಿರುವವರಿಗೆ ನಾವು ಆ ಸ್ಥಾನ ಕೊಟ್ಟಿರುತ್ತೇವೆ. ಅದು ಇರಬೇಕು. ಯಾವಾಗಲೂ ಇರುತ್ತದೆ ಎಂದರು.
ಡೆವಿಲ್ ಸಿನಿಮಾ ಹೇಗೆ ಆಗಿದ್ದು ಅಂದರೆ ನಮ್ಮ ಪ್ರಕಾಶ್ ಸರ್ ಅವರ ಪ್ರೊಡಕ್ಷನ್‌ನಲ್ಲಿ ಮುಂಚೇನು ಕೆಲಸ ಮಾಡಿದ್ದೆ. ಧಾರಾವಾಹಿಗಳೆಲ್ಲಾ ನಟನೆ ನೋಡಿದ್ದರು. ನನಗೆ ಅವರು ಫೋನ್ ಮಾಡಿದ್ದರು. ಆದರೆ ಡೆವಿಲ್ ಸಿನಿಮಾಗೆ ಅಂತಾ ಗೊತ್ತಿರಲಿಲ್ಲ. ಫೋನ್ ಮಾಡಿ ಕರೆಸಿ ಪಾತ್ರದ ಬಗ್ಗೆ ವಿವರಿಸಿದರು. ಸಿನಿಮಾಗೆ ಒಂದು ಬೇಸ್ ಅಂತಾನೇ ಆ ಪಾತ್ರ ಇರುವುದು. ಒಳ್ಳೆ ರಗಡ್ ಪಾತ್ರ ಅದು. ಪಾತ್ರದ ಬಗ್ಗೆ ಜಾಸ್ತಿ ಹೇಳಲಾಗುವುದಿಲ್ಲ ಎಂದಿದ್ದಾರೆ.
ಒಬ್ಬ ಸ್ಟಾರ್ ನಟನ ಜೊತೆ ನಟಿಸಬೇಕು ಅಂದರು. ನಾನು ಮೊದಲೇ ಅವರ ಜೊತೆ ಕೆಲಸ ಮಾಡಿರುವುದರಿಂದ ನನಗೆ ಆ ಪ್ರೊಡಕ್ಷನ್ ಹೌಸ್ ತುಂಬಾ ಇಷ್ಟ. ಡೆವಿಲ್ ಸಿನಿಮಾದಲ್ಲಿ ನನ್ನದು ಈಗ 30% ಶೂಟ್ ಆಗಿದೆ. ನನ್ನ ಭಾಗದ ಎಲ್ಲಾ ಚಿತ್ರೀಕರಣ ಆಗಿದೆ. ದರ್ಶನ್ ಅವರ ಜೊತೆ ಆಗಿಲ್ಲ. ಒಂದಿಷ್ಟು ಫೈಟ್ ಸೀನ್ ಬಾಕಿ ಇದೆ ಎಂದರು.

ಸಿನಿಮಾ ಬಿಟ್ಟು ಪ್ರಸ್ತುತ ಆದ ಬೆಳವಣಿಗೆ ಅಂದರೆ ದರ್ಶನ್ ಬಂಧನದ ಬಗ್ಗೆ ಮಾತನಾಡಿದ ವಿನಯ್ ಗೌಡ, ನಾನು ಅವರ ಬಗ್ಗೆ ಇವರ ಬಗ್ಗೆ ಮಾತನಾಡುತ್ತಿಲ್ಲ. ನಾವು ಚಿತ್ರರಂಗದವರೇ ಲೇಟ್ ಆಗಿ ಬಂದಿರಬಹುದು. ಅಥವಾ ಚಿತ್ರರಂಗಕ್ಕೆ ಕೊಡುಗೆ ಕಮ್ಮಿ ಇರಬಹುದು. ಆದರೆ ಶುರು ಮಾಡಿದ್ದೇವೆ. ಇಲ್ಲಿಂದ ಆರಂಭವಾಗಿದೆ ಮುಂದೆ ಹೇಗೆ ಹೋಗುತ್ತದೆಯೋ ಗೊತ್ತಿಲ್ಲ. ಆದರೆ ನಾನು ನನ್ನನ್ನು ಈ ಚಿತ್ರರಂಗದ ಭಾಗ ಎಂದುಕೊಳ್ಳುತ್ತೇನೆ.
ತೊಂದರೆ ಆಗಿದೆ. ಒಂದು ಘಟನೆ ನಡೆದಿದೆ. ಅದನ್ನು ಜಡ್ಜ್ ಮಾಡಲು ನಾವು ಯಾರೂ ಅಲ್ಲ. ಮಾಡಿರುವುದು ನಿಜಾನಾ..? ಸುಳ್ಳಾ..? ನಮಗೆ ಗೊತ್ತಿಲ್ಲ. ಕೋರ್ಟ್ ಇದೆ, ಕಾನೂನು ಇದೆ ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ..ಇಲ್ಲ ಅಂದರೆ ಬಿಡುಗಡೆ ಆಗಲಿ ಅಂತಾ ನಾನು ಬಯಸುವುದು. ಆದರೆ ಡೆವಿಲ್ ಸಿನಿಮಾ ನಿಂತಿರುವುದಕ್ಕೆ ನನಗೆ ಬೇಜಾರಾಗಿದೆ. ನನಗೊಬ್ಬನಿಗೆ ಅಲ್ಲ..ಎಲ್ಲರಿಗೂ ಹಾಗೇ ಆಗಿದೆ ಎಂದು ಹೇಳಿದರು.
ಒಂದು ಒಳ್ಳೆ ಪ್ರಾಜೆಕ್ಟ್ ನಡೆಯುತ್ತಿತ್ತು. ಅದು ಈಗ ಅರ್ಧದಲ್ಲೇ ನಿಂತಿದೆ. ಸಿನಿಮಾದ ಮುಂದಿನ ಭವಿಷ್ಯ ಏನು? ಆ ಪ್ರಾಜೆಕ್ಟ್‌ನ ಭವಿಷ್ಯ ಏನು ಎನ್ನುವುದು ಯಾರಿಗೂ ಗೊತ್ತಿಲ್ಲ. ಆದರೆ ಪ್ರಾಜೆಕ್ಟ್ ಸೂಪರ್ ಅದು. ಅಂತಹ ಪ್ರಾಜೆಕ್ಟ್‌ನಲ್ಲಿ ಅವಕಾಶ ಸಿಕ್ಕಿರುವುದೇ ದೊಡ್ಡ ವಿಚಾರ. ಹೀಗಾದಾಗ ಖಂಡಿತ ಬೇಜಾರಾಗುತ್ತದೆ. ಆದರೆ ಪ್ರಾಜೆಕ್ಟ್ ಆಗಿಯೇ ಆಗುತ್ತದೆ ಎನ್ನುವ ನಂಬಿಕೆ ಇದೆ. ಹಾಗೂ ಪ್ರಾಜೆಕ್ಟ್ ಆದ ಮೇಲೆ ಅದು ರಿಲೀಸ್ ಆದ ಮೇಲೆ ಶುರು ಆಗೋ ಹಬ್ಬ ಇದೆಯಲ್ಲಾ ಅದರ ಬಗ್ಗೆ ಯೋಚನೆ ಮಾಡುತ್ತೇವೆ ನಾವು. ಕೆಟ್ಟದನ್ನು ಯೋಚನೆ ಕೂಡ ಮಾಡಲ್ಲ ನಾನು ಎಂದು ನಟ ವಿನಯ್ ಗೌಡ ಹೇಳಿದ್ದಾರೆ.












Click it and Unblock the Notifications