MUDA Case: ಸಿಎಂ ಸಿದ್ದರಾಮಯ್ಯ ಪತ್ನಿ, ಬೈರತಿ ಸುರೇಶ್‌ಗೆ ರಿಲೀಫ್: ಇಡಿ ತನಿಖೆ ರದ್ದು
ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ಗೆ ದೊಡ್ಡ ರಿಲೀಫ್ ಸಿಕ್ಕಿದೆ. ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿರುವ ಇಸಿಆರ್ ರದ್ದುಗೊಳಿಸಿರುವ ಹೈಕೋರ್ಟ್, ವಿಚಾರಣೆಗೆ ಹಾಜರಾಗಲು ಇಬ್ಬರಿಗೂ ನೀಡಿದ್ದ ಸಮನ್ಸ್ ಅನ್ನು ಕೂಡ ವಜಾಗೊಳಿಸಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾ. ನಾಗಪ್ರಸನ್ನ ಪೀಠದಿಂದ ಈ ಮಹತ್ವದ ಆದೇಶ ನೀಡಿದ್ದು, ಪ್ರಕರಣದಲ್ಲಿ ಸಿಲುಕಿದ್ದ ಸಿಎಂ ಸಿದ್ದರಾಮಯ್ಯ ಪಾರ್ವತಿ ಮತ್ತು ಸಚಿವ ಬೈರತಿ ಸುರೇಶ್ ಅವರಿಗೆ ನಿರಾಳವಾಗಿದೆ.

ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ನೀಡಿದ್ದ ನೋಟಿಸ್ ಪ್ರಶ್ನೆ ಮಾಡಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮತ್ತು ಸಚಿವ ಬೈರತಿ ಸುರೇಶ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪಾರ್ವತಿ ಪರವಾಗಿ ಹಿರಿಯ ವಕೀಲ ಸಂದೇಶ ಚೌಟ ವಾದಿಸಿದ್ದರೆ ಬೈರತಿ ಸುರೇಶ್ ಪರವಾಗಿ ಹಿರಿಯ ವಕೀಲರಾದ ಸಿವಿ ನಾಗೇಶ್ ವಾದ ಮಂಡಿಸಿದ್ದರು.
ಏನಿದು ಮುಡಾ ಪ್ರಕರಣ?
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸೈಟು ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತ ಪೊಲೀಸರು ತನಿಖೆ ಮಾಡುತ್ತಿದ್ದರು. ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಸೇರಿದಂತೆ ಹಲವರನ್ನು ಪ್ರಕರಣದ ಪ್ರಮುಖ ಆರೋಪಿಗಳನ್ನಾಗಿ ಮಾಡಲಾಗಿತ್ತು. ಇದೇ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಪಟ್ಟಂತೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಮುಂದಾಗಿತ್ತು.
ವಿಚಾರಣೆಗೆ ಹಾಜರಾಗುವಂತೆ ಮುಖ್ಯಮಂತ್ರಿ ಸಿದ್ದರಾಮ್ಯಯನವರ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಸೇರಿದಂತೆ ಇತರರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿತ್ತು. ಇದನ್ನು ಪ್ರಶ್ನೆ ಮಾಡಿ ಪಾರ್ವತಿ ಹಾಗೂ ಭೈರತಿ ಸುರೇಶ್ ಪ್ರತ್ಯೇಕವಾಗಿಯೇ ರಾಜ್ಯ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಇಡಿ ನೀಡಿದ್ದ ಸಮನ್ಸ್‌ಗೆ ತಡೆಯಾಜ್ಞೆ ನೀಡಿತ್ತು, ಈಗ ಸಮನ್ಸ್ ಅನ್ನೇ ರದ್ದು ಮಾಡುವ ಮೂಲಕ ಇಬ್ಬರಿಗೂ ದೊಡ್ಡ ರಿಲೀಫ್ ನೀಡಿದೆ.
ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ತಮ್ಮ ಮುಡಾ ಪ್ರಕರಣದ ಬಗ್ಗೆ ಲೋಕಾಯುಕ್ತ ತನಿಖೆ ಆರಂಭಿಸಿದ ಬಳಿಕ ಮುಡಾ ತಮಗೆ ನೀಡಿದ್ದ 14 ಸೈಟುಗಳನ್ನು ವಾಪಸ್ ಮಾಡಿದ್ದಾರೆ. ಜಾರಿ ನಿರ್ದೇಶನಾಲಯ 1708 ಸೈಟ್‌ಗಳ ಬಗ್ಗೆ ತನಿಖೆ ಮಾಡುತ್ತಿದೆ. ಭೂಸ್ವಾಧೀನ, ಭೂಪರಿವರ್ತನೆ ಅಕ್ರಮ ಹಣ ವರ್ಗಾವಣೆ ಬಗ್ಗೆ ತನಿಖೆ ಮಾಡುತ್ತಿದೆ.












Click it and Unblock the Notifications