ಶಾಸಕರ ಮನವೊಲಿಕೆ: ಆಖಾಡಕ್ಕಿಳಿದ ಭವಾನಿ ರೇವಣ್ಣ
ಬೆಂಗಳೂರು, ಜುಲೈ 8: ಅತೃಪ್ತ ಮತ್ತು ರಾಜೀನಾಮೆ ನೀಡಿದ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರ ಮನವೊಲಿಕೆ ಕಾರ್ಯದಲ್ಲಿ ಎರಡೂ ಪಕ್ಷದ ಹಿರಿಯ ಮುಖಂಡರು ಮುಂದಾಗಿದ್ದು, ಸತತ ಸಭೆಗಳನ್ನು ನಡೆಸುತ್ತಿದ್ದಾರೆ. ತಾಜಾ ಮಾಹಿತಿಯ ಪ್ರಕಾರ, ಯಾವುದೂ ಸಮ್ಮಿಶ್ರ ಸರಕಾರಕ್ಕೆ ಪೂರಕವಾಗಿ ನಡೆಯುತ್ತಿಲ್ಲ.
ರಾಜೀನಾಮೆ ನೀಡಿದವರ ಪಟ್ಟಿಯಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಅತ್ಯಂತ ಶಾಕ್ ನೀಡಿರುವುದು ಮಹಾಲಕ್ಷ್ಮೀ ಲೇಔಟ್ ಶಾಸಕ ಕೆ ಗೋಪಾಲಯ್ಯ ಅವರ ರಾಜೀನಾಮೆ. ಎರಡು ದಿನಗಳ ಕೆಳಗೆ ಉಪಾಧ್ಯಕ್ಷ ಹುದ್ದೆಯನ್ನು ಕೊಟ್ಟಿದ್ದರೂ, ಗೋಪಾಲಯ್ಯ ರಾಜೀನಾಮೆ ನೀಡಿರುವುದು ಗೌಡ್ರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಉಪಾಧ್ಯಕ್ಷ ಹುದ್ದೆ ಕೊಟ್ಟ ಎರಡೇ ದಿನದಲ್ಲಿ ರಾಜೀನಾಮೆ: ಗೌಡ್ರಿಗೆ ಇದೆಂಥಾ ಮುಖಭಂಗ
ಸರಕಾರ ಉಳಿಸಿಕೊಳ್ಳಲು ಈಗ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರ ಪತ್ನಿ ಭವಾನಿ ಮುಂದಾಗಿದ್ದಾರೆ. ಕಳೆದ ರಾತ್ರಿ, ರಾಜೀನಾಮೆ ನೀಡಿದ ಗೋಪಾಲಯ್ಯ ಅವರ ನಿವಾಸಕ್ಕೆ ಭವಾನಿ ತೆರಳಿದ್ದರು ಎನ್ನುವ ಮಾಹಿತಿಯಿದೆ.
ಗೋಪಾಲಯ್ಯ ಅವರ ಪತ್ನಿ ಹೇಮಲತಾ ಮತ್ತು ಅವರ ಪುತ್ರನ ಜೊತೆಗೆ ಭವಾನಿ ರೇವಣ್ಣ ಮಾತುಕತೆ ನಡೆಸಿದ್ದಾರೆ. ಗೋಪಾಲಯ್ಯ ಅವರನ್ನು ಹೇಗಾದರೂ ಮನವೊಲಿಸುವಂತೆ, ಅವರ ಪತ್ನಿಯಲ್ಲಿ ಭವಾನಿ ಮನವಿ ಮಾಡಿದ್ದಾರೆ.
ಹೇಮಲತಾ ಗೋಪಾಲಯ್ಯ ಬಿಬಿಎಂಪಿಯ ಜೆಡಿಎಸ್ ಕಾರ್ಪೋರೇಟರ್ ಆಗಿದ್ದು, ಪಾಲಿಕೆಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷೆಯಾಗಿದ್ದಾರೆ. ಭವಾನಿ ಜೊತೆಗಿನ ಮಾತುಕತೆಯಲ್ಲಿ ನಮ್ಮ ಪ್ರಯತ್ನ ನಾವು ಮಾಡುತ್ತೇವೆ ಎಂದು ಹೇಮಲತಾ ಹೇಳಿದ್ದಾರೆಂದು ತಿಳಿದು ಬಂದಿದೆ.
ಅಂದು ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡಿದ್ದರೆ ಇಂದು ಮುಖಭಂಗ ಆಗುತ್ತಿತ್ತೇ?
ಕಳೆದ ವಾರ, ಜೆಡಿಎಸ್ ರಾಜ್ಯಾಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳ ಹುದ್ದೆಗೆ ಹೊಸಬರನ್ನು ದೇವೇಗೌಡ್ರು ನೇಮಿಸಿದ್ದರು. ಅದರಲ್ಲಿ, ಶಾಸಕ ಕೆ ಗೋಪಾಲಯ್ಯ ಕೂಡಾ ಒಬ್ಬರಾಗಿದ್ದರು.